ಏಕದಿನ ಸರಣಿ ಬಳಿಕ ಟಿ20ಯಲ್ಲೂ ಸೋಲು; ಆಸ್ಟ್ರೇಲಿಯಾಗೆ ಸರಣಿ ಸೋಲಿನ ಆಘಾತ

ಸ್ಯಾಂಡ್ ಪೇಪರ್ ಹಗರಣದ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ಸಂಕಷ್ಟ ಮುಂದುವರೆದಿದೆ. ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ನಾಯಕ ಮಿಚೆಲ್ ಮಾರ್ಷ್ ಅವರ ಭರ್ಜರಿ ಶತಕ (119 ರನ್) ವ್ಯರ್ಥವಾಯಿತು. ಹೆನ್ರಿ ಕ್ರೋಕಾಮ್ ಕೊನೆಯ ಓವರ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ ಇಂಗ್ಲೆಂಡ್‌ಗೆ 7 ರನ್‌ಗಳ ರೋಚಕ ಗೆಲುವು ತಂದುಕೊಟ್ಟರು. ಆಸೀಸ್ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ.

ಏಕದಿನ ಸರಣಿ ಬಳಿಕ ಟಿ20ಯಲ್ಲೂ ಸೋಲು; ಆಸ್ಟ್ರೇಲಿಯಾಗೆ ಸರಣಿ ಸೋಲಿನ ಆಘಾತ
ಆಸ್ಟ್ರೇಲಿಯಾ Vs ಇಂಗ್ಲೆಂಡ್

Updated on: Nov 29, 2026 | 9:12 PM

ಸ್ಯಾಂಡ್ ಪೇಪರ್ ಹಗರಣದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲೇ ಇದೆ. ಮೈದಾನದಲ್ಲೂ ತಂಡದ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸೋಲು ಕಂಡಿದ್ದ ಆಸ್ಟ್ರೇಲಿಯಾ, ಇದೀಗ ಟಿ20 ಸರಣಿಯಲ್ಲೂ ಹಿನ್ನಡೆ ಅನುಭವಿಸಿದೆ. ಸಿಡ್ನಿಯಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾವನ್ನು 7 ರನ್‌ಗಳಿಂದ ಮಣಿಸಿತು. ನಾಯಕ ಮಿಚೆಲ್ ಮಾರ್ಷ್ ಸಿಡಿಸಿದ ಸ್ಫೋಟಕ ಶತಕದ ನಡುವೆಯೂ ಆಸ್ಟ್ರೇಲಿಯಾಗೆ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ಇಂಗ್ಲೆಂಡ್‌ನ ಯುವ ವೇಗಿ ಹೆನ್ರಿ ಕ್ರೋಕಾಮ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇಂಗ್ಲೆಂಡ್‌ಗೆ ಆಸರೆಯಾದ ಕೆಳಕ್ರಮಾಂಕ

ಈ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಗೆಲುವು ಅನಿವಾರ್ಯವಾಗಿತ್ತು. ಈಗಾಗಲೇ ಸರಣಿಯಲ್ಲಿ 1-2ರ ಹಿನ್ನಡೆಯಲ್ಲಿದ್ದ ಮಿಚೆಲ್ ಮಾರ್ಷ್ ಪಡೆಗೆ ಸರಣಿಯಲ್ಲಿ ಉಳಿಯಬೇಕಾದರೆ ಸಿಡ್ನಿಯಲ್ಲಿ ಗೆಲ್ಲಲೇಬೇಕಿತ್ತು. ಹೀಗಾಗಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ತಂಡದ ಮೊದಲ ನಾಲ್ಕು ವಿಕೆಟ್‌ಗಳು ಕೇವಲ 32 ರನ್‌ಗಳಿಗೆ ಉರುಳಿದವು. ಸ್ಪೆನ್ಸರ್ ಜಾನ್ಸನ್ ಮತ್ತು ರಿಲೆ ಮೆರೆಡಿತ್ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಕಾಡಿದರು. ಬಳಿಕ 93 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಆದರೆ ಈ ಹಂತದಲ್ಲಿ ಕೆಳಕ್ರಮಾಂಕದ ಆಟಗಾರರು ತಂಡಕ್ಕೆ ಆಸರೆಯಾದರು.

