Asia Cup 2022: ಭಾರತ-ಪಾಕ್ ಅಲ್ಲ, ಏಷ್ಯಾಕಪ್…ಟೀಮ್ ಇಂಡಿಯಾಗೆ ಗಂಗೂಲಿ ಖಡಕ್ ಸೂಚನೆ
Asia Cup 2022: ಭಾರತ ಏಷ್ಯಾಕಪ್ನಲ್ಲಿ 7 ಬಾರಿ ಚಾಂಪಿಯನ್ ಆಗಿದೆ. ಈ ವೇಳೆ 14 ಬಾರಿ ಪಾಕಿಸ್ತಾನವನ್ನು ಎದುರಿಸಿದ್ದಾರೆ. ಇದರಲ್ಲಿ ಭಾರತ 8 ಪಂದ್ಯಗಳನ್ನು ಗೆದ್ದರೆ, 5 ಪಂದ್ಯಗಳಲ್ಲಿ ಸೋತಿದೆ.
ಏಷ್ಯಾ ಕಪ್ 2022ರ (Asia Cup 2022) ಕೌಂಟ್ ಡೌನ್ ಶುರುವಾಗಿದೆ. ಇಡೀ ವಿಶ್ವ ಕ್ರಿಕೆಟ್ ಪ್ರೇಮಿಗಳ ಕಣ್ಣು ಭಾರತ-ಪಾಕಿಸ್ತಾನ್ ಪಂದ್ಯದ ಮೇಲಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಎಷ್ಟು ಕಾತುರದಿಂದ ಕಾಯುತ್ತಿದ್ದಾರೆ. ಇದಕ್ಕೆ ಸಾಕ್ಷಿಯೇ ಕೇವಲ 3 ಗಂಟೆಗಳಲ್ಲಿ ಈ ಪಂದ್ಯದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಆಗಸ್ಟ್ 28 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟೀಮ್ ಇಂಡಿಯಾಗೆ ಖಡಕ್ ಸೂಚನೆ ನೀಡಿದ್ದಾರೆ.
ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವು ಪಾಕಿಸ್ತಾನ್ ವಿರುದ್ದ 10 ವಿಕೆಟ್‌ಗಳ ಹೀನಾಯ ಸೋಲನುಭವಿಸಿತ್ತು. ಹೀಗಾಗಿಯೇ ಏಷ್ಯಾಕಪ್ನಲ್ಲಿ ಮುಖಾಮುಖಿಯನ್ನು ಸೇಡಿನ ಪಂದ್ಯ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಈ ಪಂದ್ಯದ ಬಗ್ಗೆ ಮಾತನಾಡಿರುವ ಸೌರವ್ ಗಂಗೂಲಿ, ಭಾರತ ಮತ್ತು ಪಾಕಿಸ್ತಾನದ ಮ್ಯಾಚ್ ಉಳಿದ ಪಂದ್ಯಗಳಂತೆಯೇ, ಅದರಲ್ಲಿ ವಿಶೇಷತೆಗಳೇನು ಇಲ್ಲ ಹೇಳಿದ್ದಾರೆ. ಅಲ್ಲದೆ ಟೀಮ್ ಇಂಡಿಯಾ ಪಾಕ್ ವಿರುದ್ದದ ಗೆಲುವಿಗಿಂತಲೂ ಏಷ್ಯಾಕಪ್ ಗೆಲುವಿನ ಬಗ್ಗೆ ಯೋಚಿಸಬೇಕೆಂದು ದಾದಾ ಕಿವಿಮಾತು ಹೇಳಿದ್ದಾರೆ.
ನಾನು ಈ ಟೂರ್ನಿಯನ್ನು ಏಷ್ಯಾಕಪ್ ಆಗಿ ನೋಡುತ್ತಿದ್ದೇನೆ. ಯಾವುದೇ ಪಂದ್ಯಾವಳಿಯನ್ನು ಭಾರತ ಮತ್ತು ಪಾಕಿಸ್ತಾನ ಎಂದು ನೋಡಲಾಗುವುದಿಲ್ಲ. ನಾನು ಆಡುವ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯವು ನನಗೆ ಇತರೆ ಪಂದ್ಯಗಳಂತೆಯೇ ಇತ್ತು. ನಾವು ಯಾವಾಗಲೂ ಟೂರ್ನಿ ಗೆಲ್ಲುವತ್ತ ಗಮನ ಹರಿಸಬೇಕೆಂದು ಎಂದು ಗಂಗೂಲಿ ಹೇಳಿದ್ದಾರೆ. ಭಾರತ ಉತ್ತಮ ತಂಡವಾಗಿದ್ದು, ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಏಷ್ಯಾಕಪ್‌ನಲ್ಲೂ ತಂಡ ಅದೇ ರೀತಿ ಮಾಡುವ ನಿರೀಕ್ಷೆಯಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.
ಭಾರತ ಏಷ್ಯಾಕಪ್ನಲ್ಲಿ 7 ಬಾರಿ ಚಾಂಪಿಯನ್ ಆಗಿದೆ. ಈ ವೇಳೆ 14 ಬಾರಿ ಪಾಕಿಸ್ತಾನವನ್ನು ಎದುರಿಸಿದ್ದಾರೆ. ಇದರಲ್ಲಿ ಭಾರತ 8 ಪಂದ್ಯಗಳನ್ನು ಗೆದ್ದರೆ, 5 ಪಂದ್ಯಗಳಲ್ಲಿ ಸೋತಿದೆ. ಇನ್ನು ಕಳೆದ ಟಿ20 ವಿಶ್ವಕಪ್ನಲ್ಲಿನ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ ಟೀಮ್ ಇಂಡಿಯಾ. ಹೀಗಾಗಿ ಆಗಸ್ಟ್ 28 ರಂದು ರೋಚಕ ಹಣಾಹಣಿಯನ್ನು ನಿರೀಕ್ಷಿಸಬಹುದು.