ಕಾರ್ಡಿಫ್ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಫಿಲ್ ಸಾಲ್ಟ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಅತ್ತ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ತಂಡವು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು.
ಆರಂಭಿಕರಾದ ಮ್ಯಾಥ್ಯೂ ಶಾರ್ಟ್ (28) ಹಾಗೂ ಟ್ರಾವಿಸ್ ಹೆಡ್ (31) ಮೊದಲ ವಿಕೆಟ್ಗೆ 52 ರನ್ಗಳನ್ನು ಬಾರಿಸಿದರು. ಇನ್ನು ಬಳಿಕ ಬಂದ ಯುವ ದಾಂಡಿಗ ಜೇಕ್ ಫ್ರೇಸರ್ ಮೆಕ್‌ಗುರ್ಕ್ 31 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಚೊಚ್ಚಲ ಅರ್ಧಶತಕ ಪೂರೈಸಿದರು.
ಇನ್ನು ಜೋಶ್ ಇಂಗ್ಲಿಸ್ 42 ರನ್ಗಳ ಕೊಡುಗೆ ನೀಡುವ ಮೂಲಕ ಆಸ್ಟ್ರೇಲಿಯಾ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ಕ್ಕೆ ತಂದು ನಿಲ್ಲಿಸಿದರು.
194 ರನ್ಗಳ ಕಠಿಣ ಗುರಿ ಪಡೆದ ಆಂಗ್ಲರ ಪಡೆಗೆ ನಾಯಕ ಫಿಲ್ ಸಾಲ್ಟ್ (39) ಉತ್ತಮ ಆರಂಭ ಒದಗಿಸಿದ್ದರು. ಆದರೆ ಮತ್ತೊಂದೆಡೆ ವಿಲ್ ಜಾಕ್ಸ್ ಕೇವಲ 12 ರನ್ಗಳಿಗೆ ಔಟಾದರೆ, ಆ ಬಳಿಕ ಜೋರ್ಡನ್ ಕಾಕ್ಸ್ ಶೂನ್ಯ ಸುತ್ತಿನ ಪೆವಿಲಿಯನ್ಗೆ ಮರಳಿದರು.
ಈ ಹಂತದಲ್ಲಿ ಜೊತೆಗೂಡಿದ ಲಿಯಾಮ್ ಲಿವಿಂಗ್ಸ್ಟೋನ್ ಹಾಗೂ ಜೇಕೊಬ್ ಬೆಥೆಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಈ ಜೋಡಿಯು ಆಸ್ಟ್ರೇಲಿಯಾ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದರು.
ಪರಿಣಾಮ ಜೇಕೊಬ್ ಬೆಥೆಲ್ ಬ್ಯಾಟ್ನಿಂದ ಕೇವಲ 24 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 44 ರನ್ ಮೂಡಿಬಂತು. ಇನ್ನು ಬೆಥೆಲ್ ವಿಕೆಟ್ ಪತನದ ಬಳಿಕ ಕೂಡ ಲಿವಿಂಗ್ಸ್ಟೋನ್ ಅಬ್ಬರ ಮುಂದುವರೆಸಿದರು.
ಪರಿಣಾಮ ಕೊನೆಯ 12 ಎಸೆತಗಳಲ್ಲಿ ಇಂಗ್ಲೆಂಡ್ ತಂಡಕ್ಕೆ ಕೇವಲ 13 ರನ್ಗಳ ಅವಶ್ಯಕತೆ ಮಾತ್ರಯಿತ್ತು. 19ನೇ ಓವರ್ನಲ್ಲಿ ಲಿವಿಂಗ್ಸ್ಟೋನ್ ಒಂದು ಸಿಕ್ಸ್ ಹಾಗೂ ಒಂದು ಫೋರ್ ಬಾರಿಸಿ ವಿಕೆಟ್ ಒಪ್ಪಿಸಿದರು. ಹೀಗೆ ಪೆವಿಲಿಯನ್ಗೆ ಮರಳುವ ಮುನ್ನ ಲಿಯಾಮ್ ಲಿವಿಂಗ್ಸ್ಟೋನ್ 47 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 87 ರನ್ ಚಚ್ಚಿದ್ದರು. ಈ ಮೂಲಕ ಇಂಗ್ಲೆಂಡ್ ತಂಡವು 19 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 194 ರನ್ಗಳಿಸಿ 3 ವಿಕೆಟ್ಗಳ ಜಯ ಸಾಧಿಸಿತು.
ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ (ನಾಯಕ) , ವಿಲ್ ಜ್ಯಾಕ್ಸ್ , ಜೋರ್ಡನ್ ಕಾಕ್ಸ್ , ಲಿಯಾಮ್ ಲಿವಿಂಗ್ಸ್ಟೋನ್ , ಜೇಕೊಬ್ ಬೆಥೆಲ್ , ಸ್ಯಾಮ್ ಕರನ್ , ಜೇಮೀ ಓವರ್ಟನ್ , ಬ್ರೈಡನ್ ಕಾರ್ಸೆ , ಆದಿಲ್ ರಶೀದ್ , ಸಾಕಿಬ್ ಮಹಮೂದ್ , ರೀಸ್ ಟೋಪ್ಲಿ.
ಇದನ್ನೂ ಓದಿ: IPL 2025: ಈ ಸಲ ಕಪ್ ನಮ್ದೆ… ಇದುವೇ ಕೆಎಲ್ ರಾಹುಲ್ ಇಚ್ಛೆ..!
ಆಸ್ಟ್ರೇಲಿಯಾ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್ , ಟ್ರಾವಿಸ್ ಹೆಡ್ (ನಾಯಕ) , ಜೇಕ್ ಫ್ರೇಸರ್-ಮೆಕ್‌ಗುರ್ಕ್ , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಮಾರ್ಕಸ್ ಸ್ಟೊಯಿನಿಸ್ , ಟಿಮ್ ಡೇವಿಡ್ , ಕ್ಯಾಮರೋನ್ ಗ್ರೀನ್ , ಆರೋನ್ ಹಾರ್ಡಿ , ಕೂಪರ್ ಕೊನೊಲಿ , ಶಾನ್ ಅಬಾಟ್ , ಆ್ಯಡಂ ಝಂಪಾ.
Published On - 7:34 am, Sat, 14 September 24