Jasprit Bumrah: ಒಂದೇ ಓವರ್​ನಲ್ಲಿ 35 ರನ್​: ವಿಶ್ವ ದಾಖಲೆ ನಿರ್ಮಿಸಿದ ಜಸ್​ಪ್ರೀತ್ ಬುಮ್ರಾ

| Updated By: ಝಾಹಿರ್ ಯೂಸುಫ್

Updated on: Jul 02, 2022 | 4:24 PM

ENG vs IND: ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 416 ರನ್​ಗಳಿಗೆ ಆಲೌಟ್ ಆಗಿದೆ. ವಿಶೇಷ ಎಂದರೆ 98 ರನ್​ಗೆ 5 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ಶತಕ ನೆರವಿನಿಂದ ಅಂತಿಮವಾಗಿ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ.

Jasprit Bumrah: ಒಂದೇ ಓವರ್​ನಲ್ಲಿ 35 ರನ್​: ವಿಶ್ವ ದಾಖಲೆ ನಿರ್ಮಿಸಿದ ಜಸ್​ಪ್ರೀತ್ ಬುಮ್ರಾ
Jasprit Bumrah
Follow us on

ಬರ್ಮಿಂಗ್​ಹ್ಯಾಮ್​ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ (England vs India 5th Test) ವಿರುದ್ದದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ನಾಯಕ ಜಸ್​ಪ್ರೀತ್ ಬುಮ್ರಾ (Jasprit Bumrah) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಬ್ಯಾಟ್ ಮೂಲಕ ಎಂಬುದು ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 98 ರನ್​ ಆಗುವಷ್ಟರಲ್ಲಿ 5 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ರಿಷಭ್ ಪಂತ್ (Rishabh Pant) ಹಾಗೂ ರವೀಂದ್ರ ಜಡೇಜಾ (Ravindra Jadeja) ಉತ್ತಮ ಜೊತೆಯಾಟವಾಡಿದರು. 6ನೇ ವಿಕೆಟ್​ಗೆ 222 ರನ್​ಗಳನ್ನು ಕಲೆಹಾಕುವ ಮೂಲಕ ತಂಡಕ್ಕೆ ಆಸರೆಯಾದರು. ಈ ವೇಳೆ ರಿಷಭ್ ಪಂತ್ ಕೇವಲ 89 ಎಸೆತಗಳಲ್ಲಿ 15 ಫೋರ್ ಹಾಗೂ ಒಂದು ಸಿಕ್ಸ್​ನೊಂದಿಗೆ​ ಶತಕ ಪೂರೈಸಿದರು. ಅಂತಿಮವಾಗಿ ಪಂತ್ 111 ಎಸೆತಗಳಲ್ಲಿ 146 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಇನ್ನು 2ನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ ರವೀಂದ್ರ ಜಡೇಜಾ 183 ಎಸೆತಗಳಲ್ಲಿ ಶತಕ ಪೂರೈಸಿದರು. ಸೆಂಚುರಿ ಬಳಿಕ ಬಿರುಸಿನ ಆಟಕ್ಕೆ ಮುಂದಾದ ಜಡೇಜಾ (104) ಜೇಮ್ಸ್ ಅ್ಯಂಡರ್ಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ತಂಡದ ಮೊತ್ತ 9 ವಿಕೆಟ್ ನಷ್ಟಕ್ಕೆ 375 ಆಗಿದ್ದ ವೇಳೆ ನಾಯಕ ಜಸ್​ಪ್ರೀತ್ ಬುಮ್ರಾ ಅಬ್ಬರಿಸಲಾರಂಭಿಸಿದರು. ಕೊನೆಯ ವಿಕೆಟ್​ ವೇಳೆ ಸ್ಪೋಟಕ ಇನಿಂಗ್ಸ್ ಆಡಿದ ಬುಮ್ರಾ 16 ಎಸೆತಗಳಲ್ಲಿ 31 ರನ್ ಚಚ್ಚಿದರು. ಪರಿಣಾಮ ಟೀಮ್ ಇಂಡಿಯಾ ಮೊತ್ತವು 400 ರನ್​ಗಳ ಗಡಿದಾಟಿತು.

