CPL 2024: ಶೂನ್ಯಕ್ಕೆ 3 ವಿಕೆಟ್: ಮೂವರೂ ಸಿಲ್ವರ್ ಡಕ್
CPL 2024: ಕೆರಿಬಿಯನ್ ಪ್ರೀಮಿಯರ್ ಲೀಗ್ನ 9ನೇ ಪಂದ್ಯದಲ್ಲಿ ಬಾರ್ಬಡೋಸ್ ರಾಯಲ್ಸ್ ತಂಡವು ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು. ಈ ಗುರಿಯನ್ನು 19.5 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಬಾರ್ಬಡೋಸ್ ರಾಯಲ್ಸ್ ತಂಡವು 2 ವಿಕೆಟ್ಗಳ ರೋಚಕ ಗೆಲುವು ದಾಖಲಿಸಿದೆ.
ಶೂನ್ಯಕ್ಕೆ ಮೂರು ವಿಕೆಟ್… ಇಂತಹದೊಂದು ಅಪರೂಪದ ಸ್ಕೋರ್ ಬೋರ್ಡ್ಗೆ ಸಾಕ್ಷಿಯಾಗಿದ್ದು ಕೆರಿಬಿಯನ್ ಪ್ರೀಮಿಯರ್ ಲೀಗ್. ಈ ಲೀಗ್ನ 9ನೇ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡದ ಮೂವರು ಅಗ್ರಗಣ್ಯ ಬ್ಯಾಟರ್ಗಳು ಸೊನ್ನೆ ಸುತ್ತಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾರ್ಬಡೋಸ್ ರಾಯಲ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಪರ ಎವಿನ್ ಲೂಯಿಸ್ ಹಾಗೂ ಆ್ಯಂಡ್ರೆ ಫ್ಲೆಚರ್ ಆರಂಭಿಕರಾಗಿ ಕಣಕ್ಕಿಳಿದಿದ್ದರು.
ಇನಿಂಗ್ಸ್ನ ಮೊದಲ ಓವರ್ ಎಸೆದ ಸ್ಪಿನ್ನರ್ ಮಹೀಶ್ ತೀಕ್ಷಣ 2ನೇ ಎಸೆತದಲ್ಲಿ ಎವಿನ್ ಲೂಯಿಸ್ (0) ಅವರನ್ನು ಎಲ್ಬಿ ಬಲೆಗೆ ಕೆಡವಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೈಲ್ ಮೇಯರ್ಸ್ (0) 4ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರ ನಡೆದರು.
ಮೊದಲ ಓವರ್ನಲ್ಲಿ ಯಾವುದೇ ರನ್ ಗಳಿಸದೇ 2 ವಿಕೆಟ್ ಕಳೆದುಕೊಂಡು ಸಂಕಷ್ಟ ಸಿಲುಕಿದ್ದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡಕ್ಕೆ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಮೂರನೇ ಆಘಾತ ನೀಡಿದರು. ನಾಯಕ ಆ್ಯಂಡ್ರೆ ಫ್ಲೆಚರ್ನ (0) ಎಲ್ಬಿಡಬ್ಲ್ಯೂ ಮಾಡಿ ಮೂರನೇ ಯಶಸ್ಸು ತಂದುಕೊಟ್ಟರು. ಅಲ್ಲಿಗೆ ಸ್ಕೋರ್ ಬೋರ್ಡ್ 0/3 ಆಯಿತು.
ವಿಶೇಷ ಎಂದರೆ ಹೀಗೆ ಶೂನ್ಯಕ್ಕೆ ಔಟಾದ ಮೂವರು ಬ್ಯಾಟರ್ಗಳು 2ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದರು. ಅಂದರೆ ಮೂವರು ದಾಂಡಿಗರು ಸ್ವಿಲರ್ ಡಕ್ ಔಟ್ ಆಗಿದ್ದರು.
