ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ (Kapil Dev) ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ICC)ಸ್ವಾತಂತ್ರ್ಯ ದಿನದಂದು ಒಂದು ವಿಶೇಷ ಮನವಿ ಸಲ್ಲಿಸಿದ್ದಾರೆ. ಅದೆನೆಂದರೆ, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಉಳಿಸಲು ಐಸಿಸಿ ಹೆಚ್ಚಿನ ಕೆಲಸ ಮಾಡಬೇಕೆಂದು ಕಪಿಲ್ ಐಸಿಸಿಗೆ ಮನವಿ ಮಾಡಿದ್ದಾರೆ. ಕಪಿಲ್ ಹೇಳುವುದೆನೆಂದರೆ, ಇತ್ತೀಚೆಗೆ ಕ್ರಿಕೆಟ್‌ನಲ್ಲಿ ಅನೇಕ ಟಿ20 ಲೀಗ್‌ಗಳು ನಡೆಯಲು ಪ್ರಾರಂಭವಾಗಿವೆ. ಇದರಿಂದಾಗಿ ಏಕದಿನ ಹಾಗೂ ಟೆಸ್ಟ್ ಸ್ವರೂಪಗಳ ಅಸ್ತಿತ್ವಕ್ಕೆ ಅಪಾಯವಿದೆ. ಇದು ಹೀಗೆ ಮುಂದುವರೆದರೆ, ಫುಟ್ಬಾಲ್ ಹಾದಿಯನ್ನೇ ಕ್ರಿಕೆಟ್ ಕೂಡ ಹಿಡಿಯಲಿದೆ ಎಂದು ಕಪಿಲ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಇತ್ತೀಚೆಗೆ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಬಿಡುವಿಲ್ಲದ ವೇಳಾಪಟ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಸ್ಟೋಕ್ಸ್ ಹೇಳಿಕೊಂಡಿದ್ದರು. ಅಲ್ಲದೆ ಅನೇಕ ಆಟಗಾರರು ತಮ್ಮ ದೇಶಕ್ಕಾಗಿ ಆಡುವುದಕ್ಕಿಂತ T20 ಲೀಗ್‌ಗಳಲ್ಲಿ ಆಡಲು ಬಯಸುತ್ತಾರೆ. ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಈ ಟಿ20 ಲೀಗ್ ಹುಟ್ಟಿಕೊಂಡಿದೆ.
ಐಸಿಸಿ ಮೇಲೆ ದೊಡ್ಡ ಜವಾಬ್ದಾರಿ
ಕಪಿಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಆಸ್ಟ್ರೇಲಿಯಾದ ವೃತ್ತಪತ್ರಿಕೆ ಸಿಡ್ನಿ ಮಾರ್ನಿಂಗ್ ಹೆರಾಲ್ಡ್, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಆದಷ್ಟೂ ಬೇಗ ಕೊನೆಗೊಳ್ಳಲಿದೆ. ಹೀಗಾಗಿ ಈ ಎರಡು ಮಾದರಿಗಳನ್ನು ಉಳಿಸಿಕೊಳ್ಳುವುದು ಐಸಿಸಿ ಮೇಲಿರುವ ದೊಡ್ಡ ಜವಾಬ್ದಾರಿಯಾಗಿದೆ. ಯುರೋಪ್‌ನಲ್ಲಿ ಫುಟ್‌ಬಾಲ್ ಹೇಗೆ ನಡೆಯುತ್ತಿದೆಯೋ ಹಾಗೆ ಈಗಿನ ಕ್ರಿಕೆಟ್ ನಡೆಯುತ್ತಿದೆ. ದೇಶ- ದೇಶಗಳ ನಡುವೆ ಹೆಚ್ಚಾಗಿ ಫುಟ್‌ಬಾಲ್ ಪಂದ್ಯಗಳು ನಡೆಯುತ್ತಿಲ್ಲ. ನಾಲ್ಕು ವರ್ಷಗಳಿಗೊಮ್ಮೆ ವಿಶ್ವಕಪ್‌ನಲ್ಲಿ ಮಾತ್ರ ಫುಟ್ಬಾಲ್ ತಂಡಗಳು ಇನ್ನೊಂದು ದೇಶದೇದುರು ಪಂದ್ಯವನ್ನಾಡುತ್ತವೆ. ಉಳಿದಂತೆ ಕೇವಲ ಕ್ಲಬ್ ತಂಡಗಳೆದುರು ಫುಟ್ಬಾಲ್ ಪಂದ್ಯ ಹೆಚ್ಚಾಗಿ ನಡೆಯುತ್ತದೆ. ಈಗ ಕ್ರಿಕೆಟ್ನಲ್ಲೂ ಇದೇ ಮಾದರಿ ಅನ್ವಯವಾಗುತ್ತಿದೆ. ನಾವು ಕೂಡ ಅದೇ ರೀತಿ ಮಾಡುತ್ತಿದ್ದೇವೆ. ಕೇವಲ ವಿಶ್ವಕಪ್‌ನಲ್ಲಿ ಮಾತ್ರ ಇನ್ನೊಂದು ದೇಶದೇದುರು ಕ್ರಿಕೆಟ್ ಆಡುತ್ತೇವೆ. ಉಳಿದ ಸಮಯದಲ್ಲಿ ಹೆಚ್ಚಾಗಿ ಕ್ಲಬ್ ಕ್ರಿಕೆಟ್ (ಫ್ರಾಂಚೈಸ್ ಕ್ರಿಕೆಟ್) ಆಡುತ್ತೇವೆ.
ಏಕದಿನ ಮತ್ತು ಟೆಸ್ಟ್ ಮಾದರಿಯನ್ನು ಉಳಿಸಬೇಕಾಗಿದೆ
ಹೀಗಾಗಿ ಕ್ರಿಕೆಟಿಗರು ಕೂಡ ಫುಟ್ಬಾಲ್ನಲ್ಲಿರುವಂತೆ ಹೆಚ್ಚಾಗಿ ಐಪಿಎಲ್, ಬಿಗ್ ಬ್ಯಾಷ್ ಲೀಗ್ ಅಥವಾ ಅಂತಹುದೇ ಹಲವು ಲೀಗ್‌ನಲ್ಲಿ ಹೆಚ್ಚಾಗಿ ಆಡುತ್ತಿದ್ದಾರೆ. ಇದರಿಂದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಐಸಿಸಿ ಒಡಿಐ ಕ್ರಿಕೆಟ್, ಟೆಸ್ಟ್ ಕ್ರಿಕೆಟ್ ಅನ್ನು ಹೇಗೆ ಉಳಿಸುತ್ತದೆ ಎಂಬುದು ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಈಗ ಕ್ಲಬ್ ಕ್ರಿಕೆಟ್ ಎಲ್ಲಾ ಕಡೆ ಆರಂಭವಾಗುತ್ತಿದ್ದು, ಐಪಿಎಲ್, ಬಿಗ್ಬ್ಯಾಷ್ ಬಳಿಕ ಈಗ ದಕ್ಷಿಣ ಆಫ್ರಿಕಾ ಲೀಗ್ ಹಾಗೂ ಯುಎಇ ಲೀಗ್ ಬರುತ್ತಿದೆ. ಎಲ್ಲ ದೇಶಗಳೂ ಕ್ಲಬ್ ಕ್ರಿಕೆಟ್ ಆಡಿದರೆ ಅಂತರಾಷ್ಟ್ರೀಯ ಕ್ರಿಕೆಟ್ ಕೇವಲ ವಿಶ್ವಕಪ್ಗೆ ಸೀಮಿತವಾಗುತ್ತದೆ ಎಂಬುದು ಕಪಿಲ್ ದೇವ್ ವಾದವಾಗಿದೆ.
Published On - 9:41 pm, Mon, 15 August 22