CPL 2022: 5 ಓವರ್​ಗಳಲ್ಲಿ 105 ರನ್​: ಬ್ರೂಕ್ಸ್ ಸ್ಪೋಟಕ ಶತಕ

| Updated By: ಝಾಹಿರ್ ಯೂಸುಫ್

Updated on: Sep 29, 2022 | 2:32 PM

CPL 2022 Finals: ಶನಿವಾರ ನಡೆಯಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ 2022 ರ ಫೈನಲ್ ಪಂದ್ಯದಲ್ಲಿ ಜಮೈಕಾ ತಲ್ಲವಾಸ್ ಹಾಗೂ ಬಾರ್ಬಡೋಸ್ ರಾಯಲ್ಸ್​ ಮುಖಾಮುಖಿಯಾಗಲಿದೆ.

CPL 2022: 5 ಓವರ್​ಗಳಲ್ಲಿ 105 ರನ್​: ಬ್ರೂಕ್ಸ್ ಸ್ಪೋಟಕ ಶತಕ
Shamarh Brooks
Follow us on

ಕೆರಿಬಿಯನ್ ಪ್ರೀಮಿಯರ್ ಲೀಗ್​ನ (CPL 2022) 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಜಮೈಕಾ ತಲ್ಲವಾಸ್ ತಂಡವು ಫೈನಲ್ ಪ್ರವೇಶಿಸಿದೆ. ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಜಮೈಕಾ ತಲ್ಲವಾಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಗಯಾನಾ ತಂಡದ ನಾಯಕ ಶಿಮ್ರಾನ್ ಹೆಟ್ಮೆಯರ್ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲಿಂಗ್ ದಾಳಿ ಸಂಘಟಿಸಿದ ಅಮೆಜಾನ್ ವಾರಿಯರ್ಸ್ ಬೌಲರ್​ಗಳು ಕೇವಲ 16 ರನ್​ಗಳಿಗೆ 2 ವಿಕೆಟ್ ಉರುಳಿಸಿ ಆರಂಭಿಕ ಆಘಾತ ನೀಡಿದರು. ಈ ಹಂತದಲ್ಲಿ ಕಣಕ್ಕಿಳಿದ ಶಮರ್ ಬ್ರೂಕ್ಸ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬ್ರೂಕ್ಸ್ ಎದುರಾಳಿ ಬೌಲರ್​ಗಳನ್ನು ಮನಸೋ ಇಚ್ಛೆ ದಂಡಿಸಿದರು. ಪರಿಣಾಮ ಪ್ರೊವಿಡೆನ್ಸ್ ಮೈದಾನದ ಮೂಲೆ ಮೂಲೆಗೆ ಸಿಕ್ಸ್​-ಫೋರ್​ಗಳ ಸುರಿಮಳೆಯಾಯಿತು. ಬ್ರೂಕ್ಸ್ ಅಬ್ಬರವನ್ನು ತಡೆಯಲು ಸಾಧ್ಯವಾಗದ ಗಯಾನಾ ಅಮೆಜಾನ್ ವಾರಿಯರ್ಸ್ ಬೌಲರ್​ಗಳು ಲಯ ತಪ್ಪಿದರು.

ಇದನ್ನೂ ಓದಿ
2007ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದರ ಸಂಪೂರ್ಣ ಲಾಭ ಪಡೆದ ಬ್ರೂಕ್ಸ್ ಹಾಗೂ ಇಮಾದ್ ವಾಸಿಂ ಅಂತಿಮ ಓವರ್​ಗಳ ವೇಳೆ ಅಕ್ಷರಶಃ ಅಬ್ಬರಿಸಿದರು. 15.1 ಓವರ್​ ವೇಳೆ 123 ರನ್​ಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಜಮೈಕಾ ತಲ್ಲವಾಸ್ ಪಂದ್ಯ ಮುಗಿಸಿದಾಗ ತಂಡದ ಮೊತ್ತ 226 ಕ್ಕೆ ಬಂದು ನಿಂತಿತು. ಅಂದರೆ ಕೊನೆಯ 5 ಓವರ್​ಗಳಲ್ಲಿ ಬರೋಬ್ಬರಿ 105 ರನ್​ಗಳನ್ನು ಚಚ್ಚಿದರು.

ಕೇವಲ 52 ಎಸೆತಗಳನ್ನು ಎದುರಿಸಿದ ಬ್ರೂಕ್ಸ್ 8 ಸಿಕ್ಸ್ ಹಾಗೂ 7 ಫೋರ್​ನೊಂದಿಗೆ ಅಜೇಯ 109 ರನ್ ಬಾರಿಸಿದರೆ, ಇಮಾದ್ ವಾಸಿಂ ಕೇವಲ 15 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 41 ರನ್ ಸಿಡಿಸಿದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ ಜಮೈಕಾ ತಲ್ಲವಾಸ್ ತಂಡವು 4 ವಿಕೆಟ್ ನಷ್ಟಕ್ಕೆ 226 ರನ್​ ಕಲೆಹಾಕಿತು.

227 ರನ್​ಗಳ ಬೃಹತ್ ಟಾರ್ಗೆಟ್ ಪಡೆದ ಗಯಾನಾ ಅಮೆಜಾನ್ ವಾರಿಯರ್ಸ್ ಕೀಮೊ ಪೌಲ್ (56) ಅರ್ಧಶತಕ ಬಾರಿಸಿದರೆ, ಶಾಯ್ ಹೋಪ್ 13 ಎಸೆತಗಳಲ್ಲಿ 31 ರನ್ ಕಲೆಹಾಕಿದರು. ಇದಾಗ್ಯೂ ಉಳಿದ ಬ್ಯಾಟ್ಸ್​ಮನ್​ಗಳಿಂದ ಬೃಹತ್ ಮೊತ್ತದ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 189 ರನ್​ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿತು. ಇದರೊಂದಿಗೆ ಜಮೈಕಾ ತಲ್ಲವಾಸ್ ತಂಡವು 37 ರನ್​ಗಳಿಂದ ಭರ್ಜರಿ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.

ಶನಿವಾರ ನಡೆಯಲಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ 2022 ರ ಫೈನಲ್ ಪಂದ್ಯದಲ್ಲಿ ಜಮೈಕಾ ತಲ್ಲವಾಸ್ ಹಾಗೂ ಬಾರ್ಬಡೋಸ್ ರಾಯಲ್ಸ್​ ಮುಖಾಮುಖಿಯಾಗಲಿದೆ.