ಕ್ರಿಕೆಟ್ನಲ್ಲಿ ಮೊದಲ ಎಸೆತದಲ್ಲಿ ಔಟಾದರೆ ಗೋಲ್ಡನ್ ಡಕ್ ಎಂದು ಕರೆಯಲಾಗುತ್ತದೆ. ಹಾಗೆಯೇ 2ನೇ ಎಸೆತದಲ್ಲಿ ಶೂನ್ಯಕ್ಕೆ ಔಟಾದರೆ ಅದನ್ನು ಸಿಲ್ವರ್ ಡಕ್ ಔಟ್ ಎನ್ನಲಾಗುತ್ತದೆ. ಅದರಂತೆ ಇದೀಗ ಕೆರಿಬಿಯನ್ ಪ್ರೀಮಿಯರ್ ಲೀಗ್ ಶೂನ್ಯಕ್ಕೆ ಮೂವರ ಸಿಲ್ವರ್ ಡಕ್ ಔಟ್ಗೆ ಸಾಕ್ಷಿಯಾಗಿದೆ.
— Cricket Cricket (@cricket543210) September 6, 2024
153 ರನ್ ಪೇರಿಸಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್:
ಟಾಪ್-3 ಬ್ಯಾಟರ್ಗಳು ಶೂನ್ಯಕ್ಕೆ ಔಟಾದರೂ ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವು 153 ರನ್ ಕಲೆಹಾಕಿದ್ದು ವಿಶೇಷ. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೈಕ್ ಲೂಯಿಸ್ 30 ರನ್ ಬಾರಿಸಿದರೆ, ವನಿಂದು ಹಸರಂಗ 40 ರನ್ಗಳ ಕೊಡುಗೆ ನೀಡಿದರು.
ಇನ್ನು ಅಂತಿಮ ಹಂತದಲ್ಲಿ ರಿಯಾನ್ ಜೋನ್ 14 ಎಸೆತಗಳಲ್ಲಿ 29 ರನ್ ಚಚ್ಚಿದರು. ಈ ಮೂಲಕ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು. 154 ರನ್ಗಳ ಗುರಿಯನ್ನು ಬೆನ್ನತ್ತಿದ ಬಾರ್ಬಡೋಸ್ ರಾಯಲ್ಸ್ ತಂಡವು 19. 5 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಪ್ಲೇಯಿಂಗ್ 11: ಎವಿನ್ ಲೂಯಿಸ್, ಆಂಡ್ರೆ ಫ್ಲೆಚರ್ (ನಾಯಕ) , ಕೈಲ್ ಮೇಯರ್ಸ್ , ಶೆರ್ಫೇನ್ ರುದರ್ಫೋರ್ಡ್ , ಜೋಶ್ ಕ್ಲಾರ್ಕ್ಸನ್ , ಮೈಕೈಲ್ ಲೂಯಿಸ್ , ರಿಯಾನ್ ಜೋನ್ , ವನಿಂದು ಹಸರಂಗ , ಮೊಹಮ್ಮದ್ ಮೊಹ್ಸಿನ್ , ವೀರಸಮ್ಮಿ ಪರ್ಮಾಲ್ , ಅನ್ರಿಕ್ ನೋಕಿಯಾ.
ಇದನ್ನೂ ಓದಿ: ಒಂದೇ ವರ್ಷ ಟೀಮ್ ಇಂಡಿಯಾದ 8 ಆಟಗಾರರು ನಿವೃತ್ತಿ..!
ಬಾರ್ಬಡೋಸ್ ರಾಯಲ್ಸ್ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ , ರಹಕೀಮ್ ಕಾರ್ನ್‌ವಾಲ್ , ಶಮರ್ ಬ್ರೂಕ್ಸ್ , ಕಡೀಮ್ ಅಲೀನ್ , ರೋವ್‌ಮನ್ ಪೊವೆಲ್ (ನಾಯಕ) , ಜೇಸನ್ ಹೋಲ್ಡರ್ , ದುನಿತ್ ವೆಲ್ಲಲಾಗೆ , ಮಹೀಶ್ ತೀಕ್ಷಣ , ನವೀನ್-ಉಲ್-ಹಕ್ , ಓಬೇದ್ ಮೆಕಾಯ್ , ನೈಮ್ ಯಂಗ್.