DC vs KKR: ಐಪಿಎಲ್ನಲ್ಲಿಂದು ಹೈವೋಲ್ಟೇಜ್ ಕದನ: ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಳ್ಳುತ್ತ ಕೆಕೆಆರ್
IPL 2022: ಐಪಿಎಲ್ನಲ್ಲಿಂದು ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿ ಆಗಲಿದೆ. ಕೆಕೆಆರ್ಗೆ ಇದು ಸೇಡಿನ ಪಂದ್ಯ ಕೂಡ ಹೌದು.
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ 41ನೇ ಪಂದ್ಯದಲ್ಲಿಂದು ಹೈವೋಲ್ಟೇಜ್ ಕದನ ನಡೆಯಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (DC vs KKR) ತಂಡಗಳು ಮುಖಾಮುಖಿ ಆಗಲಿದೆ. ಕೆಕೆಆರ್ಗೆ ಇದು ಸೇಡಿನ ಪಂದ್ಯ ಕೂಡ ಹೌದು. ಮೊದಲ ಸೆಣಸಾಟದಲ್ಲಿ ಕೆಕೆಆರ್ ವಿರುದ್ಧ ಡೆಲ್ಲಿ 44 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಇದೀಗ ಪಂತ್ ಪಡೆ ಅದೇ ಫಲಿತಾಂಶ ಪುನರಾವರ್ತಿಸುವ ತವಕದಲ್ಲಿದ್ದರೆ, ಇತ್ತ ಕೋಲ್ಕತ್ತಾ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ. ಅಲ್ಲದೆ ಪಾಯಿಂಟ್ ಪಟ್ಟಿಯಲ್ಲಿ (Point Table) ಮೇಲಕ್ಕೇರಲು ಉಭಯ ತಂಡಗಳಿಗೂ ಈ ಪಂದ್ಯ ಬಹುಮುಖ್ಯ ಆಗಿದ್ದು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಲ್ಲಿ ಇಲ್ಲಿಯವರೆಗೂ 7 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಗೆದ್ದು, ಉಳಿದ 4 ಪಂದ್ಯಗಳಲ್ಲಿ ಸೋತು, 6 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಇತ್ತ ಕೋಲ್ಕತ್ತಾ 8 ಪಂದ್ಯಗಳನ್ನಾಡಿ 3 ಪಂದ್ಯಗಳಲ್ಲಿ ಗೆದ್ದು, ಉಳಿದ 5 ಪಂದ್ಯಗಳಲ್ಲಿ ಸೋತು, 6 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಎಂಟರಲ್ಲಿ ಕೇವಲ 3 ಪಂದ್ಯಗಳನ್ನು ಗೆದ್ದಿರುವ ಕೆಕೆಆರ್ಗೆ ಇಲ್ಲಿಂದ ಮೇಲೆದ್ದು ಬರುವುದು ಸುಲಭವಲ್ಲ ಎಂಬುದು ಸ್ವತಃ ಅಯ್ಯರ್‌ಗೆ ತಿಳಿದಿದೆ. “ನಾವು ಈ ಮೂರು ಜಯಗಳನ್ನು ಮೊದಲ ನಾಲ್ಕು ಪಂದ್ಯಗಳಲ್ಲೇ ಸಾಧಿಸಿ ಭರವಸೆಯ ಆರಂಭ ಕಂಡುಕೊಂಡಿದ್ದೆವು. ಆದರೆ ಅನಂತರ ಯಾವುದೂ ನಮ್ಮೆಣಿಕೆಯಂತೆ ಸಾಗಲಿಲ್ಲ. ಆದರೂ ನಮಗೆ ತುಂಬು ವಿಶ್ವಾಸವಿದೆ. ನೂರು ಪ್ರತಿಶತ ಸಾಧನೆ ಹಾಕಿದರೆ ಈಡನ್ ಗಾರ್ಡನ್ಸ್ ತಲುಪುವುದು ನಮ್ಮ ಗುರಿ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.
ಕೆಕೆಆರ್ ಬ್ಯಾಟಿಂಗ್-ಬೌಲಿಂಗ್ನಲ್ಲಿ ಎಡವುತ್ತಿದೆ. ಕಳೆದ ವರ್ಷ ಕೆಕೆಆರ್ ತಂಡ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಆಲ್ರೌಂಡರ್ ವೆಂಕಟೇಶ್ ಅಯ್ಯರ್, ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಬಾರಿ ನಿರೀಕ್ಷಿತ ನಿರ್ವಹಣೆ ತೋರದಿರುವುದು ಹಿನ್ನಡೆ ತಂದಿದೆ. ಕೆಕೆಆರ್ ಬೌಲಿಂಗ್ ವಿಭಾಗದಲ್ಲಿ ಉಮೇಶ್ ಯಾದವ್, ಟಿಮ್ ಸೌಥಿ ಉತ್ತಮ ನಿರ್ವಹಣೆ ತೋರುತ್ತಿದ್ದು, ಉಳಿದವರಿಂದ ಉತ್ತಮ ಸಾಥ್ ಸಿಗುತ್ತಿಲ್ಲ. ನಾಯಕ ಶ್ರೇಯಸ್ ಅಯ್ಯರ್ ಸಹಿತ ಬ್ಯಾಟರ್‌ಗಳೂ ಸ್ಥಿರ ನಿರ್ವಹಣೆ ಕಂಡುಬರುತ್ತಿಲ್ಲ . ಆಂಡ್ರೊ ರಸೆಲ್ ಸ್ಫೋಟಕ ಆಟ ಕೂಡ ತಂಡಕ್ಕೆ ಗೆಲುವು ತಂದುಕೊಡುತ್ತಿಲ್ಲ.
