ಕ್ರಿಕೆಟ್ ಲೋಕದಲ್ಲಿ ಸದ್ಯ ಭಾರೀ ಸುದ್ದಿಯಲ್ಲಿರುವ ವಿಚಾರ ಎಂದರೆ ಅದು ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ. ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವ ಟೀಮ್ ಇಂಡಿಯಾ ಮಾಜಿ ನಾಯಕನ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ದೇಶಿ ಕ್ರಿಕೆಟ್ ಆಡುವ ಮೂಲಕ ಟೀಮ್ ಇಂಡಿಯಾಗೆ ಶಕ್ತಿಯುತವಾಗಿ ಕಮ್‌ಬ್ಯಾಕ್ ಮಾಡಬೇಕೆಂದು ಹಲವು ಮಾಜಿ ಕ್ರಿಕೆಟಿಗರು ಸಲಹೆ ನೀಡುತ್ತಿದ್ದಾರೆ. ಹೀಗಿರುವಾಗ ಸೌರವ್ ಗಂಗೂಲಿ ಅವರು ವಿರಾಟ್ ಕೊಹ್ಲಿ ಸದ್ಯದಲ್ಲಿಯೇ ಫಾರ್ಮ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಹ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಲಿ, ಹೆಚ್ಚು ಪಂದ್ಯಗಳನ್ನು ಆಡಲಿ. ಅವರು ದೊಡ್ಡ ಆಟಗಾರ ಮತ್ತು ಸಾಕಷ್ಟು ರನ್ ಗಳಿಸಿದ್ದಾರೆ. ಅವರು ಖಂಡಿತ ಪುನರಾಗಮನ ಮಾಡುತ್ತಾರೆ ಎಂಬ ಭರವಸೆ ನನಗಿದೆ. ಅವರು ಕೇವಲ ಶತಕ ಗಳಿಸಲು ಸಾಧ್ಯವಾಗುತ್ತಿಲ್ಲ. ಮುಂಬರುವ ಏಷ್ಯಾಕಪ್‌ನಲ್ಲಿ ತಮ್ಮ ಫಾರ್ಮ್ ಅನ್ನು ಕಂಡುಕೊಳ್ಳುತ್ತಾರೆ - ಸೌರವ್ ಗಂಗೂಲಿ.
2022ರ ಏಷ್ಯಾಕಪ್ ಇದೇ ಆಗಸ್ಟ್ 27ರಿಂದ ಯುಎಇಯಲ್ಲಿ ಕಿಕ್‌ಸ್ಟಾರ್ಟ್ ಪಡೆಯಲಿದ್ದು, ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಗಸ್ಟ್ 28ರಂದು ದುಬೈನಲ್ಲಿ ಸೆಣಸಾಟ ನಡೆಸಲಿದೆ.
ಈ ವಿಚಾರವಾಗಿ ಮಾತನಾಡಿದ ಗಂಗೂಲಿ, ಇದು ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯೇ ಹೊರತು ಭಾರತ-ಪಾಕಿಸ್ತಾನ ನಡುವಿನ ಸರಣಿ ಎಂದು ನಾನು ಪರಿಗಣಿಸುವುದಿಲ್ಲ. ನನ್ನ ಕ್ರಿಕೆಟ್ ಕಾಲದಲ್ಲಿ ಭಾರತ-ಪಾಕಿಸ್ತಾನ ನಡುವಿನ ಮುಖಾಮುಖಿ ಎನ್ನುವುದು ನನ್ನ ಪಾಲಿಗೆ ಕೇವಲ ಮತ್ತೊಂದು ಪಂದ್ಯವಾಗಿರುತ್ತಿತ್ತು. ಪಂದ್ಯ ಗೆಲ್ಲುವುದೇ ನಮ್ಮ ಪಾಲಿನ ಗುರಿ ಆಗಿರುತ್ತಿತ್ತು ಎಂದು ಗಂಗೂಲಿ ಹೇಳಿದ್ದಾರೆ.
ಇನ್ನು ಏಷ್ಯಾಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲುವು ದಾಖಲು ಮಾಡಲಿದೆ ಎಂದು ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಪ್ರಶಸ್ತಿ ಎತ್ತಿ ಹಿಡಿಯುವ ಸಾಮರ್ಥ್ಯ ಟೀಮ್ ಇಂಡಿಯಾ ಬಳಿ ಇದೆ ಎಂದಿದ್ದಾರೆ.
ಏಷ್ಯಾಕಪ್ ಮಾತ್ರವಲ್ಲದೇ ಯಾವುದೇ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸುವುದು ಕಷ್ಟ. ಮುಂಬರುವ ಟಿ20 ವಿಶ್ವಕಪ್ ನಲ್ಲೂ ಭಾರತ ಪ್ರಬಲ ಸ್ಪರ್ಧಿಯಾಗಲಿದೆ. ಟೀಮ್ ಇಂಡಿಯಾ ಬ್ಯಾಟಿಂಗ್, ಬೌಲಿಂಗ್ ವಿಭಾಗ ಇತರೆ ತಂಡಗಳಿಗಿಂತಲೂ ಉತ್ತಮವಾಗಿದ್ದು, ಏಷ್ಯಾಕಪ್ ಎತ್ತಿ ಹಿಡಿಯುವ ಎಲ್ಲ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.
ಏಷ್ಯಾಕಪ್ ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
Published On - 9:30 am, Tue, 16 August 22