DC vs RCB: ಅತಿ ಕಡಿಮೆ ಮೊತ್ತ; ಐಪಿಎಲ್‌ನಲ್ಲಿ ಮುಜುಗರದ ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್

Delhi Capitals' Humiliating IPL Record: ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದಿದೆ. ಕೇವಲ ಎರಡು ದಿನಗಳ ಹಿಂದೆ ಭಾರಿ ರನ್ ಗಳಿಸಿದ್ದ ಡೆಲ್ಲಿ, ಈಗ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಪವರ್‌ಪ್ಲೇನಲ್ಲಿ 13 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ನಾಚಿಕೆಗೇಡಿನ ಸಾಧನೆ ಮಾಡಿದೆ. ಐಪಿಎಲ್‌ನಲ್ಲಿ ಇಷ್ಟು ಕಡಿಮೆ ಸ್ಕೋರ್‌ಗೆ ಇಷ್ಟು ವಿಕೆಟ್‌ಗಳನ್ನು ಕಳೆದುಕೊಂಡ ಮೊದಲ ತಂಡ ಡೆಲ್ಲಿ. ಆರ್‌ಸಿಬಿ ಬೌಲರ್‌ಗಳ ದಾಳಿಗೆ ಡೆಲ್ಲಿ ಬ್ಯಾಟ್ಸ್‌ಮನ್‌ಗಳು ಉತ್ತರವಿಲ್ಲದವರಾದರು.

DC vs RCB: ಅತಿ ಕಡಿಮೆ ಮೊತ್ತ; ಐಪಿಎಲ್‌ನಲ್ಲಿ ಮುಜುಗರದ ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್
Rcb Vs Dc

Updated on: Apr 27, 2026 | 9:09 PM

ಕೇವಲ ಎರಡೇ ಎರಡು ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಯಾವ ಮೈದಾನದಲ್ಲಿ ರನ್​ಗಳ ಮಳೆ ಹರಿಸಿ ಐಪಿಎಲ್‌ (IPL) ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ್ದ ದಾಖಲೆ ಬರೆದಿತ್ತೋ. ಇದೀಗ ಅದೇ ಮೈದಾನದಲ್ಲಿ ಅತ್ಯಂತ ಹೀನಾಯ ದಾಖಲೆಯೊಂದನ್ನು ಬರೆದಿದೆ. ಏಪ್ರಿಲ್ 25 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಇದೇ ಅರುಣ್ ಜೇಟ್ಲಿ ಮೈದಾನದಲ್ಲಿ ಬರೋಬ್ಬರಿ 264 ರನ್ ಬಾರಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ತಂಡ ಕಲೆಹಾಕಿದ್ದ ಅತ್ಯಧಿಕ ಮೊತ್ತವಾಗಿತ್ತು. ಹೀಗಾಗಿ ಆರ್​ಸಿಬಿ (RCB) ವಿರುದ್ಧದ ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ಆರ್​ಸಿಬಿ ವೇಗಿಗಳ ಸಾಂಘಿಕ ದಾಳಿಗೆ ಡೆಲ್ಲಿ ಬ್ಯಾಟರ್​ಗಳ ಬಳಿ ಉತ್ತರವಿಲ್ಲದಂತ್ತಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ 3 ಓವರ್​ಗಳಲ್ಲಿಯೇ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಸಮಯಕ್ಕೆ ತಂಡ ಕಲೆಹಾಕಿದ್ದು, ಕೇವಲ 7 ರನ್. ಈ 7 ರನ್​ಗಳಲ್ಲಿ ಸ್ಟಬ್ಸ್ ಬಾರಿಸಿದ ಬೌಂಡರಿಯೂ ಸೇರಿತ್ತು. ಅಂದರೆ ಸ್ಟಬ್ಸ್ 5 ರನ್ ಕಲೆಹಾಕಿದನ್ನು ಬಿಟ್ಟರೆ, ಉಳಿದ 4 ಬ್ಯಾಟ್ಸ್‌ಮನ್​ಗಳಲ್ಲಿ ಇಬ್ಬರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

13 ರನ್​ಗೆ 6 ವಿಕೆಟ್

ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಸಾಹಿಲ್ ಪರಾಖ್ ಭುವಿ ಎಸೆತದಲ್ಲಿ ಖಾತೆ ತೆರೆಯದೆ ಕ್ಲೀನ್ ಬೌಲ್ಡ್ ಆದರೆ, ಅನುಭವಿ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಕೇವಲ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಸಮೀರ್ ರಿಜ್ವಿ ಕೂಡ ಖಾತೆ ತೆರೆಯದೆ ಔಟಾದರು. ಸ್ಟಬ್ಸ್ 5 ರನ್ ಬಾರಿಸಿ ಔಟಾದರೆ, ನಿತೀಶ್ ರಾಣಾ ಅವರ ಇನ್ನಿಂಗ್ಸ್ ಕೂಡ 1 ರನ್​ಗಳಿಗೆ ಅಂತ್ಯವಾಯಿತು. ನಾಯಕ ಅಕ್ಷರ್ ಪಟೇಲ್​ಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅಂದರೆ 6 ಬ್ಯಾಟ್ಸ್‌ಮನ್​ಗಳಲ್ಲಿ ಮೂವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಡೆಲ್ಲಿ ಪವರ್‌ಪ್ಲೇನಲ್ಲಿ ಕೇವಲ 13 ರನ್ ಬಾರಿಸಿ 6 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ನಾಚಿಕೆಗೇಡಿನ ದಾಖಲೆ ಬರೆಯಿತು.

DC vs RCB IPL 2026 Live Score: ಆರ್​ಸಿಬಿ ಮಾರಕ ದಾಳಿ; 75 ರನ್​ಗೆ ಡೆಲ್ಲಿ ಆಲೌಟ್

ನಾಚಿಕೆಗೇಡಿನ ದಾಖಲೆ ಬರೆದ ಡೆಲ್ಲಿ

ವಾಸ್ತವವಾಗಿ ಪವರ್‌ಪ್ಲೇನಲ್ಲಿ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿದ ತಂಡವೆಂಬ ಬೇಡದ ದಾಖಲೆ ಡೆಲ್ಲಿ ಪಾಲಾಗಿದೆ. ಪವರ್‌ಪ್ಲೇನಲ್ಲಿ ಕೇವಲ 13 ರನ್ ಗಳಿಸಿದ ಡೆಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡವೊಂದು ಇಷ್ಟು ಕಡಿಮೆ ರನ್ ಗಳಿಸಿ ಪವರ್‌ಪ್ಲೇನಲ್ಲಿ ಐದು ವಿಕೆಟ್‌ಗಳಿಗಿಂತ ಹೆಚ್ಚು ಕಳೆದುಕೊಂಡಿರುವುದು ಇದೇ ಮೊದಲು. ಇದಕ್ಕೂ ಮೊದಲು ಕೊಚ್ಚಿ ಟಸ್ಕರ್ಸ್​ ತಂಡ 2011 ರ ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ 29 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದು, ಇದುವರೆಗಿನ ದಾಖಲೆಯಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us