AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶ್ ಕ್ರಿಕೆಟ್​ನಲ್ಲಿ ಕೋಲಾಹಲ… ರಾಜೀನಾಮೆ ನೀಡಿದ್ರೆ ಮಾತ್ರ ಆಡ್ತೇವೆ!

Bangladesh Cricket: ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯವಾಡಲು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಹಿಂದೇಟು ಹಾಕಿದೆ. ಬಾಂಗ್ಲಾದೇಶ್ ಆಟಗಾರರ ಸುರಕ್ಷತೆಯನ್ನು ಮುಂದಿಟ್ಟುಕೊಂಡು ಬಿಸಿಬಿ ಪಂದ್ಯಗಳ ಸ್ಥಳಾಂತರಕ್ಕೆ ಐಸಿಸಿಗೆ ಮನವಿ ಮಾಡಿದೆ. ಈ ಸಮಸ್ಯೆ ಪರಿಹರಿಯುವ ಮುನ್ನವೇ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ಗೆ ಮತ್ತೊಂದು ಸಮಸ್ಯೆ ಶುರುವಾಗಿದೆ.

ಬಾಂಗ್ಲಾದೇಶ್ ಕ್ರಿಕೆಟ್​ನಲ್ಲಿ ಕೋಲಾಹಲ... ರಾಜೀನಾಮೆ ನೀಡಿದ್ರೆ ಮಾತ್ರ ಆಡ್ತೇವೆ!
Bangladesh
ಝಾಹಿರ್ ಯೂಸುಫ್
|

Updated on:Jan 15, 2026 | 12:55 PM

Share

ಬಾಂಗ್ಲಾದೇಶ್ ಕ್ರಿಕೆಟ್​ ಬೋರ್ಡ್ ಸಂಕಷ್ಟದಿಂದ ಸಂಕಷ್ಟಕ್ಕೆ ಒಳಗಾಗುತ್ತಿದೆ. ಒಂದೆಡೆ ಟಿ20 ವಿಶ್ವಕಪ್​ ಪಂದ್ಯಗಳ ಸ್ಥಳಾಂತರಕ್ಕೆ  ಒತ್ತಾಯಿಸುತ್ತಿರುವ ಬಿಸಿಬಿಯ ಮನವಿಗೆ ಐಸಿಸಿ ಕ್ಯಾರೆ ಅನ್ನುತ್ತಿಲ್ಲ. ಮತ್ತೊಂಡೆ ಆಟಗಾರರಿಂದಲೇ ಬಿಸಿಬಿಗೆ ಒತ್ತಡ ಎದುರಾಗಿದೆ. ಅದು ಕೂಡ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಹಣಕಾಸು ಸಮಿತಿ ಅಧ್ಯಕ್ಷನ ರಾಜೀನಾಮೆ ಕೇಳುವ ಮೂಲಕ..!

ಹೌದು, ಬಾಂಗ್ಲಾದೇಶ್ ಆಟಗಾರರು ಇದೀಗ ಬಿಸಿಬಿ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಹಸನ್ ರಾಜೀನಾಮೆಯನ್ನು ಆಗ್ರಹಿಸುತ್ತಿದ್ದಾರೆ. ಇತ್ತೀಚೆಗೆ ಮಾಜಿ ಆಟಗಾರ ತಮೀಮ್ ಇಕ್ಬಾಲ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ಬಾಂಗ್ಲಾ ಕ್ರಿಕೆಟಿಗರು ನಜ್ಮುಲ್ ಹಸನ್ ವಿರುದ್ಧ ತಿರುಗಿ ನಿಂತಿದ್ದಾರೆ.

ಬಾಂಗ್ಲಾ ಕ್ರಿಕೆಟಿಗರ ಬೆದರಿಕೆ:

ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನ ( ಬಿಪಿಎಲ್) ಮುಂದಿನ ಪಂದ್ಯಕ್ಕೂ ಮುನ್ನ ಬಿಸಿಬಿ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಹಸನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಆಟಗಾರರು ಇನ್ನು ಮುಂದೆ ಕ್ರಿಕೆಟ್ ಆಡುವುದಿಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟಿಗರ ಕಲ್ಯಾಣ ಸಂಘ ( ಸಿಡಬ್ಲ್ಯೂಎಬಿ) ಬುಧವಾರ ಘೋಷಿಸಿದೆ.

