ಮೊದಲ 5 ಓವರ್‌ಗಳಲ್ಲೇ ಇಂಗ್ಲೆಂಡ್‌ಗೆ ಮರ್ಮಾಘಾತ; ಟಿ20 ಕ್ರಿಕೆಟ್‌ನಲ್ಲಿ ಬೇಡದ ದಾಖಲೆ

ಆಸ್ಟ್ರೇಲಿಯಾ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರಿ ಬ್ಯಾಟಿಂಗ್ ಕುಸಿತ ಕಂಡಿತು. ಸ್ಪೆನ್ಸರ್ ಜಾನ್ಸನ್ ಮತ್ತು ರೈಲಿ ಮೆರೆಡಿತ್ ಮಾರಕ ಬೌಲಿಂಗ್‌ಗೆ ಇಂಗ್ಲೆಂಡ್‌ನ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ನಾಯಕ ಹ್ಯಾರಿ ಬ್ರೂಕ್ ನಿರ್ಧಾರ ದುಬಾರಿಯಾಗಿದ್ದು, ತಂಡ ಟಿ20 ಇತಿಹಾಸದಲ್ಲಿ ಅಪೇಕ್ಷಿತವಲ್ಲದ ದಾಖಲೆ ಬರೆಯಿತು. ವೇಗದ ಬೌಲರ್‌ಗಳಿಗೆ ನೆರವಾಗುವ ಪಿಚ್‌ನಲ್ಲಿ ಇಂಗ್ಲೆಂಡ್ ಮೊದಲೇ ಸಂಕಷ್ಟಕ್ಕೆ ಸಿಲುಕಿತು.

ಮೊದಲ 5 ಓವರ್‌ಗಳಲ್ಲೇ ಇಂಗ್ಲೆಂಡ್‌ಗೆ ಮರ್ಮಾಘಾತ; ಟಿ20 ಕ್ರಿಕೆಟ್‌ನಲ್ಲಿ ಬೇಡದ ದಾಖಲೆ
ಇಂಗ್ಲೆಂಡ್ Vs ಆಸ್ಟ್ರೇಲಿಯಾ

Updated on: Nov 29, 2026 | 5:03 PM

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆರಂಭದಲ್ಲೇ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅವರ ನಿರ್ಧಾರ ತಂಡಕ್ಕೆ ದುಬಾರಿಯಾಯಿತು. ಆಸ್ಟ್ರೇಲಿಯಾದ ವೇಗದ ಬೌಲರ್‌ಗಳಾದ ಸ್ಪೆನ್ಸರ್ ಜಾನ್ಸನ್ ಮತ್ತು ರೈಲಿ ಮೆರೆಡಿತ್ ತಮ್ಮ ಮಾರಕ ಬೌಲಿಂಗ್ ಮೂಲಕ ಇಂಗ್ಲೆಂಡ್‌ನ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಪವರ್‌ಪ್ಲೇ ಮುಗಿಯುವ ಮೊದಲೇ ಇಂಗ್ಲೆಂಡ್‌ನ ಅಗ್ರ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಬೇಡದ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿತು.

ಜಾನ್ಸನ್-ಮೆರೆಡಿತ್ ವೇಗಕ್ಕೆ ಇಂಗ್ಲೆಂಡ್ ತತ್ತರ

ಆಸ್ಟ್ರೇಲಿಯಾದ ವೇಗದ ಬೌಲರ್‌ಗಳಾದ ಸ್ಪೆನ್ಸರ್ ಜಾನ್ಸನ್ ಮತ್ತು ರೈಲಿ ಮೆರೆಡಿತ್ ಮೊದಲ ಐದು ಓವರ್‌ಗಳಲ್ಲೇ ಇಂಗ್ಲೆಂಡ್ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾದರು. ಎರಡನೇ ಓವರ್‌ನಲ್ಲಿ ಸ್ಪೆನ್ಸರ್ ಜಾನ್ಸನ್ ಎಸೆತವನ್ನು ದೊಡ್ಡ ಹೊಡೆತಕ್ಕೆ ಅಟ್ಟಲು ಮುಂದಾದ ಫಿಲ್ ಸಾಲ್ಟ್ ಸ್ಲಿಪ್‌ನಲ್ಲಿ ಜ್ಯಾಕ್ ಎಡ್ವರ್ಡ್ಸ್‌ಗೆ ಕ್ಯಾಚ್ ನೀಡಿ ಔಟಾದರು. ಇದರೊಂದಿಗೆ ಇಂಗ್ಲೆಂಡ್ ಕೇವಲ 7 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಮೂರನೇ ಓವರ್‌ನಲ್ಲಿ ದಾಳಿ ಮುಂದುವರಿಸಿದ ರೈಲಿ ಮೆರೆಡಿತ್, ಅನ್ರಿನ್ ಡೊನಾಲ್ಡ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ಲೆಗ್ ಸೈಡ್‌ನತ್ತ ದೊಡ್ಡ ಹೊಡೆತಕ್ಕೆ ಕೈಹಾಕಿದ ಡೊನಾಲ್ಡ್, ಜೋಯಲ್ ಡೇವಿಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

Loading...

