
ಬೆಂಗಳೂರಿನ ಕೆಎಸ್ಸಿಎ ಮೈದಾನದಲ್ಲಿ ನಡೆದ ಕರ್ನಾಟಕ ಹಾಗೂ ಮುಂಬೈ (Karnataka vs Mumbai) ನಡುವಿನ ಕೂಚ್ ಬೆಹಾರ್ ಟ್ರೋಫಿಯ (Cooch Behar Trophy) ಫೈನಲ್ ಪಂದ್ಯದಲ್ಲಿ ಕರ್ನಾಟಕದ ಆರಂಭಿಕ ಆಟಗಾರ ಪ್ರಖರ್ ಚತುರ್ವೇದಿ (Prakhar Chaturvedi) ಏಕಾಂಗಿಯಾಗಿ 400 ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಈ ಟೂರ್ನಿಯ ಇತಿಹಾಸದಲ್ಲಿ ಇಲ್ಲಿಯವರೆಗೆ ಆಡಿದ ಫೈನಲ್ ಪಂದ್ಯದಲ್ಲಿ 400ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಮೊದಲ ಇನ್ನಿಂಗ್ಸ್ನಲ್ಲಿ 380 ರನ್ ಕಲೆಹಾಕಿತು. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಪ್ರಖರ್ ಚತುರ್ವೇದಿ ಅವರ 404 ರನ್ ಹಾಗೂ ಹರ್ಷಿಲ್ ಧರ್ಮನಿ ಅವರ 169 ರನ್ಗಳ ಆಧಾರದ ಮೇಲೆ 8 ವಿಕೆಟ್ ನಷ್ಟಕ್ಕೆ 890 ರನ್ ಕಲೆಹಾಕಿತು. ಅಂತಿಮವಾಗಿ ಫೈನಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದ್ದು, ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಕರ್ನಾಟಕ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲ ಇನ್ನಿಂಗ್ಸ್ ಆರಂಭಿಸಿದ ಮುಂಬೈ ತಂಡದ ಪರ ಆರಂಭಿಕ ಆಯುಷ್ ಮ್ಹಾತ್ರೆ 145 ರನ್ಗಳ ಇನ್ನಿಂಗ್ಸ್ ಆಡಿದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನೂತನ್ 44 ರನ್ಗಳ ಕೊಡುಗೆ ನೀಡಿದರು. ಹಾಗೆಯೇ ಆರನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ ಆಯುಷ್ ಸಚಿನ್ ವರ್ತಕ್ 73 ರನ್ಗಳ ಇನ್ನಿಂಗ್ಸ್ ಆಡಿದರು. ಈ ಮೂವರಲ್ಲದೆ ತಂಡದ ಇತರರ ಬ್ಯಾಟಿಂಗ್ ಆಧಾರದ ಮೇಲೆ ಮುಂಬೈ ತಂಡ 380 ರನ್ಗಳಿಗೆ ಆಲೌಟ್ ಆಗಿ ಮೊದಲ ಇನ್ನಿಂಗ್ಸ್ ಮುಗಿಸಿತು.
380 ರನ್ಗಳಿಗೆ ಮುಂಬೈ ತಂಡವನ್ನು ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಪರ ಆರಂಭಿಕರಾಗಿ ಕಣಕ್ಕಿಳಿದ ಪ್ರಖರ್ ಕೊನೆಯವರೆಗೂ ಅಜೇಯರಾಗಿ ಉಳಿದು ಬರೋಬ್ಬರಿ 404 ರನ್ ಕಲೆಹಾಕಿದರು. ಇವರೊಂದಿಗೆ ಮತ್ತೊಬ್ಬ ಆರಂಭಿಕನಾಗಿ ಕಣಕ್ಕಿಳಿದಿದ್ದ ಕಾರ್ತಿಕ್ ಎಸ್ ಯು ಕೂಡ 50 ರನ್ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರು ಮೊದಲ ವಿಕೆಟ್ಗೆ 109 ರನ್ಗಳ ಜೊತೆಯಾಟ ಹಂಚಿಕೊಂಡರು. ಮೊದಲ ವಿಕೆಟ್ ಪತನದ ಬಳಿಕ ಜೊತೆಯಾದ ಪ್ರಖರ್ ಹಾಗೂ ಹರ್ಷಿಲ್ ಧರ್ಮನಿ ತಲಾ ಶತಕ ಸಿಡಿಸುವ ಮೂಲಕ ತಂಡವನ್ನು 399 ರನ್ಗಳಿಗೆ ಕೊಂಡೊಯ್ದರು. ಈ ವೇಳೆ 169 ರನ್ ಕಲೆಹಾಕಿದ್ದ ಹರ್ಷಿಲ್ ವಿಕೆಟ್ ಪತನವಾಯಿತು.
ಹರ್ಷಿಲ್ ನಂತರ ಬಂದ ಕಾರ್ತಿಕೇಯ ಕೂಡ ಪ್ರಖರ್ ಜೊತೆ ಅದ್ಭುತ ಜೊತೆಯಾಟ ನಡೆಸಿದರು. ಹಾಗೆಯೇ ವೈಯಕ್ತಿಕವಾಗಿ 72 ರನ್ಗಳ ಕೊಡುಗೆ ಸಹ ನೀಡಿದರು. ಇನ್ನು 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ರಾಜ್ 51 ರನ್ ಹಾಗೂ 10ನೇ ಕ್ರಮಾಂಕದಲ್ಲಿ ಆಡಿದ ಸಮರ್ಥ್ ಅಜೇಯ 55 ರನ್ ಕಲೆಹಾಕುವ ಮೂಲಕ ಪ್ರಖರ್ಗೆ ಉತ್ತಮ ಸಾಥ್ ನೀಡಿದರು. ಹೀಗಾಗಿ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ ದಾಖಲೆಯ 890 ರನ್ ಕಲೆಹಾಕಿತು.
ಈ ಪಂದ್ಯದಲ್ಲಿ ಪ್ರಖರ್ ಚತುರ್ವೇದಿ 638 ಎಸೆತಗಳನ್ನು ಅಂದರೆ ಬರೋಬ್ಬರಿ 106 ಓವರ್ಗಳನ್ನುಎದುರಿಸಿ 46 ಬೌಂಡರಿ ಹಾಗೂ 3 ಸಿಕ್ಸರ್ಗ ಒಳಗೊಂಡಂತೆ 404 ರನ್ ಗಳಿಸಿದರು. ಕರ್ನಾಟಕದ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಪ್ರಖರ್ ಚತುರ್ವೇದಿ ಇಡೀ ಇನ್ನಿಂಗ್ಸ್ ಆಡಿದಲ್ಲದೆ ಕೊನೆಯವರೆಗೂ ಅಜೇಯರಾಗಿ ಉಳಿದರು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:08 pm, Mon, 15 January 24