ಅಂದರೆ ನಜ್ಮುಲ್ ಹಸನ್ ರಾಜೀನಾಮೆ ನೀಡಿದರೆ ಮಾತ್ರ ಬಾಂಗ್ಲಾದೇಶ್ ಕ್ರಿಕೆಟಿಗರು ಬಿಪಿಎಲ್​ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿಯೇ ಇದೀಗ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ನ ಉಳಿದ ಪಂದ್ಯಗಳು ನಡೆಯಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ನಜ್ಮುಲ್ ಹಸನ್ ಗುರಿಯಾಗಿದ್ದೇಕೆ?

ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಹಸನ್ ಇತ್ತೀಚೆಗೆ ಮಾಧ್ಯಮದೊಂದಿಗೆ ಮಾತನಾಡುವ ವೇಳೆ, ಐಸಿಸಿ ಟಿ20 ವಿಶ್ವಕಪ್ 2026 ರಿಂದ ಬಾಂಗ್ಲಾದೇಶ್ ತಂಡವನ್ನು ಹೊರಗಿಟ್ಟರೆ, ಮಂಡಳಿಯು ಯಾವುದೇ ಆರ್ಥಿಕ ನಷ್ಟವನ್ನು ಅನುಭವಿಸುವುದಿಲ್ಲ.

ಬಾಂಗ್ಲಾದೇಶ್ ತಂಡ ಆಡದಿದ್ದರೆ ಅದು ಆಟಗಾರರಿಗೆ ಮಾತ್ರ ನಷ್ಟವಾಗುತ್ತದೆ. ಏಕೆಂದರೆ ಅವರಿಗೆ ಪಂದ್ಯ ಶುಲ್ಕ ಸಿಗುವುದಿಲ್ಲ. ಇದರ ಹೊರತಾಗಿಯೂ ಯಾರಿಗೂ ನಷ್ಟವಿಲ್ಲ ಎಂಬ ಹೇಳಿಕೆ ನೀಡಿದ್ದರು.

ಟಿ20 ವಿಶ್ವಕಪ್​ನಲ್ಲಿ ಭಾಗವಹಿಸದೇ ಇದ್ದರೆ 2027 ರವರೆಗೆ ನಮ್ಮ ಆದಾಯದ ಮೇಲೆ ಪರಿಣಾಮ ಬೀರುವುದಿಲ್ಲ, ಏಕೆಂದರೆ ಇದನ್ನು 2022 ರ ಐಸಿಸಿ ಹಣಕಾಸು ಸಭೆಯಲ್ಲಿ ಈಗಾಗಲೇ ನಿರ್ಧರಿಸಲಾಗಿತ್ತು. ಆಟಗಾರರು ಆಡುವ ಪ್ರತಿಯೊಂದು ಪಂದ್ಯಕ್ಕೂ ಪಂದ್ಯ ಶುಲ್ಕವನ್ನು ಪಡೆಯುವುದರಿಂದ ಅವರು ತೊಂದರೆ ಅನುಭವಿಸುತ್ತಾರೆ.

ಒಬ್ಬ ಆಟಗಾರನು ಪಂದ್ಯದಲ್ಲಿ ಭಾಗವಹಿಸಿದರೆ, ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರೆ ಅಥವಾ ವಿಶೇಷ ಪ್ರದರ್ಶನ ನೀಡಿದರೆ, ಅವರು ಐಸಿಸಿ ನಿಯಮಗಳ ಪ್ರಕಾರ ತಮ್ಮ ಶುಲ್ಕಗಳಿಗೆ ಅರ್ಹರಾಗಿರುತ್ತಾರೆ. ಆ ಹಣವು ಸಂಪೂರ್ಣವಾಗಿ ಆಟಗಾರನಿಗೆ ಸೇರಿದೆ. ಬಾಂಗ್ಲಾದೇಶ್ ಇಲ್ಲಿ ಆಡಲಿ ಅಥವಾ ಆಡದಿದ್ದರೂ, ಮಂಡಳಿಗೆ ಯಾವುದೇ ಲಾಭ ಅಥವಾ ನಷ್ಟವಿಲ್ಲ ನಜ್ಮುಲ್ ಹಸನ್ ಹೇಳಿಕೆ ನೀಡಿದ್ದರು.

ಅಷ್ಟೇ ಅಲ್ಲದೆ ಟಿ20 ವಿಶ್ವಕಪ್​ನಂತಹ ಟೂರ್ನಿಯಲ್ಲಿ ಬಾಂಗ್ಲಾದೇಶ್ ತಂಡದ ಆಟಗಾರರು ಏನೂ ಮಾಡಲು ಸಾಧ್ಯವಾಗದಿದ್ದರೆ, ಅವರಿಗಾಗಿ ಖರ್ಚು ಮಾಡಿದ ಕೋಟ್ಯಂತರ ರೂಪಾಯಿಗಳನ್ನು ನಾವು ಅವರಿಂದ ಹಿಂಪಡೆಯಲಾಗುತ್ತದೆಯೇ? ಇಲ್ಲ ತಾನೆ, ಹಾಗಾಗಿ ಮಂಡಳಿಯಿಲ್ಲದೆ ಆಟಗಾರರು ಬದುಕುವುದು ಕಷ್ಟ  ಎಂದಿದ್ದರು.

ಮತ್ತೊಂದೆಡೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಐಸಿಸಿಯಂತಹ ಟೂರ್ನಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮಾಜಿ ನಾಯಕ ತಮೀಮ್ ಇಕ್ಬಾಲ್ ಹೇಳಿಕೆ ನೀಡಿದ್ದರು. ಅಲ್ಲದೆ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸುವ ನಿರ್ಧಾರದಲ್ಲಿ ಎಚ್ಚರಿಕೆಯಿಂದ ವರ್ತಿಸುವಂತೆ ಮತ್ತು ಕ್ರಿಕೆಟ್‌ಗೆ ಆದ್ಯತೆ ನೀಡುವಂತೆ ತಮೀಮ್ ಮಂಡಳಿಗೆ ಸಲಹೆ ನೀಡಿದ್ದರು.

ತಮೀಮ್ ಇಕ್ಬಾಲ್ ಅವರ ಈ ಹೇಳಿಕೆಯನ್ನು ಪ್ರಸ್ತಾಪಿಸಿ ಮಾತನಾಡಿದ ನಜ್ಮುಲ್ ಹಸನ್, ಅವನು “ಭಾರತೀಯ ಏಜೆಂಟ್ ” ಎಂದು ಕರೆದು ವಾಗ್ದಾಳಿ ನಡೆಸಿದ್ದರು.

ಮಾಜಿ ಆಟಗಾರನ ವಿರುದ್ಧ ಬಿಸಿಬಿಯ ಹಣಕಾಸು ಸಮಿತಿ ಅಧ್ಯಕ್ಷ ನೀಡಿದ ವಿವಾದಾತ್ಮಕ ಹೇಳಿಕೆಗೆ ಬಾಂಗ್ಲಾದೇಶ ಕ್ರಿಕೆಟಿಗರ ಕಲ್ಯಾಣ ಸಂಘ ಆಕ್ರೋಶ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೆ ನಜ್ಮುಲ್ ಹಸನ್ ವಿರುದ್ಧ ಅನೇಕ ಕ್ರಿಕೆಟಿಗರು ಸೋಷಿಯಲ್ ಮೀಡಿಯಾ ಮೂಲಕ ಅಸಮಾಧಾನ ಹೊರಹಾಕಿದ್ದರು.

ಇದನ್ನೂ ಓದಿ: ಅಗ್ರಸ್ಥಾನಕ್ಕೇರಿದ 7 ಗಂಟೆಯೊಳಗೆ ದ್ವಿತೀಯ ಸ್ಥಾನಕ್ಕೆ ಕುಸಿದ ವಿರಾಟ್ ಕೊಹ್ಲಿ

ಇದೀಗ ನಜ್ಮುಲ್ ಹಸನ್ ಅವರ ರಾಜೀನಾಮೆಯನ್ನು ಆಗ್ರಹಿಸುವ ಮೂಲಕ ಬಾಂಗ್ಲಾದೇಶ್ ಆಟಗಾರರು ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ ಅನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡಿದ್ದಾರೆ.

Published On - 12:40 pm, Thu, 15 January 26