Irani Cup 2024: ಇರಾನಿ ಕಪ್ ಪಂದ್ಯ ಮುಂಬೈನಿಂದ ಶಿಫ್ಟ್

Irani Cup 2024: ಈ ಬಾರಿಯ ಇರಾನಿ ಕಪ್ ಪಂದ್ಯವು ಅಕ್ಟೋಬರ್ 1 ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿದೆ. ಈ ಮೊದಲು ಈ ಪಂದ್ಯಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂ ನಿಗದಿಯಾಗಿತ್ತು. ಆದರೀಗ ಪಂದ್ಯವನ್ನು ಅಹಮದಾಬಾದ್ ಅಥವಾ ಲಕ್ನೋಗೆ ಸ್ಥಳಾಂತರಿಸಲು ಬಿಸಿಸಿಐ ಮುಂದಾಗಿದೆ. ಅದರಂತೆ ಇರಾನಿ ಕಪ್ ಪಂದ್ಯವು ನರೇಂದ್ರ ಮೋದಿ ಸ್ಟೇಡಿಯಂ ಅಥವಾ ಏಕಾನ ಸ್ಟೇಡಿಯಂನಲ್ಲಿ ನಡೆಯುವ ಸಾಧ್ಯತೆಯಿದೆ.

Irani Cup 2024: ಇರಾನಿ ಕಪ್ ಪಂದ್ಯ ಮುಂಬೈನಿಂದ ಶಿಫ್ಟ್
ಸಾಂದರ್ಭಿಕ ಚಿತ್ರ
Follow us
|

Updated on:Sep 07, 2024 | 9:56 AM

ದೇಶೀಯ ಅಂಗಳದ ಮದಗಜಗಳ ಕದನ ಎಂದೇ ಬಿಂಬಿತವಾಗಿರುವ ಇರಾನಿ ಕಪ್ ಪಂದ್ಯವನ್ನು ಮುಂಬೈನಿಂದ ಸ್ಥಳಾಂತರಿಸಲು ಬಿಸಿಸಿಐ ನಿರ್ಧರಿಸಿದೆ. ಪ್ರತಿಕೂಲ ಹವಾಮಾನದ ಕಾರಣದಿಂದ ಈ ಪಂದ್ಯವನ್ನು ವಾಂಖೆಡೆ ಸ್ಟೇಡಿಯಂ ಬದಲು ಇತರೆ ನಗರದ ಕ್ರೀಡಾಂಗಣದಲ್ಲಿ ಆಯೋಜಿಸಲು ಚಿಂತಿಸಲಾಗಿದೆ. ಅದರಂತೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಅಥವಾ ಲಕ್ನೋದ ಏಕಾನ ಕ್ರೀಡಾಂಗಣದಲ್ಲಿ ಇರಾನಿ ಕಪ್ ಪಂದ್ಯ ನಡೆಯುವ ಸಾಧ್ಯತೆಯಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2024-25ರ ದೇಶೀಯ ಕ್ರಿಕೆಟ್ ವೇಳಾಪಟ್ಟಿಯ ಪ್ರಕಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇರಾನಿ ಕಪ್ ಪಂದ್ಯ ನಡೆಯಬೇಕಿತ್ತು. ಆದರೆ ಅಕ್ಟೋಬರ್ ತಿಂಗಳಲ್ಲಿ ನಗರವು ವಿಸ್ತೃತ ಮಾನ್ಸೂನ್ ಅವಧಿಯನ್ನು ಎದುರಿಸುತ್ತಿರುವುದರಿಂದ, ಐದು ದಿನಗಳ ನಿರ್ಣಾಯಕ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಪಂದ್ಯವನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

