‘ಕ್ರಿಕೆಟ್’ ಜಗತ್ತಿನ ಎರಡನೇ ಅತ್ಯಂತ ಜನಪ್ರಿಯ ಕ್ರೀಡೆಯಾಗಿದ್ದು, 2.5 ಶತಕೋಟಿಗೂ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ಈ ಕ್ರೀಡೆಯು ಸುಮಾರು 300 ವರ್ಷಗಳಿಂದಲೂ ಇದೆ. ಇಂದು ಪ್ರಪಂಚದಾದ್ಯಂತ ಜನರು ಆಡುವ, ವೀಕ್ಷಿಸುವ ಮತ್ತು ಆನಂದಿಸುವ ಒಂದು ನಿರ್ದಿಷ್ಟ ಕ್ರೀಡೆಯಲ್ಲಿ ಕ್ರಿಕೆಟ್ ಪ್ರಮುಖವಾದೂದು. ಕ್ರಿಕೆಟ್ಗೆ ಅತಿ ಹೆಚ್ಚು ಅಭಿಮಾನಿಗಳು ಇರುವುದು ಭಾರತದಲ್ಲೇ. ಪ್ರತಿಯೊಬ್ಬ ಕ್ರಿಕೆಟ್ ಫ್ಯಾನ್ಗೆ ತಾನು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ ರೀತಿ ದೊಡ್ಡ ಕ್ರಿಕೆಟಿಗ ಆಗಬೇಕು ಎಂಬ ಕನಸು ಇರುತ್ತದೆ. ಆದರೆ, ಅದು ಅಷ್ಟೊಂದು ಸುಲಭವಲ್ಲ. ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಬೇಕು ಎಂದರೆ ನೀರು ಕುಡಿದಷ್ಟು ಸುಲಭಲ್ಲ. ಇದಕ್ಕೆ ಅದರದ್ದೇಯಾದ ಕೆಲವು ನಿಯಮಗಳಿವೆ. ಆದರೆ, ಕಷ್ಟ ಪಟ್ಟರೆ ನಿರಂತರವಾಗಿ ಶ್ರಮವಹಿಸುತ್ತಿದ್ದರೆ ಯಾವುದೂ ಅಸಾಧ್ಯವಲ್ಲ. ಹಾಗಾದರೆ, ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಆಗಬೇಕು ಎಂದರೆ ಏನೆಲ್ಲ ಮಾಡಬೇಕು?. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಕ್ರಿಕೆಟಿಗ ಎಂದರೆ ಕ್ರಿಕೆಟ್ ಕ್ರೀಡೆಯನ್ನು ವೃತ್ತಿಪರವಾಗಿ ಆಡುವ ವ್ಯಕ್ತಿ. ವೃತ್ತಿಪರ ಕ್ರಿಕೆಟ್ ದೈಹಿಕವಾಗಿ ಕಠಿಣ ಮತ್ತು ಹೆಚ್ಚು ಸ್ಪರ್ಧಾತ್ಮಕ ಕ್ರೀಡೆಯಾಗಿದೆ. ಇದರಲ್ಲಿ ಕೆಲವೇ ಕೆಲವು ಪ್ರತಿಭಾವಂತ ವ್ಯಕ್ತಿಗಳು ಸಾಧಕರಾಗುತ್ತಾರೆ. ಕ್ರಿಕೆಟ್ ಆಟಗಾರರಲ್ಲಿ ನಾಲ್ಕು ಪ್ರಾಥಮಿಕ ವಿಧಗಳಿವೆ. ಆಲ್ ರೌಂಡರ್, ಬ್ಯಾಟರ್, ಬೌಲರ್ ಮತ್ತು ವಿಕೆಟ್ ಕೀಪರ್.
ವೃತ್ತಿಪರ ಕ್ರಿಕೆಟಿಗನಾಗುವುದು ಅಷ್ಟೊಂದು ಸುಲಭವಲ್ಲ. ಯಶಸ್ವಿ ಕ್ರಿಕೆಟ್ ಆಟಗಾರನಾಗಲು, ಆತ ಆಟವನ್ನು ಚೆನ್ನಾಗಿ ಆಡುವ ಸಾಮರ್ಥ್ಯ ಹೊಂದಿರಬೇಕು. ಅದನ್ನು ವೃತ್ತಿಯನ್ನಾಗಿಸಲು ಆತ ವಿಶೇಷ ಪ್ರತಿಭೆಗಳನ್ನು ಹೊಂದಿರಬೇಕು. ಕ್ರಿಕೆಟಿಗನಾಗಲು ಕೆಲವು ಅವಶ್ಯಕತೆಗಳನ್ನು ಕೆಳಗೆ ನೀಡಲಾಗಿದೆ.
