ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್; ಪಶ್ಚಿಮ ವಲಯಕ್ಕೆ 6 ವಿಕೆಟ್ ಜಯ
Deodhar Trophy 2023: ಶಿವಂ ದುಬೆ ಮತ್ತು ಕಥನ್ ಪಟೇಲ್ ಅವರ ಮುರಿಯದ ಐದನೇ ವಿಕೆಟ್ ಶತಕದ ಜೊತೆಯಾಟದ ನೆರವಿನಿಂದ ಪಶ್ಚಿಮ ವಲಯ ತಂಡವು ದೇವಧರ್ ಟ್ರೋಫಿಯಲ್ಲಿ ಉತ್ತರ ವಲಯ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿದೆ.
ಶಿವಂ ದುಬೆ (Shivam Dube) ಮತ್ತು ಕಥನ್ ಪಟೇಲ್ (Kathan D Patel) ಅವರ ಅಜೇಯ ಅರ್ಧಶತಕ ಮತ್ತು ಇಬ್ಬರ ನಡುವಿನ ಮುರಿಯದ ಐದನೇ ವಿಕೆಟ್ ಶತಕದ ಜೊತೆಯಾಟದ ನೆರವಿನಿಂದ ಪಶ್ಚಿಮ ವಲಯ ತಂಡವು ದೇವಧರ್ ಟ್ರೋಫಿಯಲ್ಲಿ (Deodhar Trophy 2023) ಉತ್ತರ ವಲಯ ತಂಡವನ್ನು (North Zone vs West Zone) ಆರು ವಿಕೆಟ್‌ಗಳಿಂದ ಮಣಿಸಿದೆ. ಉತ್ತರ ವಲಯ ನೀಡಿದ 260 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಶ್ಚಿಮ ವಲಯ ತಂಡವು ದುಬೆ (ಔಟಾಗದೆ 85) ಮತ್ತು ಪಟೇಲ್ (ಔಟಾಗದೆ 63) ಅವರ ಐದನೇ ವಿಕೆಟ್‌ಗೆ ಮುರಿಯದ 138 ರನ್‌ಗಳ ಜೊತೆಯಾಟದಿಂದಾಗಿ 48.5 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 260 ಗುರಿ ತಲುಪಿತು. ಈ ಇಬ್ಬರಲ್ಲದೆ ಆರಂಭಿಕರಾದ ಹಾರ್ವಿಕ್ ದೇಸಾಯಿ (Harvik Desai) ಕೂಡ 56 ರನ್‌ಗಳ ಕೊಡುಗೆ ನೀಡಿದರು.
ಮೂವರಿಂದ ಅರ್ಧಶತಕ
ಉತ್ತರ ವಲಯ ನಾಯಕ ನಿತೀಶ್ ರಾಣಾ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ತಂಡದ ಪರ ಹಿಮಾಂಶು ರಾಣಾ ಮತ್ತು ನಾಯಕ ನಿತೀಶ್ ರಾಣಾ ತಲಾ 54 ರನ್‌ಗಳ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ಕೆಳಕ್ರಮಾಂಕದಲ್ಲಿ ಶುಭಂ ರೋಹಿಲಾ ಕೂಡ ಅರ್ಧಶತಕ ಸಿಡಿಸಿದರು. ಈ ಮೂವರ ಅರ್ಧಶತಕದ ನೆರವಿನಿಂದಾಗಿ ಉತ್ತರ ವಲಯ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 259 ರನ್ ಕಲೆಹಾಕಿತು. ಪಶ್ವಿಮ ವಲಯ ತಂಡದ ಪರ ಬೌಲಿಂಗ್ನಲ್ಲಿ ಮಿಂಚಿದ ಶಮ್ಸ್ ಮುಲ್ಲಾನಿ ಮೂರು ವಿಕೆಟ್ ಪಡೆದರೆ, ರಾಜವರ್ಧನ್ ಹಂಗರ್ಕೇಕರ್, ಸರ್ಫ್ರಾಜ್ ಖಾನ್ ಮತ್ತು ರಾಹುಲ್ ತ್ರಿಪಾಠಿ ತಲಾ 1 ವಿಕೆಟ್ ಪಡೆದರು. ಮಹತ್ವದ ಬ್ರೇಕ್ ಥ್ರೂ ನೀಡಿದ ಸರ್ಫ್ರಾಜ್ ಅರ್ಧಶತಕ ಗಳಿಸಿದ ಹಿಮಾಂಶು ರಾಣಾ ಅವರ ವಿಕೆಟ್ ಪಡೆದರು. ಕೊನೆಯಲ್ಲಿ, ಈ ವಿಕೆಟ್ ಬಹಳ ಮುಖ್ಯವಾಯಿತು.
