ವಿಶ್ವ ದಾಖಲೆಯ ಮೊತ್ತ ಪೇರಿಸಿ ಗೆದ್ದ ಇಂಗ್ಲೆಂಡ್

England Women vs Sri Lanka Women: ವುಮೆನ್ಸ್ ಟಿ20 ವರ್ಲ್ಡ್​​ಕಪ್​ನ ಮೊದಲ ಮ್ಯಾಚ್​ನ್ಲಲೇ ಇಂಗ್ಲೆಂಡ್ ಮಹಿಳಾ ತಂಡ ಅಮೋಘ ದಾಖಲೆ ಬರೆದಿದೆ. ಅದು ಕೂಡ 3 ವರ್ಷಗಳ ಹಿಂದೆ ಬರೆದಿದ್ದ ತನ್ನದೇ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. ಈ ವಿಶ್ವ ದಾಖಲೆಯೊಂದಿಗೆ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಿದೆ.

ವಿಶ್ವ ದಾಖಲೆಯ ಮೊತ್ತ ಪೇರಿಸಿ ಗೆದ್ದ ಇಂಗ್ಲೆಂಡ್
England
Image Credit source: ICC

Updated on: Jun 13, 2026 | 7:57 AM

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಉದ್ಘಾಟನಾ ಪಂದ್ಯದಲ್ಲೇ ಆತಿಥೇಯ ಇಂಗ್ಲೆಂಡ್ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಶ್ರೀಲಂಕಾ ವಿರುದ್ಧದ ಈ ಪಂದ್ಯದಲ್ಲಿ 219 ರನ್ ಚಚ್ಚುವ ಮೂಲಕ ಇಂಗ್ಲೆಂಡ್ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಪೇರಿಸಿದ ಹೊಚ್ಚ ಹೊಸ ವಿಶ್ವ ದಾಖಲೆ ಬರೆದಿದೆ.

ಡ್ಯಾನಿ ವ್ಯಾಟ್ ಸಿಡಿಲಬ್ಬರ:

ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್-ಹಾಡ್ಜ್ ಸ್ಫೋಟಕ ಆರಂಭ ಒದಗಿಸಿದ್ದರು. ಶ್ರೀಲಂಕಾ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದ ವ್ಯಾಟ, ಮೈದಾನದ ಮೂಲೆ ಮೂಲೆಗೂ ಫೋರ್ ಗಳನ್ನು ಬಾರಿಸಿದರು

ಈ ಮೂಲಕ ಡ್ಯಾನಿ ವ್ಯಾಟ್ ಕೇವಲ 62 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 105 ರನ್ ಚಚ್ಚಿ ಅಬ್ಬರಿಸಿದರು. ಮತ್ತೊಂದೆಡೆ ಆಮಿ ಜೋನ್ಸ್ (53 ರನ್, 38 ಎಸೆತ) ಹಾಗೂ ನಾಯಕಿ ನ್ಯಾಟ್ ಸಿವರ್-ಬ್ರಂಟ್ (ಅಜೇಯ 46 ರನ್, 22 ಎಸೆತ) ಬಿರುಸಿನ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 20 ಓವರುಗಳಲ್ಲಿ 1 ವಿಕೆಟ್ ಕಳೆದುಕೊಂಡು 219 ಕ್ಕೆ ತಂದು ನಿಲ್ಲಿಸಿದರು.

ಇಂಗ್ಲೆಂಡ್‌ನದ್ದೇ ಹಳೇ ದಾಖಲೆ ಉಡೀಸ್:

ಈ ಭರ್ಜರಿ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ತಂಡವು ಮಹಿಳಾ ಟಿ20 ವಿಶ್ವಕಪ್‌ನಲ್ಲಿ ತನ್ನದೇ ಹೆಸರಿನಲ್ಲಿದ್ದ ಹಳೆಯ ದಾಖಲೆಯನ್ನು ಮುರಿದಿದೆ. 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ್ ವಿರುದ್ಧ ಇಂಗ್ಲೆಂಡ್ ಗಳಿಸಿದ್ದ 213/5 ರನ್ ಇದುವರೆಗಿನ ಗರಿಷ್ಠ ಮೊತ್ತವಾಗಿತ್ತು. ಈಗ ಶ್ರೀಲಂಕಾ ವಿರುದ್ಧ 219 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