ವೃತ್ತಿಪರ ಕ್ರಿಕೆಟಿಗನಾಗಲು ಅಥವಾ ದೊಡ್ಡ ಮಟ್ಟದಲ್ಲಿ ಸ್ಪರ್ಧಿಸಲು, ಅವರು ತಮ್ಮ ಅಭ್ಯಾಸದಲ್ಲಿ ಸಾಕಷ್ಟು ಸಮಯ ಮತ್ತು ಶ್ರಮವನ್ನು ಹಾಕಬೇಕು. ಹಾಗೆಯೆ ಈ ಆಟವನ್ನು ಗ್ರಹಿಸಲು ಬ್ಯಾಟ್ ಮತ್ತು ಚೆಂಡನ್ನು ಹೇಗೆ ಬಳಸಬೇಕು ಎಂಬುದನ್ನು ಅರ್ಥಮಾಡಿಕೊಂಡರೆ ಸಾಲದು, ಭಾಷೆಗಳು, ಕ್ರಿಕೆಟ್‌ನಲ್ಲಿ ಬಳಸುವ ಉಪಕರಣಗಳು ಮತ್ತು ಆಟದ ಕುರಿತ ಕಾನೂನುಗಳನ್ನು ಸಹ ಕಲಿಯಬೇಕು.
ನೀವು ಕ್ರಿಕೆಟಿಗ ಆಗಬೇಕಾದರೆ ಯಾವ ವಿಭಾಗದಲ್ಲಿ ಬಲಿಷ್ಠರಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳಬೇಕು. ನೀವು ಉತ್ತಮ ಬೌಲರ್ ಅಥವಾ ಉತ್ತಮ ಬ್ಯಾಟರ್ ಎಂಬುದನ್ನು ಅಭ್ಯಾಸದ ಮೂಲಕ ತಿಳಿದುಕೊಳ್ಳಬೇಕು. ನಿಮ್ಮ ಯಾವುದರಲ್ಲಿ ದುರ್ಬಲರಾಗಿದ್ದೀರಿ, ಅದನ್ನು ಸುಧಾರಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳಬೇಕು.
ಯುವ ಆಟಗಾರನಾಗಿ, ನೀವು ಕ್ರಿಕೆಟ್ ಅಕಾಡೆಮಿಗೆ ಹೋಗಬೇಕೆ ಅಥವಾ ಬೇಡವೇ ಎಂಬುದನ್ನು ಮೊದಲೇ ನಿರ್ಧರಿಸಬೇಕು. ಏಕೆಂದರೆ ಹೆಚ್ಚಿನ ಸ್ಥಳೀಯ ಕ್ಲಬ್‌ಗಳಿಗಿಂತ ಅಕಾಡೆಮಿಗಳು ಗಣನೀಯವಾಗಿ ದೊಡ್ಡ ಮಟ್ಟದ ಸ್ಪರ್ಧಾತ್ಮಕತೆಯನ್ನು ಹೊಂದಿವೆ. ನೀವು ಕ್ರಿಕೆಟ್ ವೃತ್ತಿಯನ್ನು ಮಾಡಲು ಬಯಸಿದರೆ, ಅಕಾಡೆಮಿಗೆ ಹೋಗುವುದು ಸೂಕ್ತ ಸ್ಥಳವಾಗಿದೆ.
ನೀವು ಸ್ಟಾರ್ ಕ್ರಿಕೆಟಿಗನಾಗಬೇಕು ಎಂದುಕೊಂಡರೆ ಮೊದಲ ಹೆಜ್ಜೆ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಳ್ಳುವುದು. ಇಲ್ಲಿ ಉತ್ತಮ ತರಬೇತುದಾರರೊಂದಿಗೆ ಅಭ್ಯಾಸ ನಡೆಸಬೇಕು. ಅವರ ಸಲಹೆಗಳು ಮತ್ತು ಹೇಳಿಕೊಡುವ ತಂತ್ರಗಳನ್ನು ಕಲಿತು ಕ್ರಿಕೆಟ್ ಅಕಾಡೆಮಿಯಲ್ಲೇ ಹೆಚ್ಚಿನ ಸಮಯವನ್ನು ಕಳೆಯಬೇಕು. ಜೊತೆಗೆ ಅಕಾಡೆಮಿಯಲ್ಲಿರುವ ಇತರೆ ಆಟಗಾರರೊಂದಿಗೆ ಬೆರೆತು ಅವರ ಟೆಕ್ನಿಕ್ಗಳನ್ನು ಕಲಿಯುವುದು ಕೂಡ ಮುಖ್ಯ.