ಇರಾನಿ ಕಪ್ ಪಂದ್ಯದಲ್ಲಿ ಹಾಲಿ ರಣಜಿ ಟ್ರೋಫಿ ಚಾಂಪಿಯನ್ಸ್ ಹಾಗೂ ಶೇಷ ಭಾರತ ತಂಡ (ರೆಸ್ಟ್ ಆಫ್ ಇಂಡಿಯಾ) ಮುಖಾಮುಖಿಯಾಗಲಿದೆ. ಕಳೆದ ಬಾರಿ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡವು ವಿದರ್ಭ ತಂಡವನ್ನು 169 ರನ್‌ಗಳಿಂದ ಸೋಲಿಸಿ 42ನೇ ರಣಜಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಈ ಬಾರಿಯ ಇರಾನಿ ಕಪ್ ಪಂದ್ಯದಲ್ಲಿ ಮುಂಬೈ ಕಣಕ್ಕಿಳಿಯಲಿದೆ.

ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ  ಚಾಂಪಿಯನ್ ರಾಜ್ಯವನ್ನು ಹೊರತುಪಡಿಸಿ ಇತರೆ ರಾಜ್ಯಗಳ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಅಕ್ಟೋಬರ್ 1 ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿರುವ ಇರಾನಿ ಕಪ್ ಪಂದ್ಯದಲ್ಲಿ ಮುಂಬೈ ಹಾಗೂ ರೆಸ್ಟ್ ಆಫ್ ಇಂಡಿಯಾ ಸೆಣಸಲಿದೆ.

ಏನಿದು ಇರಾನಿ ಕಪ್?

ಝಡ್​.ಆರ್​ ಇರಾನಿ ಅಥವಾ ಝಲ್ ಇರಾನಿ, ಇವರು ಬಿಸಿಸಿಐನ ಮಾಜಿ ಅಧ್ಯಕ್ಷರು. ಲಂಡನ್‌ನಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ಅಧ್ಯಯನ ಮಾಡಿದ್ದ ಇರಾನಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ದೆಹಲಿಯ ರೋಶನಾರಾ ಕ್ಲಬ್ ಮತ್ತು ಮುಂಬೈನ ಪಾರ್ಸಿ ಜಿಮ್ಖಾನಾ ಕ್ಲಬ್ ಪರ ಕ್ರಿಕೆಟ್ ಆಡುತ್ತಿದ್ದರು. ಅಷ್ಟೇ ಅಲ್ಲದೆ 1928-29 ರಿಂದ 1945-46 ಮತ್ತು 1948-49 ರಿಂದ 1961-62 ಅವರು ಭಾರತ ಕ್ರಿಕೆಟ್ ಮಂಡಳಿಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು.

1966 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಇರಾನಿ ಅವರು ಭಾರತೀಯ ಕ್ರಿಕೆಟ್​ ಅನ್ನು ಪ್ರಗತಿಪಥದತ್ತ ಸಾಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಮೂಲಕ ಸ್ವಾತಂತ್ರ ಭಾರತದಲ್ಲಿ ಕ್ರಿಕೆಟ್ ಅನ್ನು ಉತ್ತೇಜಿಸುವಲ್ಲಿ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಅವರ ಸ್ಮರಾರ್ಥ ಇರಾನಿ ಕಪ್​ ಅನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ: ಒಂದೇ ವರ್ಷ ಟೀಮ್ ಇಂಡಿಯಾದ 8 ಆಟಗಾರರು ನಿವೃತ್ತಿ..!

ವಿಶೇಷ ಎಂದರೆ ಇರಾನಿ ಕಪ್​ನಲ್ಲಿ ಹಾಲಿ ರಣಜಿ ಚಾಂಪಿಯನ್ ತಂಡ ಹಾಗೂ ಶೇಷ ಭಾರತ ತಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತದೆ. ಅಂದರೆ ಇಲ್ಲಿ ಶೇಷ ಭಾರತ ತಂಡದಲ್ಲಿ ರಣಜಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡುತ್ತದೆ. ಈ ಬಾರಿ ದುಲೀಪ್ ಟ್ರೋಫಿ ನಡೆಯುತ್ತಿರುವುದರಿಂದ ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಬಹುದು.

Published On - 9:54 am, Sat, 7 September 24