ನಾಲ್ಕನೇ ಓವರ್‌ನಲ್ಲಿ ಮತ್ತೆ ದಾಳಿ ನಡೆಸಿದ ಜಾನ್ಸನ್, ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಅವರ ವಿಕೆಟ್ ಪಡೆದರು. ಶಾರ್ಟ್ ಬಾಲ್‌ಗೆ ಪುಲ್ ಶಾಟ್ ಆಡಲು ಮುಂದಾದ ಬ್ರೂಕ್, ಮಿಡ್ ಆನ್‌ನಲ್ಲಿದ್ದ ಟಿಮ್ ಡೇವಿಡ್‌ಗೆ ಕ್ಯಾಚ್ ನೀಡಿದರು. ಈ ಮೂಲಕ ಇಂಗ್ಲೆಂಡ್ 28 ರನ್‌ಗಳಿಗೆ ಮೂರನೇ ವಿಕೆಟ್ ಕಳೆದುಕೊಂಡಿತು.

ಐದನೇ ಓವರ್‌ನಲ್ಲಿ ಮೆರೆಡಿತ್ ಮತ್ತೊಂದು ಆಘಾತ ನೀಡಿದರು. ಟಾಮ್ ಬ್ಯಾಂಟನ್ ಅವರ ವಿಕೆಟ್ ಕಬಳಿಸಿದ ಅವರು, ಮಿಡ್ ಆಫ್‌ನಲ್ಲಿ ನಿಂತಿದ್ದ ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್‌ಗೆ ಕ್ಯಾಚ್ ಕೊಡಿಸಿದರು. ಪರಿಣಾಮ, ಇಂಗ್ಲೆಂಡ್‌ನ ಅಗ್ರ ನಾಲ್ವರು ಬ್ಯಾಟರ್‌ಗಳು ಕೇವಲ 32 ರನ್‌ಗಳಾಗುವಷ್ಟರಲ್ಲಿ ಪೆವಿಲಿಯನ್ ಸೇರಿದ್ದರು.

ಟಿ20 ಕ್ರಿಕೆಟ್‌ನಲ್ಲಿ ಚಹಲ್ ವಿಶ್ವದಾಖಲೆ; 400 ವಿಕೆಟ್ ಪಡೆದ ಮೊದಲ ಭಾರತೀಯ

ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗೆ ಬೇಡದ ದಾಖಲೆ

ಇಂಗ್ಲೆಂಡ್ ತಂಡದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೊದಲ ನಾಲ್ಕು ಕ್ರಮಾಂಕದ ಬ್ಯಾಟರ್‌ಗಳೆಲ್ಲ ಒಂದಂಕಿಯ ಮೊತ್ತಕ್ಕೆ ಔಟಾದ ಅಪಖ್ಯಾತಿಗೆ ತಂಡ ಗುರಿಯಾಗಿದೆ. ಅಂದರೆ, ಮೊದಲ ನಾಲ್ವರು ಬ್ಯಾಟರ್‌ಗಳಲ್ಲಿ ಯಾರೊಬ್ಬರೂ ಎರಡಂಕಿಯ ಮೊತ್ತವನ್ನೂ ತಲುಪಲಿಲ್ಲ. ವೇಗದ ಬೌಲರ್‌ಗಳಿಗೆ ನೆರವಾಗುತ್ತಿದ್ದ ಪಿಚ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಇಂಗ್ಲೆಂಡ್ ನಾಯಕನ ನಿರ್ಧಾರವೇ ತಂಡಕ್ಕೆ ಮುಳುವಾಯಿತು. ಆಸ್ಟ್ರೇಲಿಯಾದ ವೇಗದ ದಾಳಿಗೆ ಉತ್ತರ ನೀಡಲು ಸಾಧ್ಯವಾಗದೆ ಇಂಗ್ಲೆಂಡ್ ಆರಂಭದಲ್ಲೇ ತೀವ್ರ ಸಂಕಷ್ಟಕ್ಕೆ ಸಿಲುಕಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:01 pm, Sun, 29 November 26

ಪೃಥ್ವಿಶಂಕರ

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.

Read More
Loading...
Unable to load recommendations.
Follow Us