ಕ್ರಿಕೆಟ್ ಆಟಗಾರರು ತಮ್ಮ ತರಬೇತುದಾರರೊಂದಿಗೆ ಏಕೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆಂದು ನೀವು ಎಂದಾದರೂ ಯೋಚಿಸಿದ್ದೀರಾ?. ಏಕೆಂದರೆ ತರಬೇತುದಾರರು ನಿಮ್ಮನ್ನು ಕ್ರಿಕೆಟ್ ಲೋಕಕ್ಕೆ ಪರಿಚಯಿಸಲು ಸಹಾಯ ಮಾಡುವುದಲ್ಲದೆ, ಅವರ ಮಿತಿಗಳನ್ನು ಮೀರಿ ಶ್ರಮಿಸುತ್ತಾರೆ. ಆದರೆ, ಅವರು ಎಲ್ಲರ ಎದುರು ಕಾಣಿಸುವುದಿಲ್ಲ. ಇಂದು ಅನೇಕ ನಿವೃತ್ತ ಕ್ರಿಕೆಟಿಗರು ತಮ್ಮ ಅಕಾಡೆಮಿ ತೆರೆದಿದ್ದಾರೆ. ಕೆಲವರು ತರಬೇತುದಾರರಾಗಿ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ. ಇಂಥವರ ಅಕಾಡೆಮಿಗೆ ಸೇರಿದರೆ ಉತ್ತಮ.
ವೃತ್ತಿಪರ ಕ್ರಿಕೆಟಿಗನಾಗಿ ಕ್ರಿಕೆಟ್ ಜೀವನವನ್ನು ಪ್ರಾರಂಭಿಸಲು, ಮೊದಲು ವೃತ್ತಿಪರ ತಂಡಕ್ಕಾಗಿ ಆಡಬೇಕು. ನೀವು ಶಾಲಾ ಅಥವಾ ಕಾಲೇಜು ಕ್ರಿಕೆಟ್ ತಂಡದ ಸದಸ್ಯರಾಗಿದ್ದರೆ ಇದು ನಿಮಗೆ ಸಹಾಯ ಮಾಡುತ್ತದೆ. ನೀವು ವಿವಿಧ ಖಾಸಗಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಸ್ಪರ್ಧಿಸುವ ತಂಡವನ್ನು ಸೇರಿಕೊಳ್ಳಬಹುದು. ಅಥವಾ ಯಾವುದಾದರು ಒಂದು ಪ್ರಸಿದ್ಧ ಕ್ಲಬ್‌ಗಾಗಿ ಆಡಲು ಪ್ರಾರಂಭಿಸಬಹುದು. ಆದರೆ, ನೀವು ಯಾವುದೇ ಪ್ರಮುಖ ಕ್ರಿಕೆಟ್ ಕ್ಲಬ್‌ನಿಂದ ಮುಂದಿನ ಹಂತಕ್ಕೆ ಆಯ್ಕೆಯಾಗಲು, ಆ ಕ್ಲಬ್‌ನಿಂದ ನಿರ್ದಿಷ್ಟಪಡಿಸಿದ ಮೂಲಭೂತ ಮಾನದಂಡಗಳನ್ನು ಪೂರೈಸಬೇಕು.