ಇತ್ತ ಕಳೆದ ಪಂದ್ಯದಲ್ಲಿ ಆರ್ಆರ್ ವಿರುದ್ಧ ಕೊನೆಯ ಓವರ್ನ ನೋ ಬಾಲ್ ಡ್ರಾಮ ಮರೆತು ರಿಷಭ್ ಪಂತ್ ಪಡೆ ಕಣಕ್ಕಿಳಿಯಬೇಕಿದೆ. ಕುಟುಂಬ ಸದಸ್ಯರ ಕೊರೊನಾ ಪ್ರಕರಣದಿಂದಾಗಿ ಕ್ವಾರಂಟೈನ್‌ನಲ್ಲಿದ್ದ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಈಗ ತಂಡ ಕೂಡಿಕೊಂಡಿಕೊಂಡಿರುವುದು ಡೆಲ್ಲಿಗೆ ಸಮಧಾನಕರ ಅಂಶವಾಗಿದೆ. ಡೆಲ್ಲಿ ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ತಂಡದಲ್ಲಿ ಬದಲಾವಣೆ ಖಚಿತ. ಆಲ್ರೌಂಡರ್ ಲಲಿತ್ ಯಾದವ್ ಸ್ಪಿನ್ನರ್ ಆಗಿ ಮಿಂಚಿದ್ದರೂ, ಬ್ಯಾಟಿಂಗ್‌ನಲ್ಲಿ ಕಾಣಿಕೆ ನೀಡುತ್ತಿಲ್ಲ. ಹೀಗಾಗಿ ಸ್ಟ್ರೈಕರ್ ರಿಪಲ್ ಪಟೇಲ್‌ಗೆ ಅವಕಾಶದ ನಿರೀಕ್ಷೆ ಇದೆ. ಯಶ್ ಧುಲ್ ಅಥವಾ ಕೆಎಸ್ ಭರತ್ ಕೂಡ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಈವರೆಗೆ 30 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು ಇದರಲ್ಲಿ ಕೆಕೆಆರ್ 16 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಡೆಲ್ಲಿ 13 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದೊಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಇತ್ತ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ನಾಲ್ಕು ಪಂದ್ಯಗಳನ್ನು ತಂಡಗಳು ಚೇಸಿಂಗ್ ಮಾಡಿ ಗೆದ್ದಿದ್ದವು. ಆದರೆ ಕಳೆದ ಕೆಲವು ಪಂದ್ಯಗಳಲ್ಲಿ ಫಲಿತಾಂಶ ವಿಭಿನ್ನವಾಗಿ ಬಂದಿದೆ. ಕೊನೆಯ ಐದು ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಗೆದ್ದಿದ್ದು, ಡಿಫೆಂಡ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಹೀಗಾಗಿ ಟಾಸ್‌ನಲ್ಲಿ ಮಾಡುವ ಆಯ್ಕೆಯು ನಾಯಕರಿಗೆ ತುಂಬಾ ಕಷ್ಟಕರವಾಗಿದೆ ಎಂದು ಸಾಬೀತುಪಡಿಸಬಹುದು. ಅದರಲ್ಲೂ ವಿಶೇಷವಾಗಿ ಚೇಸ್‌ಗೆ ಆಯ್ಕೆ ಮಾಡಿದ ನಂತರ ಸತತವಾಗಿ ಎರಡು ಪಂದ್ಯಗಳನ್ನು ಕಳೆದುಕೊಂಡಿರುವ ಪಂತ್‌ಗೆ ನಿರ್ಧಾರ ತೆಗೆದುಕೊಳ್ಳುವುದು ಸವಾಲಾಗಿದೆ. ಹೀಗಾಗಿ ಪಿಚ್ ಕೂಡ ದೊಡ್ಡ ಪಾತ್ರವಹಿಸಲಿದೆ.
ಸಂಭಾವ್ಯ ಪ್ಲೇಯಿಂಗ್ XI:
ಕೆಕೆಆರ್: ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ರಿಂಕು ಸಿಂಗ್, ಆಂಡ್ರೆ ರಸೆಲ್, ಟಿಮ್ ಸೌಥಿ, ಶಿವ್ ಮಾವಿ, ಅನುಕುಲ್ ರಾಯ್.
ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ (ನಾಯಕ), ಪೃಥ್ವಿ ಶಾ, ಡೇವಿಡ್ ವಾರ್ನರ್, ಕೆಎಸ್ ಭರತ್/ಯಶ್ ಧುಲ್, ರೋಮ್‌ವೈನ್ ಪೊವೆಲ್, ರಿಪ್ಪಲ್ ಪಟೇಲ್, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಖಲೀಲ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಕುಲದೀಪ್ ಯಾದವ್.
Hardik Pandya: ರೋಚಕ ಪಂದ್ಯ ಮುಗಿದ ಬಳಿಕ ಹಾರ್ದಿಕ್-ರಶೀದ್ ಖಾನ್ ಆಡಿದ ಮಾತುಗಳೇನು ಕೇಳಿ
Rashid Khan: 6 ಎಸೆತಗಳಲ್ಲಿ 22 ರನ್: GT vs SRH ನಡುವಣ ಕೊನೆಯ ರೋಚಕ ಓವರ್ ಹೇಗಿತ್ತು ನೋಡಿ