
ಭಾರತ ಮತ್ತು ಪಾಕಿಸ್ತಾನ್ ನಡುವಣ ಯುದ್ಧ ಭೀತಿಯಿಂದಾಗಿ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಇಂದಿನಿಂದ (ಮೆ.17) ಮತ್ತೆ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಗಳ ಮೂಲಕ ಉಭಯ ತಂಡಗಳ ಪ್ಲೇಆಫ್ ಭವಿಷ್ಯ ನಿರ್ಧಾರವಾಗಲಿದೆ. ಇತ್ತ ಮೊದಲ ಪಂದ್ಯದ ಆರಂಭಕ್ಕೂ ಮುನ್ನ ಅತ್ತ ಕೊಲ್ಕತ್ತಾದಲ್ಲಿ ಕ್ರಿಕೆಟ್ ಪ್ರೇಮಿಗಳು ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಅದು ಸಹ ಬಿಸಿಸಿಐ ನಿರ್ಧಾರದ ವಿರುದ್ಧ ಆಕ್ರೋಶವನ್ನು ಹೊರಹಾಕುವ ಮೂಲಕ ಎಂಬುದು ವಿಶೇಷ.
ಐಪಿಎಲ್ 2025 ರ ಫೈನಲ್ ಪಂದ್ಯವನ್ನು ಈ ಹಿಂದೆ ಮೇ 25 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು/ ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ, ಲೀಗ್ ಅನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಲಾಯಿತು. ಇದೀಗ ಶನಿವಾರದಿಂದ (ಮೇ 17) ಟೂರ್ನಿಯು ಮತ್ತೆ ಪ್ರಾರಂಭವಾಗುತ್ತಿದೆ. ಇದರ ನಡುವೆ ಫೈನಲ್ ಪಂದ್ಯವು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುವುದಿಲ್ಲ ಎಂಬ ಸುದ್ದಿಯೊಂದು ಹೊರಬಿದ್ದಿದೆ.
ಅಂತಿಮ ಪಂದ್ಯವನ್ನು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ ಎಂಬ ಸುದ್ದಿಯೊಂದು ಹೊರಬೀಳುತ್ತಿದ್ದಂತೆ, ಕೊಲ್ಕತ್ತಾದ ಕ್ರಿಕೆಟ್ ಪ್ರೇಮಿಗಳು ಈಡನ್ ಗಾರ್ಡನ್ಸ್ ಮುಂದೆ ನಿಂತು ಬಿಸಿಸಿಐ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಐಪಿಎಲ್ ಫೈನಲ್ ಪಂದ್ಯವನ್ನು ಈಡನ್ ಗಾರ್ಡನ್ಸ್ ಮೈದಾನದಲ್ಲೇ ಆಯೋಜಿಸಬೇಕು. ಕೊಲ್ಕತ್ತಾ ಇಂಡೊ-ಪಾಕ್ ಗಡಿಯಿಂದ ದೂರವಿದ್ದು, ಹೀಗಾಗಿ ಫೈನಲ್ ಮ್ಯಾಚ್ ಅನ್ನು ಸ್ಥಳಾಂತರಿಸುವುದರಲ್ಲಿ ಅರ್ಥವಿಲ್ಲ ಎಂದು ಕೊಲ್ಕತ್ತಾದ ಕ್ರಿಕೆಟ್ ಪ್ರೇಮಿಗಳ ವಾದ ಮುಂದಿಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯವು ಜೂನ್ 3 ರಂದು ನಡೆಯಲಿದೆ. ಈ ಪಂದ್ಯಕ್ಕೆ ದಿನಾಂಕ ಫಿಕ್ಸ್ ಮಾಡಿದರೂ ಯಾವ ಸ್ಟೇಡಿಯಂನಲ್ಲಿ ಪಂದ್ಯವನ್ನು ಆಯೋಜಿಸಲಿದ್ದೇವೆ ಎಂಬುದನ್ನು ಬಿಸಿಸಿಐ ಬಹಿರಂಗಪಡಿಸಿಲ್ಲ. ಇದೇ ಕಾರಣದಿಂದಾಗಿ ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಿಂದ ಫೈನಲ್ ಮ್ಯಾಚ್ ಸ್ಥಳಾಂತರವಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: IPL 2025: ಪ್ಲೇಆಫ್ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?
ಇನ್ನು ಫೈನಲ್ ಪಂದ್ಯದ ಸ್ಥಳಾಂತರಕ್ಕೆ ಕೇವಲ ಯುದ್ಧ ಭೀತಿ ಕಾರಣವಲ್ಲ. ಬದಲಾಗಿ ಜೂನ್ 3 ರ ವೇಳೆ ಕೊಲ್ಕತ್ತಾದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳಿವೆ. ಹೀಗಾಗಿಯೇ ಬಿಸಿಸಿಐ ಅಂತಿಮ ಪಂದ್ಯವನ್ನು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.