ಕ್ಲಬ್ನಲ್ಲಿ ಆಡಲು ಪ್ರಾರಂಭಿಸಿದ ನಂತರ, ಅಲ್ಲಿ ಉತ್ತಮ ಪ್ರದರ್ಶನ ನೀಡಿ ದೇಶಾದ್ಯಂತ ನಡೆಯುವ ಸ್ಪರ್ಧೆಗಳಿಗೆ ಹಾಜರಾಗಬೇಕು. ಮುಖ್ಯವಾಗಿ ನೀವು ನಿಮ್ಮ ರಾಜ್ಯ ತಂಡವನ್ನು ಪ್ರತಿನಿಧಿಸುವುದು ವೃತ್ತಿಪರ ಕ್ರಿಕೆಟಿಗರಾಗಲು ಮೊದಲ ಹೆಜ್ಜೆಯಾಗಿದೆ. ರಣಜಿ ಟ್ರೋಫಿ ಇದಕ್ಕೆ ಒಂದು ಉದಾಹರಣೆ. ಅಂದರೆ ನೀವು ಕರ್ನಾಟಕದವರಾಗಿದ್ದರೆ ಕರ್ನಾಟಕದ ರಣಜಿ ತಂಡಕ್ಕೆ ಆಯ್ಕೆಯಾಗಿ ಆಡಬೇಕು. ಇಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ಗಳಿಸಿದರೆ, ನೀವು ಬಿಸಿಸಿಐ ಆಯ್ಕೆದಾರರ ಕಣ್ಣಿಗೆ ಬೀಳಬಹುದು.
ಭಾರತದಲ್ಲಿ ಕ್ರಿಕೆಟಿಗರಾಗಲು ಅಗತ್ಯವಿರುವ ಕೆಲವು ಹಂತಗಳು ಈ ಕೆಳಗಿನಂತಿವೆ
ಹಂತ 1- ಶಿಕ್ಷಣ ಅರ್ಹತೆ
ಕ್ರಿಕೆಟ್ ಆಡಲು ಯಾವುದೇ ಶಿಕ್ಷಣದ ಅಗತ್ಯವಿಲ್ಲ. ಆದರೆ, ರಾಷ್ಟ್ರೀಯ ಅಥವಾ ಐಪಿಎಲ್ ತಂಡಗಳಿಗೆ ಪ್ರವೇಶ ಪಡೆಯುವುದು ಕಠಿಣ ಆಗಿರುವುದರಿಂದ ಬೇರೆ ವೃತ್ತಿಯನ್ನು ಮುಂದುವರಿಸಲು ಬ್ಯಾಕ್‌ಅಪ್ ಆಗಿ ಸಾಧ್ಯವಾದಷ್ಟು ಶಾಲಾ ಶಿಕ್ಷಣವನ್ನು ಮುಗಿಸಿದರೆ ಉತ್ತಮ. ಇದರ ಜೊತೆಗೆ, ಕೆಲ ಕ್ರಿಕೆಟ್ ಅಕಾಡೆಮಿಗಳು 10 ನೇ ತರಗತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡುತ್ತದೆ.
ಹಂತ 2- ಕ್ರಿಕೆಟ್ಗೆ ಸಂಬಂಧಿಸಿದ ಕೆಲ ಕೋರ್ಸ್ಗಳು
ಫಿಟ್ನೆಸ್ ಮತ್ತು ಆಹಾರ ಪದ್ದತಿ ಕಡ್ಡಾಯ
ವೃತ್ತಿಪರ ಕ್ರಿಕೆಟಿಗರು ತಮ್ಮ ಶಿಸ್ತಿನ ಕಾರಣದಿಂದಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಕ್ರಿಕೆಟ್ ದೈಹಿಕವಾದ ಕ್ರೀಡೆಯಾಗಿದ್ದು, ನೀವು ಫಿಟ್ ಆಗಿರುವುದು ಕಡ್ಡಾಯ. ನಿಮ್ಮ ಫಿಟ್ನೆಸ್ ಅತ್ಯುತ್ತಮವಾಗಿರಬೇಕು. ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮವನ್ನು ಪಾಲಿಸಲೇಬೇಕು.
