
ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 14 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆರಂಭವಾಗಲಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್‌ಗೆ ಟೀಂ ಇಂಡಿಯಾದ ಪ್ಲೇಯಿಂಗ್ XI ಹೇಗಿರಲಿದೆ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಏಕೆಂದರೆ ರಿಷಭ್ ಪಂತ್ ಆಗಮನದಿಂದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ (Dhruv Jurel) ತಂಡದಿಂದ ಹೊರಬೀಳಬಹುದು ಎನ್ನಲಾಗುತ್ತಿತ್ತು. ಆದರೀಗ ಜುರೆಲ್ ಆಡುವ ಬಗ್ಗೆ ತಂಡದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಸ್ಪಷ್ಟನೆ ನೀಡಿದ್ದಾರೆ. ಆ ಪ್ರಕಾರ, ಪ್ರಸ್ತುತ ಉತ್ತಮ ಫಾರ್ಮ್ನಲ್ಲಿರುವ ಧ್ರುವ್ ಜುರೆಲ್ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವುದು ಖಚಿತವಾಗಿದೆ.
ನವೆಂಬರ್ 12 ರ ಬುಧವಾರ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಟೀಂ ಇಂಡಿಯಾದ ಎರಡನೇ ಅಭ್ಯಾಸ ಸೆಷನ್ಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ತಂಡದ ಆಡುವ ಹನ್ನೊಂದರ ಬಳಗದ ಬಗ್ಗೆ ಮಾತನಾಡಿದ ಸಹಾಯಕ ಕೋಚ್ ಟೆನ್ ಡೋಸ್ಚೇಟ್, ‘ನಮಗೆ (ಪ್ಲೇಯಿಂಗ್ XI) ಸಂಯೋಜನೆಯ ಬಗ್ಗೆ ಸ್ಪಷ್ಟನೆ ಇದೇ ಎಂದು ನಾನು ಭಾವಿಸುತ್ತೇನೆ. ಕಳೆದ ಆರು ತಿಂಗಳುಗಳಲ್ಲಿ ಧ್ರುವ್ ಜುರೆಲ್ ಆಡಿದ ರೀತಿ ಮತ್ತು ಕಳೆದ ವಾರ ಬೆಂಗಳೂರಿನಲ್ಲಿ ಅವರು ಬಾರಿಸಿದ ಎರಡು ಶತಕಗಳನ್ನು ನೋಡಿದರೆ, ಅವರು ಈ ವಾರ ಆಡುವುದು ಖಚಿತ’ ಎಂದಿದ್ದಾರೆ.
ಕಳೆದ ವರ್ಷವಷ್ಟೇ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಜುರೆಲ್ ಆರಂಭದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಆದರೆ ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧ ನಡೆದ ತವರು ಸರಣಿಯಲ್ಲಿ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ವಹಿಸಿಕೊಂಡ ಅವರು, ತಮ್ಮ ಚೊಚ್ಚಲ ಟೆಸ್ಟ್ ಶತಕ ಸೇರಿದಂತೆ ಮೂರು ಇನ್ನಿಂಗ್ಸ್‌ಗಳಲ್ಲಿ 175 ರನ್ ಬಾರಿಸಿದ್ದರು. ನಂತರ ನಡೆದಿದ್ದ ದಕ್ಷಿಣ ಆಫ್ರಿಕಾ ಎ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಜುರೆಲ್ ಶತಕ ಬಾರಿಸಿದ್ದರು.
IND vs SA: ಮೊದಲ ಟೆಸ್ಟ್‌ಗಾಗಿ ಕೋಲ್ಕತ್ತಾಗೆ ಬಂದಿಳಿದ ಭಾರತ- ಆಫ್ರಿಕಾ ಆಟಗಾರರು
ಆದಾಗ್ಯೂ, ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಷಭ್ ಪಂತ್ ಈ ಸರಣಿಯಲ್ಲಿ ಮತ್ತೆ ತಂಡಕ್ಕೆ ಮರಳುತ್ತಿರುವುದರಿಂದ ಜುರೆಲ್ ವಿಕೆಟ್ ಕೀಪರ್ ಆಗಿ ಆಡುವುದಿಲ್ಲ. ಪಂತ್ ಈ ಜವಾಬ್ದಾರಿಯನ್ನು ಹೊರಲಿದ್ದು, ಜುರೆಲ್ ಕೇವಲ ಬ್ಯಾಟ್ಸ್‌ಮನ್ ಆಗಿ ಆಡಲಿದ್ದಾರೆ. ಇವರಿಬ್ಬರಲ್ಲದೆ ಕೆಎಲ್ ರಾಹುಲ್ ಕೂಡ ತಂಡದಲಿದ್ದು, ಅವರು ಕೂಡ ವಿಕೆಟ್ ಕೀಪಿಂಗ್ ಮಾಡಬಲ್ಲರು. ಇದರರ್ಥ ಮೊದಲ ಟೆಸ್ಟ್‌ಗೆ ಭಾರತ ತಂಡದಲ್ಲಿ ಮೂವರು ವಿಕೆಟ್ ಕೀಪರ್ಗಳು ಕಾಣಿಸಿಕೊಳ್ಳಲಿದ್ದಾರೆ. ಜುರೆಲ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವುದು ಖಚಿತವಾಗಿರುವುದರಿಂದ ಯುವ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಹೊರಗುಳಿಯಬೇಕಾಗಬಹುದು ಎಂದು ಟೆನ್ ಡೋಸ್ಚೇಟ್ ಬಹಿರಂಗಪಡಿಸಿದ್ದಾರೆ. ನಿತೀಶ್ ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಭಾಗವಾಗಿದ್ದರು, ಆದರೆ ಅಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