Deodhar Trophy 2023: ದೇವಧರ್ ಟ್ರೋಫಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಮಯಾಂಕ್ ಪಡೆ..!
122 ರನ್‌ಗಳಿಗೆ 4 ವಿಕೆಟ್
ಉತ್ತರ ವಲಯ ನೀಡಿದ 260 ರನ್‌ಗಳ ಗುರಿ ಬೆನ್ನಟ್ಟಿದ ಪಶ್ಚಿಮ ವಲಯದ ಪರ ಓಪನರ್ ಹಾರ್ವಿಕ್ ದೇಸಾಯಿ ಅರ್ಧಶತಕ ಸಿಡಿಸಿದರು. ಆದರೆ ಮತ್ತೊಬ್ಬ ಆರಂಭಿಕ ಆಟಗಾರ, ನಾಯಕ ಪ್ರಿಯಾಂಕ್ ಪಾಂಚಾಲ್ ಕೇವಲ 14 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಮಯಾಂಕ್ ಯಾದವ್, ರಾಹುಲ್ ತ್ರಿಪಾಠಿ ಅವರನ್ನು ಬೌಲ್ಡ್ ಮಾಡಿ ದೊಡ್ಡ ಬ್ರೇಕ್ ಥ್ರೂ ನೀಡಿದರು. ಸಮರ್ಥ ವ್ಯಾಸ್ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಒಂದೆಡೆ ಗೆಲುವಿನ ಇನ್ನಿಂಗ್ಸ್ ಆಡುತ್ತಿದ್ದ ಆರಂಭಿಕ ಹಾರ್ವಿಕ್ ದೇಸಾಯಿ 56 ರನ್ಗಳಿದ್ದಾಗ ಹಿಮಾಂಶು ರಾಣಾ ಅವರ ನೇರ ಎಸೆತದಲ್ಲಿ ರನ್ ಔಟ್ ಆದರು. ಹೀಗಾಗಿ ಪಶ್ಚಿಮ ವಲಯ 122 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು.
ಐದನೇ ವಿಕೆಟ್‌ಗೆ 138 ರನ್‌ಗಳ ಜೊತೆಯಾಟ
ಪ್ರತಿ ಓವರ್‌ಗೆ ಅಗತ್ಯವಿರುವ ರನ್ ರೇಟ್ ಸುಮಾರು 6 ಆಗಿತ್ತು. ಹೀಗಾಗಿ ಪಶ್ಚಿಮ ವಲಯಕ್ಕೆ ದೊಡ್ಡ ಪಾಲುದಾರಿಕೆಯ ಅಗತ್ಯವಿತ್ತು. ಕೆಳಕ್ರಮಾಂಕದಲ್ಲಿ ಜೊತೆಯಾದ ಶಿವಂ ದುಬೆ ಮತ್ತು ಕಥನ್ ಪಟೇಲ್ ಮಾಡಿದ್ದು ಅದನ್ನೇ. ಇವರಿಬ್ಬರು ಐದನೇ ವಿಕೆಟ್‌ಗೆ 138 ರನ್‌ಗಳ ಜೊತೆಯಾಟ ನೀಡಿದರು. ಅಂತಿಮವಾಗಿ ಪಶ್ಚಿಮ ವಲಯ ತಂಡ ಇನ್ನೂ 7 ಎಸೆತಗಳು ಬಾಕಿ ಉಳಿದಿರುವಾಗಲೇ ಗೆಲುವಿನ ದಡ ಸೇರಿತು. ತಂಡದ ಪರ ಶಿವಂ ದುಬೆ 83 ಮತ್ತು ಕಥನ್ ಪಟೇಲ್ 63 ರನ್ ಗಳಿಸಿ ಅಜೇಯರಾಗಿ ಉಳಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:10 am, Mon, 31 July 23