ನೀವು ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರೆ ನಿಮ್ಮ ಸಂಬಳ ಕೋಟಿಯಲ್ಲಿರುತ್ತದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗ್ರೇಡ್ ಆಧಾರದ ಮೇಲೆ ತನ್ನ ರಾಷ್ಟ್ರೀಯ ತಂಡದ ಆಟಗಾರರಿಗೆ ಸ್ಯಾಲರಿಯನ್ನು ನೀಡುತ್ತದೆ. ಇದರಲ್ಲಿ ಒಟ್ಟು ನಾಲ್ಕು ಗ್ರೇಡ್ಗಳನ್ನು ಮಾಡಲಾಗಿದೆ. A+, A, B ಮತ್ತು C ಎಂಬ ನಾಲ್ಕು ಗ್ರೇಡ್ಗಳಿವೆ. ಇದರಲ್ಲಿ ಎ ಪ್ಲಸ್ ಬ್ರಾಕೆಟ್‌ನಲ್ಲಿ ವಾರ್ಷಿಕ 7 ಕೋಟಿ ರೂ. ಸ್ಯಾಲರಿ, ಎಯಲ್ಲಿ ರೂ. 5 ಕೋಟಿ, ಬಿಯಲ್ಲಿ ರೂ. 3 ಕೋಟಿ ಮತ್ತು ಸಿ ಕೆಟಗರಿಯಲ್ಲಿರುವ ಆಟಗಾರರಿಗೆ ವರ್ಷಕ್ಕೆ ಒಂದು ಕೋಟಿ ರೂ. ಸಂಬಳವಾಗಿ ನೀಡಲಾಗುತ್ತದೆ. ಇದರ ಜೊತೆಗೆ ಪ್ರತಿ ಪಂದ್ಯಕ್ಕೆ ಹಣವನ್ನು ನೀಡಲಾಗುತ್ತದೆ. ದೇಶೀಯ ಕ್ರಿಕೆಟ್ ಆಡುವ ಆಟಗಾರರಿಗೂ ಬಿಸಿಸಿಐ ಸಂಬಳ ನೀಡುತ್ತದೆ. ಐಪಿಎಲ್ನಿಂದಲೂ ಹಣ ಗಳಿಸಬಹುದು.
ಮಹಿಳೆಯರು ಕೂಡ ಕ್ರಿಕೆಟಿಗರಾಗಬೇಕು ಎಂದರೆ ಇದೇ ನಿಯಮವನ್ನು ಪಾಲಿಸಬೇಕು. ನೀವು ಕ್ರಿಕೆಟ್ ಅಕಾಡೆಮಿ ಅಥವಾ ಕ್ಲಬ್‌ಗೆ ಆಯ್ಕೆ ಆಗಿ ಉತ್ತಮ ಪ್ರದರ್ಶನ ನೀಡಬೇಕು. ಏಕೆಂದರೆ ಕ್ರಿಕೆಟ್ ಅಕಾಡೆಮಿಯ ಅಧಿಕಾರಿಗಳು ಬಿಸಿಸಿಐ ಆಯ್ಕೆಗಾರರೊಂದಿಗೆ ನಿರಂತರವಾಗಿ ಸಂಪರ್ಕವನ್ನು ಹೊಂದಿರುತ್ತಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಥವಾ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ಗಳು ಘೋಷಿಸುವ ಪರೀಕ್ಷೆ ಮತ್ತು ಆಯ್ಕೆಯ ಶಿಬಿರಗಳ ಬಗ್ಗೆ ಗಮನವಿರಲಿ. ಅಂದರೆ ಬಿಸಿಸಿಐ ಕೆಲವು ಬಾರಿ ನಿಮ್ಮ ಪ್ರದರ್ಶನವನ್ನು ಗಮನಿಸಲು ಮೈದಾನಕ್ಕೆ ಬರುತ್ತಾರೆ. ಆಗ ನೀವು ಅವರ ಮನಗೆದ್ದರೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಬಹುದು.
ಇದರ ಜೊತೆಗೆ ಈಗ ವುಮೆನ್ಸ್ ಬಿಗ್ ಬ್ಯಾಷ್ ಲೀಗ್, ದಿ ಹಂಡ್ರೆಡ್ ಮತ್ತು ಮಹಿಳಾ ಪ್ರೀಮಿಯರ್ ಲೀಗ್ ಹೀಗೆ ವಿಶ್ವದಾದ್ಯಂತ ಹಲವಾರು ಅಂತರರಾಷ್ಟ್ರೀಯ ಲೀಗ್‌ಗಳಿವೆ. ಈ ಮೂಲಕ ಮಹಿಳಾ ಕ್ರಿಕೆಟ್ ಕೂಡ ಹೆಚ್ಚು ಗಮನ ಸೆಳೆಯುತ್ತಿದೆ. ದೇಶೀಯ ಲೀಗ್‌ಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುವ ಮೂಲಕ ಮತ್ತು ವಿವಿಧ ಅಂತರರಾಷ್ಟ್ರೀಯ ಲೀಗ್‌ಗಳಲ್ಲಿ ಆಡಿ ಮಿಂಚುವ ಮೂಲಕ ಭಾರತವನ್ನು ಪ್ರತಿನಿಧಿಸುವ ಕನಸು ನನಸು ಮಾಡಬಹುದು.
Published On - 10:18 am, Mon, 29 April 24