87 ರನ್​ಗಳ ಗೆಲುವು:

220 ರನ್‌ಗಳ ದೈತ್ಯ ಗುರಿ ಬೆನ್ನಟ್ಟಿದ ಶ್ರೀಲಂಕಾ ಮಹಿಳಾ ತಂಡ ಇಂಗ್ಲೆಂಡ್‌ನ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಲಂಕಾ ಪಡೆ, ಅಂತಿಮವಾಗಿ ಕೇವಲ 132 ರನ್‌ಗಳಿಗೆ ಆಲೌಟ್ ಆಯಿತು.

ಇಂಗ್ಲೆಂಡ್ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಫ್ರೇಯಾ ಕೆಂಪ್ 22 ರನ್ ನೀಡಿ 4 ಪ್ರಮುಖ ವಿಕೆಟ್ ಕಬಳಿಸಿದರು. ಇದರೊಂದಿಗೆ ಇಂಗ್ಲೆಂಡ್ ತಂಡ 87 ರನ್‌ಗಳ ಭರ್ಜರಿ ಗೆಲುವು ದಾಖಲಿಸಿ ಟೂರ್ನಿಯಲ್ಲಿ ವಿಜಯಯಾತ್ರೆ ಆರಂಭಿಸಿದೆ.

ಇಂಗ್ಲೆಂಡ್ ಪ್ಲೇಯಿಂಗ್ 11:  ಆಮಿ ಜೋನ್ಸ್ (ವಿಕೆಟ್ ಕೀಪರ್) ಡ್ಯಾನಿ ವ್ಯಾಟ್-ಹಾಡ್ಜ್ , ನ್ಯಾಟ್ ಸಿವರ್-ಬ್ರಂಟ್ (ನಾಯಕಿ) ,
ಆಲಿಸ್ ಕ್ಯಾಪ್ಸಿ , ಹೀದರ್ ನೈಟ್ , ಫ್ರೇಯಾ ಕೆಂಪ್ , ಡೇನಿಯಲ್ ಗಿಬ್ಸನ್ , ಷಾರ್ಲೆಟ್ ಡೀನ್ , ಸೋಫಿ ಎಕ್ಲೆಸ್ಟೋನ್ , ಲಿನ್ಸೆ ಸ್ಮಿತ್ , ಲಾರೆನ್ ಬೆಲ್.

ಇದನ್ನೂ ಓದಿ: ವಿರಾಟ್ ಕೊಹ್ಲಿ ದಾಖಲೆ ಉಡೀಸ್: ರುತುರಾಜ್ ಗಾಯಕ್ವಾಡ್ ಹೊಸ ವಿಶ್ವ ದಾಖಲೆ

ಶ್ರೀಲಂಕಾ ಪ್ಲೇಯಿಂಗ್ 11:  ವಿಷ್ಮಿ ಗುಣರತ್ನೆ , ಚಾಮರಿ ಅಥಾಪತ್ತು (ನಾಯಕಿ) , ಇಮೇಶಾ ದುಲಾನಿ , ಹರ್ಷಿತಾ ಸಮರವಿಕ್ರಮ , ಹನ್ಸಿಮಾ ಕರುಣರತ್ನೆ , ಕವಿಶಾ ದಿಲ್ಹಾರಿ , ನೀಲಾಕ್ಷಿಕಾ ಸಿಲ್ವಾ , ಕೌಶಾನಿ ನುತ್ಯಂಗನ (ವಿಕೆಟ್ ಕೀಪರ್) , ಸುಗಂಧಿಕಾ ಕುಮಾರಿ , ಮಲ್ಕಿ ಮದರಾ , ಮಿಥಾಲಿ ಅಯೋಧ್ಯ.

 

Published On - 7:21 am, Sat, 13 June 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us