‘ಅವರಿಗೆ ಹಲವು ಬಾರಿ ವಾರ್ನಿಂಗ್ ನೀಡಿದ್ದೆವು’: ವಿವಾದಾತ್ಮಕ ರನೌಟ್ ಬಗ್ಗೆ ಮೌನಮುರಿದ ದೀಪ್ತಿ ಶರ್ಮಾ
ನಾವು ಅವರಿಗೆ ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದ್ದೆವು. ಆದರೆ ಇದನ್ನು ಇಂಗ್ಲೆಂಡ್ ಬ್ಯಾಟರ್ ಗಂಭೀರವಾಗಿ ಪರಿಗಣಿಸಲಿಲ್ಲ. ಅದಕ್ಕಾಗಿಯೇ ನಾವು ಐಸಿಸಿ ನಿಯಮಗಳ ಪ್ರಕಾರ ಈ ರನೌಟ್ ಮಾಡಿದ್ದೇವೆ ಎಂದಿದ್ದಾರೆ.
ಏಕದಿನ ಹಾಗೂ ಟಿ20 ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ ವನಿತಾ ಬಳಗ (Indian women’s cricket team) ಮೊದಲು ಟಿ20 ಸರಣಿಯನ್ನು 2-1 ರಿಂದ ಕಳೆದುಕೊಂಡಿತ್ತು. ಅದರ ನಂತರ ನಡೆದ ಏಕದಿನ ಸರಣಿಯಲ್ಲಿ ಆಂಗ್ಲ ವನಿತಾ ತಂಡವನ್ನು ಕ್ಲೀನ್ ಸ್ವೀಪ್ ಮಾಡುವ ಮೂಲಕ ಟೀಂ ಇಂಡಿಯಾ 23 ವರ್ಷ್ಗಳ ಬಳಿಕ ಇಂಗ್ಲೆಂಡ್ ನೆಲದಲ್ಲಿ ಏಕದಿನ ಸರಣಿ ಗೆದ್ದಿತ್ತು. ಈ ಐತಿಹಾಸ ಗೆಲುವಿನೊಂದಿಗೆ ಟೀಂ ಇಂಡಿಯಾದ ಲೆಜೆಂಡರಿ ಬೌಲರ್ ಜೂಲನ್ ಗೋಸ್ವಾಮಿ (Jhulan Goswami) ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದು ವಿಶೇಷವಾಗಿತ್ತು. ಆದರೆ ಈ ಸರಣಿಯ ಕೊನೆಯ ಪಂದ್ಯದಲ್ಲಿ ನಡೆದ ಅದೊಂದು ಘಟನೆ ಇಂದಿಗೂ ಸಹ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿದ ಸಾಧಿಸಿದ ಟೀಂ ಇಂಡಿಯಾ, ಕೊನೆಕೊನೆಯಲ್ಲಿ ಪಂದ್ಯ ಸೋಲುವ ಆತಂಕಕ್ಕೆ ಒಳಗಾಗಿತ್ತು. ಅದಕ್ಕೆ ಪ್ರಮುಖ ಕಾರಣ ಇಂಗ್ಲೆಂಡ್ ತಂಡದ ಚಾರ್ಲಿ ಡೀನ್ (Charlie Dean). ಪ್ರಮುಖ ಬ್ಯಾಟರ್ಗಳೆಲ್ಲ ಬೇಗನೇ ಪೆವಿಲಿಯನ್ ಸೇರಿದರೂ ಛಲ ಬಿಡದ ಈ ಆಟಗಾರ್ತಿ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ್ದರು. ಆದರೆ ಅಂತಿಮವಾಗಿ ಈಗ ವಿವಾದ ಹುಟ್ಟಿಹಾಕಿರುವ ರನ್ ಔಟ್ಗೆ ಬಲಿಯಾಗುವ ಮೂಲಕ ಇಂಗ್ಲೆಂಡ್ ಸರಣಿಯಲ್ಲಿ ಹೀನಾಯ ಸೋಲು ಕಂಡಿತ್ತು. ಅದರೊಂದಿಗೆ ಈ ರನ್ಔಟ್ ಬಗ್ಗೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು. ಆದರೆ ಇದೀಗ ಈ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಸ್ಪಿನ್ನರ್ ದೀಪ್ತಿ ಶರ್ಮಾ (Deepti Sharma) ಮೌನ ಮುರಿದಿದ್ದಾರೆ.
