ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ವಿರುದ್ಧ ಸೆಟೆದು ನಿಂತ ಕ್ರಿಕೆಟಿಗನಿಗೆ ಜೀವ ಬೆದರಿಕೆ..!
Bangladesh Cricket: ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯವಾಡಲು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಹಿಂದೇಟು ಹಾಕಿದೆ. ಬಾಂಗ್ಲಾದೇಶ್ ಆಟಗಾರರ ಸುರಕ್ಷತೆಯನ್ನು ಮುಂದಿಟ್ಟುಕೊಂಡು ಬಿಸಿಬಿ ಪಂದ್ಯಗಳ ಸ್ಥಳಾಂತರಕ್ಕೆ ಐಸಿಸಿಗೆ ಮನವಿ ಮಾಡಿದೆ. ಈ ಸಮಸ್ಯೆ ಪರಿಹರಿಯುವ ಮುನ್ನವೇ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ನಲ್ಲಿ ಹೊಸ ಸಮಸ್ಯೆಗಳು ತಲೆದೂರಿವೆ.

ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ವಿರುದ್ಧ ಸೆಟೆದು ನಿಂತ ಬಾಂಗ್ಲಾದೇಶ್ ಕ್ರಿಕೆಟಿಗರ ಕಲ್ಯಾಣ ಸಂಘ (CWAB) ಅಧ್ಯಕ್ಷ ಮೊಹಮ್ಮದ್ ಮಿಥುನ್ಗೆ ಜೀವ ಬೆದರಿಕೆಯೊಡ್ಡಲಾಗಿದೆ. ಮೊಹಮ್ಮದ್ ಮಿಥುನ್, ಬಿಸಿಬಿಯ ಹಣಕಾಸು ಸಮಿತಿಯ ಅಧ್ಯಕ್ಷ ನಜ್ಮುಲ್ ಇಸ್ಲಾಂ ಅವರ ರಾಜೀನಾಮೆ ಆಗ್ರಹಿಸಿದ್ದರು. ಆಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನಲೆ ಬಾಂಗ್ಲಾದೇಶ್ ಕ್ರಿಕೆಟಿಗರ ಕಲ್ಯಾಣ ಸಂಘವು ಬಿಸಿಬಿಯ ಹಣಕಾಸು ಸಮಿತಿಯ ಅಧ್ಯಕ್ಷ ಸ್ಥಾನದಿಂದ ನಜ್ಮುಲ್ ಅವರನ್ನು ವಜಾ ಮಾಡಬೇಕೆಂದು ಆಗ್ರಹಿಸಿತ್ತು.
ಅಷ್ಟೇ ಅಲ್ಲದೆ ನಜ್ಮುಲ್ ಇಸ್ಲಾಂ ಅವರು ರಾಜೀನಾಮೆ ನೀಡುವವರೆಗೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಬಾಂಗ್ಲಾ ಆಟಗಾರರು ತಿಳಿಸಿದ್ದರು. ಅದರಂತೆ ಶುಕ್ರವಾರ ನಡೆಯಬೇಕಿದ್ದ ಪಂದ್ಯಗಳಿಂದ ಬಾಂಗ್ಲಾದೇಶ್ ಆಟಗಾರರು ಹಿಂದೆ ಸರಿದಿದ್ದರು. ಹೀಗಾಗಿ 2 ಪಂದ್ಯಗಳು ರದ್ದಾಗಿದ್ದವು.
ಈ ಬೆಳವಣಿಗೆಗಳ ಬೆನ್ನಲ್ಲೇ ತನಗೆ ಕರೆ ಮಾಡಿ ಜೀವ ಬೆದರಿಕೆಯೊಡ್ಡಲಾಗುತ್ತಿದೆ ಎಂದು ಬಾಂಗ್ಲಾದೇಶ್ ಕ್ರಿಕೆಟಿಗರ ಕಲ್ಯಾಣ ಸಂಘ (CWAB) ಅಧ್ಯಕ್ಷ ಮೊಹಮ್ಮದ್ ಮಿಥುನ್ ಬಹಿರಂಗಪಡಿಸಿದ್ದಾರೆ. ನಾನು ಆಟಗಾರರ ಹಕ್ಕುಗಳು ಮತ್ತು ಸುರಕ್ಷತೆಯನ್ನು ಪ್ರತಿಪಾದಿಸುತ್ತಿದ್ದೇನೆ.
