
ಭಾನುವಾರ ದೇಶದಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಳಕಿನ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಕ್ರಿಕೆಟ್ ಜಗತ್ತಿನ ಹಲವು ಗಣ್ಯರು ದೇಶದ ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸಿದರು. ಐಸಿಸಿ ಅಧ್ಯಕ್ಷ ಜಯ್ ಶಾ, ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಮುಖ್ಯ ಕೋಚ್ ಗೌತಮ್ ಗಂಭೀರ್ ಸೇರಿದಂತೆ ಹಲವು ಕ್ರಿಕೆಟ್ ತಾರೆಯರು ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯ ಹಾರೈಕೆಗಳನ್ನು ಕಳುಹಿಸಿದರು.
ಐಸಿಸಿ ಅಧ್ಯಕ್ಷ ಹಾಗೂ ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯ್ ಶಾ ಅವರು ಸಾಮಾಜಿಕ ಜಾಲತಾಣದಲ್ಲಿ ದೀಪಾವಳಿ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಬೆಳಕಿನ ಈ ಹಬ್ಬ ಎಲ್ಲರ ಬದುಕಿನಲ್ಲಿ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸಿದ್ದಾರೆ.
‘ದೀಪಗಳ ಹಬ್ಬವು ಶಾಂತಿ, ಪ್ರಗತಿ ಮತ್ತು ಸಮೃದ್ಧಿಯಿಂದ ಕೂಡಿದ ಭವಿಷ್ಯವನ್ನು ನಿರ್ಮಿಸುವ ನಮ್ಮ ಸಂಕಲ್ಪಕ್ಕೆ ಮತ್ತಷ್ಟು ಬಲ ನೀಡಲಿ. ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು’ ಎಂದು ಜಯ್ ಶಾ ಬರೆದುಕೊಂಡಿದ್ದಾರೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಇನ್‌ಸ್ಟಾಗ್ರಾಮ್ ಮೂಲಕ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದಾರೆ. ದೀಪಾವಳಿಗೆ ಸಂಬಂಧಿಸಿದ ಫೋಟೋವೊಂದನ್ನು ಹಂಚಿಕೊಂಡಿರುವ ಕೊಹ್ಲಿ, ಎಲ್ಲರ ಬದುಕಿನಲ್ಲಿ ಸಂತೋಷ, ಸಮೃದ್ಧಿ ಮತ್ತು ಸಕಾರಾತ್ಮಕತೆ ತುಂಬಿರಲಿ ಎಂದು ಹಾರೈಸಿದ್ದಾರೆ.
ಈ ಬೆಳಕಿನ ಹಬ್ಬ ಪ್ರತಿಯೊಬ್ಬರ ಜೀವನದಲ್ಲಿ ನೆಮ್ಮದಿ, ಸಂತೋಷ ಹಾಗೂ ಹೊಸ ಭರವಸೆಗಳನ್ನು ತರಲಿ. ಎಲ್ಲರಿಗೂ ಮತ್ತು ಅವರ ಕುಟುಂಬದವರಿಗೆ ಸುಖ-ಸಮೃದ್ಧಿಯಿಂದ ಕೂಡಿದ ದೀಪಾವಳಿಯ ಶುಭಾಶಯಗಳು ಎಂದು ಕೊಹ್ಲಿ ಸಂದೇಶ ನೀಡಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಟೀಂ ಇಂಡಿಯಾಗೆ ವಿಶೇಷ ರೀತಿಯಲ್ಲಿ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದಾರೆ. ‘ನಾವು ಆಡುವುದು ದೊಡ್ಡ ಗೆಲುವಿಗಾಗಿ, ಕೋಟ್ಯಂತರ ಹೃದಯಗಳಿಗಾಗಿ! ಟೀಂ ಇಂಡಿಯಾಗೆ ದೀಪಾವಳಿಯ ಶುಭಾಶಯಗಳು’ ಎಂದು ಗಂಭೀರ್ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ದೇಶದ ಕೋಟ್ಯಂತರ ಅಭಿಮಾನಿಗಳಿಗಾಗಿ ಆಡುವ ಮತ್ತು ಅವರ ಹೃದಯ ಗೆಲ್ಲುವ ತಂಡದ ಉತ್ಸಾಹವನ್ನು ಗಂಭೀರ್ ಅವರ ಈ ಸಂದೇಶ ಬಿಂಬಿಸಿದೆ.
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ದೀಪಾವಳಿಯ ಶುಭ ಸಂದರ್ಭದಲ್ಲಿ ಜನರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಲಕ್ಷ್ಮಿ ಮತ್ತು ಗಣೇಶನನ್ನು ಸ್ಮರಿಸಿರುವ ಅವರು, ಪ್ರತಿಯೊಬ್ಬರ ಮನೆ ಹಾಗೂ ಕುಟುಂಬದಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ನೆಲೆಸಲಿ ಎಂದು ಹಾರೈಸಿದ್ದಾರೆ. ದೀಪಾವಳಿಯ ದೀಪಗಳ ಬೆಳಕು ಎಲ್ಲರ ಬದುಕಿನ ಕತ್ತಲೆಯನ್ನು ದೂರ ಮಾಡಿ, ಸಂತೋಷ, ಸಕಾರಾತ್ಮಕತೆ ಮತ್ತು ಹೊಸ ಭರವಸೆಯ ಬೆಳಕನ್ನು ಹರಡಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಕೂಡ ತಮ್ಮ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ದೀಪಾವಳಿ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಹಬ್ಬ ಎಲ್ಲರ ಬದುಕಿನಲ್ಲಿ ಪ್ರೀತಿ, ನಗು ಮತ್ತು ಸಂತೋಷವನ್ನು ತರಲಿ ಎಂದು ಹಾರೈಸಿದ್ದಾರೆ.