ಅಷ್ಟಕ್ಕೂ ಆ ರನೌಟ್ ಆಗಿದ್ದು ಹೇಗೆಂದರೆ, 44 ನೇ ಓವರ್‌ನಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಚಾರ್ಲಿ ಡೀನ್ ನಾನ್‌ಸ್ಟ್ರೈಕರ್‌ನ ತುದಿಯಲ್ಲಿ ನಿಂತಿದ್ದರು. ಭಾರತದ ಪರ ಬೌಲಿಂಗ್ ಆರಂಭಿಸಿದ ದೀಪ್ತಿ ಶರ್ಮಾ ಬಾಲನ್ನು ಎಸೆಯುವ ಮುನ್ನವೇ ಇಂಗ್ಲೆಂಡ್ ಬ್ಯಾಟರ್ ಕ್ರೀಸ್ ಬಿಟ್ಟು ಓಡಲು ಮುಂದಾಗಿದ್ದರು. ಇದನ್ನು ಗಮನಿಸಿದ ದೀಪ್ತಿ ಮಂಕಡಿಂಗ್ ಮೂಲಕ ಅವರನ್ನು ರನೌಟ್ ಮಾಡಿದರು. ಇದರೊಂದಿಗೆ ಇಂಗ್ಲೆಂಡ್ ತಂಡ ಪಂದ್ಯದಲ್ಲಿ ಸೋಲು ಕಂಡಿತ್ತು. ಆ ಬಳಿಕವೇ ಈ ರನೌಟ್ ವಿವಾದ ಹುಟ್ಟಿಕೊಂಡಿತ್ತು. ಕೆಲವರು ಇದು ಆಟದ ಸ್ಪೂರ್ತಿಗೆ ವಿರುದ್ಧವಾಗಿದೆ ಎಂಬ ವಿವಾದವನ್ನು ಸೃಷ್ಟಿಸಿದರೆ, ಇನ್ನೂ ಕೆಲವರು ಟೀಂ ಇಂಡಿಯಾ ಸ್ಪಿನ್ನರ್ ಪರವಾಗಿ ವಾದಿಸಿದ್ದರು.
ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದ್ದೆವು
ಅಲ್ಲದೆ ಪಂದ್ಯದ ಬಳಿಕ ಮಾತನಾಡಿದ್ದ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಈ ರನೌಟ್ ಅನ್ನು ಸಮರ್ಥಿಸಿಕೊಂಡಿದ್ದರು. ಈಗ ಭಾರತಕ್ಕೆ ಮರಳಿದ ನಂತರ ದೀಪ್ತಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಇದು ನಮ್ಮ ಯೋಜನೆಯಾಗಿತ್ತು ಏಕೆಂದರೆ ಅವರು ಇದನ್ನು ನಿರಂತರವಾಗಿ ಮಾಡುತ್ತಿದ್ದರು (ಇಂಗ್ಲೆಂಡ್ ಬ್ಯಾಟರ್ ಚಾರ್ಲಿ ಡೀನ್). ಹೀಗಾಗಿ ನಾವು ಅವರಿಗೆ ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದ್ದೆವು. ಆದರೆ ಇದನ್ನು ಇಂಗ್ಲೆಂಡ್ ಬ್ಯಾಟರ್ ಗಂಭೀರವಾಗಿ ಪರಿಗಣಿಸಲಿಲ್ಲ. ಅದಕ್ಕಾಗಿಯೇ ನಾವು ಐಸಿಸಿ ನಿಯಮಗಳ ಪ್ರಕಾರ ಈ ರನೌಟ್ ಮಾಡಿದ್ದೇವೆ ಎಂದಿದ್ದಾರೆ.
ಎಂಸಿಸಿ ಹೇಳಿದ್ದೇನು?
ಈ ವಿವಾದದ ನಂತರ, ಕ್ರಿಕೆಟ್‌ನ ನಿಯಮಗಳ ರಚನೆಯ ಸಂಸ್ಥೆಯಾದ ಎಂಸಿಸಿ, ಬೌಲರ್‌ನ ಕೈಯಿಂದ ಚೆಂಡು ಬಿಡುಗಡೆಯಾಗುವವರೆಗೂ ನಾನ್‌ಸ್ಟ್ರೈಕರ್‌ನ ತುದಿಯಲ್ಲಿ ನಿಂತಿರುವ ಬ್ಯಾಟ್ಸ್‌ಮನ್ ಕ್ರೀಸ್‌ನಿಂದ ಹೊರಹೋಗುವಂತಿಲ್ಲ. ಒಂದು ವೇಳೆ ನಾನ್‌ಸ್ಟ್ರೈಕರ್ ತುದಿಯಲ್ಲಿ ನಿಂತಿರುವ ಬ್ಯಾಟರ್ ಈ ತಪ್ಪನ್ನು ಮಾಡಿದ್ದರೆ, ಬೌಲರ್ ಅವರನ್ನು ರನೌಟ್ ಮಾಡುವುದು ಕ್ರಿಕೆಟ್ ನಿಯಮಗಳ ಪ್ರಕಾರ ಸರಿಯಾದ ಕ್ರಮವಾಗಿದೆ ಎಂದು ಎಂಸಿಸಿ ಹೇಳಿದೆ.
ವಿವಾದ ಹುಟ್ಟು ಹಾಕಿದ್ದ ಇಂಗ್ಲೆಂಡ್ ಕ್ರಿಕೆಟಿಗರು
ದೀಪ್ತಿ ಈ ರೀತಿ ರನೌಟ್ ಮಾಡಿದ ತಕ್ಷಣ ಇಂಗ್ಲೆಂಡ್ ಆಟಗಾರರು ಟ್ವಿಟ್ಟರ್ನಲ್ಲಿ ಅಪಪ್ರಚಾರ ಮಾಡು ಆರಂಭಿಸಿದ್ದಾರೆ. ದೀಪ್ತಿ ಅವರ ಈ ರನೌಟ್ ಅನ್ನು ಇಂಗ್ಲೆಂಡ್ ಪುರುಷರ ತಂಡದ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್ ಸೇರಿದಂತೆ ಹಲವರು ಟೀಕಿಸಿದ್ದರು. ಆದರೆ ಭಾರತದ ಅನೇಕ ಆಟಗಾರರು ದೀಪ್ತಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.