Deepak Hooda: ಹೊಸ ವಿಶ್ವ ದಾಖಲೆ: ಸೋಲು ಕಾಣದ ದೀಪಕ್ ಹೂಡಾ
Deepak Hooda: ಏಷ್ಯಾಕಪ್ ತಂಡದ ಭಾಗವಾಗಿರುವ ದೀಪಕ್ ಹೂಡಾಗೆ ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿದೆಯಾ ಕಾದು ನೋಡಬೇಕಿದೆ.
ಏಕದಿನ ಕ್ರಿಕೆಟ್ ಇರಲಿ, ಟಿ20 ಕ್ರಿಕೆಟ್ ಆಗಿರಲಿ…ಟೀಮ್ ಇಂಡಿಯಾದ (Team India) ದರ್ಬಾರ್ ಮುಂದುವರೆದಿದೆ. ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ದ ಸರಣಿ ಗೆದ್ದ ಬಳಿಕ ಇದೀಗ ಭಾರತ ತಂಡವು ಜಿಂಬಾಬ್ವೆ ವಿರುದ್ದದ ಸರಣಿಯನ್ನೂ ಕೂಡ ವಶಪಡಿಸಿಕೊಂಡಿದೆ. ವಿಶೇಷ ಎಂದರೆ ಈ ಸರಣಿ ಗೆಲುವಿನೊಂದಿಗೆ ಟೀಮ್ ಇಂಡಿಯಾ ಆಟಗಾರ ದೀಪಕ್ ಹೂಡಾ ಸೋಲು ಕಾಣದ ಸರದಾರನಾಗಿ ಮುಂದುವರೆದಿದ್ದಾರೆ. ಅಂದರೆ ದೀಪಕ್ ಹೂಡಾ (Deepak Hooda) ಭಾರತದ ಪರ ಪದಾರ್ಪಣೆ ಮಾಡಿ ಇದುವರೆಗೆ ಸೋಲು ಕಂಡಿಲ್ಲ. ಹೂಡಾ ಕಣಕ್ಕಿಳಿದ ಪ್ರತಿ ಪಂದ್ಯದಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈ ವರ್ಷ ಟೀಮ್ ಇಂಡಿಯಾ ಪದಾರ್ಪಣೆ ಮಾಡಿದ್ದ ಈ ಯುವ ಆಲ್ರೌಂಡರ್ ಇದುವರೆಗೆ ಭಾರತದ 16 ಪಂದ್ಯಗಳನ್ನು ಆಡಿದ್ದಾರೆ.
ಈ ವೇಳೆ 9 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಹೂಡಾ 9 ಜಯ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಹಾಗೆಯೇ ಹೂಡಾ ಆಡಿರುವ 7 ಏಕದಿನ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿದೆ. ಹೀಗಾಗಿಯೇ ದೀಪಕ್ ಹೂಡಾರನ್ನು ಭಾರತದ ತಂಡದ ಹೊಸ ಲಕ್ಕಿ ಚಾರ್ಮ್ ಎಂದು ಬಣ್ಣಿಸಲಾಗುತ್ತಿದೆ.
ಅಷ್ಟೇ ಅಲ್ಲದೆ ಇದೇ ಲಕ್ಕಿ ಚಾರ್ಮ್ ಇದೀಗ ವಿಶ್ವ ದಾಖಲೆಯಾಗಿ ಮಾರ್ಪಟ್ಟಿರುವುದು ವಿಶೇಷ. ಅಂದರೆ ಪದಾರ್ಪಣೆ ಮಾಡಿ ಸೋಲು ಕಾಣದೇ ಅತೀ ಹೆಚ್ಚು ಪಂದ್ಯವಾಡಿದ ವಿಶ್ವ ದಾಖಲೆ ಇದೀಗ ದೀಪಕ್ ಹೂಡಾ ಪಾಲಾಗಿದೆ. ಈ ಹಿಂದೆ ಇಂತಹದೊಂದು ಅಪರೂಪದ ದಾಖಲೆ ರೋಮನಿಯಾದ ಸಾತ್ವಿಕ್ ನಾಡಿಗೊಟ್ಲಾ ಹೆಸರಿನಲ್ಲಿತ್ತು. ಸಾತ್ವಿಕ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಸತತವಾಗಿ 15 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರು. ಇದೀಗ ದೀಪಕ್ ಹೂಡಾ ಸತತವಾಗಿ 16 ಗೆಲುವಿನ ಭಾಗವಾಗುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಇದೇ ಕಾರಣದಿಂದಾಗಿ ಮುಂಬರುವ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ನಲ್ಲೂ ದೀಪಕ್ ಹೂಡಾಗೆ ಚಾನ್ಸ್ ನೀಡಿ, ಟೀಮ್ ಇಂಡಿಯಾ ಸೋಲಲ್ಲ ಎಂಬ ವಾದವನ್ನು ಅಭಿಮಾನಿಗಳು ಮುಂದಿಡುತ್ತಿದ್ದಾರೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಪರ ಸಿಕ್ಕ ಅವಕಾಶವನ್ನು ಬಳಸಿಕೊಂಡಿರುವ ದೀಪಕ್ ಹೂಡಾ, 7 ಏಕದಿನ ಪಂದ್ಯಗಳ 5 ಇನಿಂಗ್ಸ್ಗಳಿಂದ 140 ರನ್ ಕಲೆಹಾಕಿದ್ದಾರೆ.
ಹಾಗೆಯೇ 9 ಟಿ20 ಪಂದ್ಯಗಳ 7 ಇನಿಂಗ್ಸ್ ಮೂಲಕ 274 ರನ್ ಬಾರಿಸಿದ್ದಾರೆ. ಈ ವೇಳೆ 1 ಶತಕ ಸಿಡಿಸಿರುವುದು ವಿಶೇಷ. ಇದಲ್ಲದೆ ಏಕದಿನ ಪಂದ್ಯಗಳಲ್ಲಿ 3 ವಿಕೆಟ್ ಅನ್ನು ಕೂಡ ಕಬಳಿಸಿದ್ದಾರೆ. ಸದ್ಯ ಏಷ್ಯಾಕಪ್ ತಂಡದ ಭಾಗವಾಗಿರುವ ದೀಪಕ್ ಹೂಡಾಗೆ ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿದೆಯಾ ಕಾದು ನೋಡಬೇಕಿದೆ.