Loading...

ಸ್ಯಾಮ್ ಕರನ್ ಕೇವಲ 28 ಎಸೆತಗಳಲ್ಲಿ ಅಜೇಯ 50 ರನ್ ಸಿಡಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಲಿಯಾಮ್ ಡಾಸನ್ 23 ರನ್ ಹಾಗೂ ಜೇಮಿ ಓವರ್ಟನ್ 20 ರನ್ ಗಳಿಸಿದರು. ಈ ಮೂವರ ಹೋರಾಟದಿಂದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 181 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.

ಮಾರ್ಷ್ ಏಕಾಂಗಿ ಹೋರಾಟ

182 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್ ಮಾರ್ಷ್ ಮಾತ್ರ ಜವಾಬ್ದಾರಿಯುತ ಆಟವಾಡಿದರು. ಅವರ ಹೊರತಾಗಿ ತಂಡದ ಇತರ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಯಾರಿಂದಲೂ 20 ರನ್‌ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಆದರೆ ಮತ್ತೊಂದು ತುದಿಯಲ್ಲಿ ಮಾರ್ಷ್ ಅಬ್ಬರದ ಬ್ಯಾಟಿಂಗ್ ಮುಂದುವರಿಸಿದರು. ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದ ಅವರು ತಂಡದ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟರು. ಅಂತಿಮವಾಗಿ 57 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 9 ಬೌಂಡರಿಗಳ ನೆರವಿನಿಂದ 119 ರನ್ ಸಿಡಿಸಿದರು.

ಆದರೂ ಆಸ್ಟ್ರೇಲಿಯಾದ ಗೆಲುವಿಗೆ ಅಡ್ಡಿಯಾದವರು ಇಂಗ್ಲೆಂಡ್‌ನ ಯುವ ವೇಗಿ ಹೆನ್ರಿ ಕ್ರೋಕಾಮ್. ಕೇವಲ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಅನುಭವ ಹೊಂದಿದ್ದ ಕ್ರೋಕಾಮ್‌ಗೆ ಕೊನೆಯ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿ ನೀಡಲಾಗಿತ್ತು. ಕೊನೆಯ ಓವರ್ ಆರಂಭವಾಗುವಾಗ ಆಸ್ಟ್ರೇಲಿಯಾ ಗೆಲುವಿಗೆ 12 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿ ಶತಕವೀರ ಮಾರ್ಷ್ ಇದ್ದ ಕಾರಣ ಇಂಗ್ಲೆಂಡ್ ಪಾಳಯದಲ್ಲೂ ಆತಂಕವಿತ್ತು. ಆದರೆ ಒತ್ತಡಕ್ಕೆ ಮಣಿಯದ ಕ್ರೋಕಾಮ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು.

ಆ ಓವರ್‌ನಲ್ಲಿ ಕೇವಲ 4 ರನ್ ನೀಡಿದ ಅವರು ಮಾರ್ಷ್ ಸೇರಿದಂತೆ ಎರಡು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಈ ಮೂಲಕ ಆಸ್ಟ್ರೇಲಿಯಾದ ಗೆಲುವಿನ ಕನಸಿಗೆ ತಣ್ಣೀರೆರಚಿ ಇಂಗ್ಲೆಂಡ್ ತಂಡಕ್ಕೆ 7 ರನ್‌ಗಳ ರೋಚಕ ಜಯ ತಂದುಕೊಟ್ಟರು. 3 ವಿಕೆಟ್ ಪಡೆದು ಮಿಂಚಿದ ಕ್ರೋಕಾಮ್ ಇಂಗ್ಲೆಂಡ್ ಗೆಲುವಿನ ಹೀರೋ ಎನಿಸಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.

Read More
Loading...
Unable to load recommendations.
Follow Us