ಈ ಹಿನ್ನಲೆಯಲ್ಲಿ ನನಗೆ ಕೊಲೆ ಬೆದರಿಕೆಗಳು ಬರುತ್ತಿವೆ. ನಾನು ಎಂದಿಗೂ ದೇಶದ ವಿರುದ್ಧ ಮಾತನಾಡಿಲ್ಲ. ಯಾವುದೇ ವಿವಾದಾತ್ಮಕ ವಿಷಯಗಳಲ್ಲಿ ಭಾಗಿಯಾಗಿಲ್ಲ. ಇದಾಗ್ಯೂ ನಗಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ. ಇವೆಲ್ಲವೂ ನನಗೆ ಹೊಸ ಅನುಭವ.
ನಾನು ಕ್ರಿಕೆಟ್ ಮತ್ತು ಆಟಗಾರರ ಹಿತಾಸಕ್ತಿಗಾಗಿ ಮಾತ್ರ ಮಾತನಾಡಿದ್ದೇನೆ. ಇದರಲ್ಲಿ ಯಾವುದೇ ವೈಯಕ್ತಿಕ ಸಮಸ್ಯೆ ಇಲ್ಲ. ನಾನು ಒಂದು ಸಂಸ್ಥೆಯ ಅಧ್ಯಕ್ಷನಾಗಿರುವುದರಿಂದ, ನಾನು ಆಟಗಾರರ ಹಕ್ಕುಗಳ ಪರವಾಗಿ ಮಾತನಾಡದಿದ್ದರೆ, ಈ ಹುದ್ದೆಯನ್ನು ಅಲಂಕರಿಸುವುದರ ಅರ್ಥವೇನು? ಯಾರೂ ದೇಶಕ್ಕಿಂತ ಮೇಲಲ್ಲ ಎಂದು ಮೊಹಮ್ಮದ್ ಮಿಥುನ್ ಹೇಳಿದ್ದಾರೆ.
ಇದಾಗ್ಯೂ ಯಾರ ಕಡೆಯಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂಬುದನ್ನು ಮೊಹಮ್ಮದ್ ಮಿಥುನ್ ಬಹಿರಂಗಪಡಿಸಿಲ್ಲ. ಹೀಗಾಗಿಯೇ ಇದು ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ನೆಟ್ಟಿಗರು ಈ ಜೀವ ಬೆದರಿಕೆಗೆ ಬಿಸಿಬಿಯ ಹಣಕಾಸು ಸಮಿತಿಯ ಅಧ್ಯಕ್ಷ ನಜ್ಮುಲ್ ಇಸ್ಲಾಂ ಅವರತ್ತ ಬೊಟ್ಟು ಮಾಡುತ್ತಿದ್ದಾರೆ.
ಇದನ್ನೂ ಓದಿ: ಕೇವಲ 3 ಪಂದ್ಯಗಳಿಗೆ ಶ್ರೇಯಸ್ ಅಯ್ಯರ್: ತಿಲಕ್ ವರ್ಮಾ ಮೇಲೆ ನಿಗಾ..!
ಒಟ್ಟಿನಲ್ಲಿ ಐಪಿಎಲ್ನಿಂದ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈ ಬಿಟ್ಟ ಬೆನ್ನಲ್ಲೇ ಶುರುವಾದ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ನ ವಿವಾದ ಸದ್ಯಕ್ಕಂತು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಅದರಲ್ಲೂ ಟಿ20 ವಿಶ್ವಕಪ್ ಪಂದ್ಯಗಳ ಸ್ಥಳಾಂತರಕ್ಕೆ ಆಗ್ರಹಿಸಿದ್ದ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಗೆ ಇದೀಗ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನಲ್ಲಿ ತನ್ನ ಆಟಗಾರರನ್ನು ಕಣಕ್ಕಿಳಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿರುವುದು ಮಾತ್ರ ವಿಪರ್ಯಾಸ.