ವಿಶೇಷ ಎಂದರೆ ಅಂತಿಮ ವಿಕೆಟ್ ಮಾತ್ರ ಉಳಿದಿರುವಾಗ ಸ್ಟುವರ್ಟ್ ಬ್ರಾಡ್ ಒಂದೇ ಓವರ್​ನಲ್ಲಿ ಬರೋಬ್ಬರಿ 35 ರನ್ ನೀಡಿದ್ದರು. ಬ್ರಾಡ್ ಎಸೆದ 84ನೇ ಓವರ್​ನ ಮೊದಲ ಎಸೆತಕ್ಕೆ ಬುಮ್ರಾ ಫೋರ್ ಬಾರಿಸಿದ್ದರು. 2ನೇ ಎಸೆತವನ್ನು ಬ್ರಾಡ್ ವೈಡ್ ಎಸೆದಿದ್ದರು. ಆದರೆ ಕೀಪರ್​ ಅನ್ನು ವಂಚಿಸಿದ ಚೆಂಡು ಬೌಂಡರಿ ಗೆರೆ ದಾಟಿತು. ಅದರಂತೆ ಟೀಮ್ ಇಂಡಿಯಾ ಹೆಚ್ಚುವರಿ 5 ರನ್ ಲಭಿಸಿತು. ಮತ್ತೆ ಎಸೆದ 2ನೇ ಬಾಲ್​ನಲ್ಲಿ ಬುಮ್ರಾ ಸಿಕ್ಸ್ ಸಿಡಿಸಿದರು. ವಿಶೇಷ ಎಂದರೆ ಇದು ನೋ ಬಾಲ್ ಆಗಿತ್ತು. ಆ ಬಳಿಕ ಬುಮ್ರಾ ಬ್ಯಾಕ್ ಟು ಬ್ಯಾಕ್ ಮೂರು ಫೋರ್ ಬಾರಿಸಿದರು. ಐದನೇ ಎಸೆತದಲ್ಲಿ ಬುಮ್ರಾ ಮತ್ತೊಂದು ಸಿಕ್ಸ್ ಸಿಡಿಸಿದರು. ಇನ್ನು 6ನೇ ಎಸೆತದಲ್ಲಿ 1 ರನ್​ ಓಡಿದರು. ಈ ಮೂಲಕ ಜಸ್​ಪ್ರೀತ್ ಬುಮ್ರಾ ಸ್ಟುವರ್ಟ್ ಬ್ರಾಡ್ ಓವರ್​ನಲ್ಲಿ ಬರೋಬ್ಬರಿ 35 ರನ್​ ಕಲೆಹಾಕಿದರು.

ಇದನ್ನೂ ಓದಿ
Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

ಇದರೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ ಅತ್ಯಧಿಕ ರನ್​ಗಳಿಸಿದ ವಿಶ್ವ ದಾಖಲೆ ಜಸ್​ಪ್ರೀತ್ ಬುಮ್ರಾ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್​ ಲೆಜೆಂಡ್ ಬ್ರಿಯಾನ್ ಲಾರಾ ಹೆಸರಿನಲ್ಲಿತ್ತು. 2003 ರಲ್ಲಿ ಲಾರಾ ಸೌತ್ ಆಫ್ರಿಕಾದ ರಾಬಿನ್ ಪೀಟರ್ಸನ್ ಓವರ್​ನಲ್ಲಿ 28 ರನ್ ಬಾರಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಜಸ್​ಪ್ರೀತ್ ಬುಮ್ರಾ ಸ್ಟುವರ್ಟ್ ಬ್ರಾಡ್ ಅವರ 6 ಎಸೆತಗಳ ಮೂಲಕ 35 ರನ್ ಕಲೆಹಾಕಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ.

ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 416 ರನ್​ಗಳಿಗೆ ಆಲೌಟ್ ಆಗಿದೆ. ವಿಶೇಷ ಎಂದರೆ 98 ರನ್​ಗೆ 5 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಅವರ ಶತಕ ನೆರವಿನಿಂದ ಅಂತಿಮವಾಗಿ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದೆ.