ಮ್ಯಾಚ್ ಫಿಕ್ಸಿಂಗ್​ಗೆ ಯತ್ನ: ಟೀಮ್ ಇಂಡಿಯಾದ ಮಾಜಿ ಆಟಗಾರ ಬಂಧನ!

LPL 2026: ಲಂಕಾ ಪ್ರೀಮಿಯರ್ ಲೀಗ್ 2026ರ ಟೂರ್ನಿಯ ಉದ್ಘಾಟನಾ ಪಂದ್ಯದಂದೇ ಕ್ರಿಕೆಟ್ ಜಗತ್ತನ್ನು ಬೆಚ್ಚಿಬೀಳಿಸುವ ಮಹಾ ಹಗರಣವೊಂದು ಬೆಳಕಿಗೆ ಬಂದಿದೆ. ಪ್ರಸ್ತುತ ಸೀಸನ್‌ನಲ್ಲೇ 'ಜಾಫ್ನಾ ಕಿಂಗ್ಸ್' ತಂಡದ ಹೊಸ ಸಹ-ಮಾಲೀಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಭಾರತದ ಮಾಜಿ ಅಂಡರ್-19 ಕ್ರಿಕೆಟಿಗ ಮಂಜೋತ್ ಕಲ್ರಾ ಅವರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ. 

ಮ್ಯಾಚ್ ಫಿಕ್ಸಿಂಗ್​ಗೆ ಯತ್ನ: ಟೀಮ್ ಇಂಡಿಯಾದ ಮಾಜಿ ಆಟಗಾರ ಬಂಧನ!
Manjot Kalra
Image Credit source: Google

Updated on: Jul 18, 2026 | 8:56 AM

ಲಂಕಾ ಪ್ರೀಮಿಯರ್ ಲೀಗ್​ ಆರಂಭದ ಬೆನ್ನಲ್ಲೇ ಆಘಾತವೊಂದು ಎದುರಾಗಿದೆ. ಜಾಫ್ನಾ ಕಿಂಗ್ಸ್ ತಂಡದ ಸಹ-ಮಾಲೀಕರಾದ ಮಂಜೋತ್ ಕಲ್ರಾ ಅವರನ್ನು ಶ್ರೀಲಂಕಾದ ಕ್ರೀಡಾ ಭ್ರಷ್ಟಾಚಾರ ನಿರೋಧಕ ತನಿಖಾ ದಳದ ಪೊಲೀಸರು ಕೊಲಂಬೋದಲ್ಲಿ ಬಂಧಿಸಿದ್ದಾರೆ. ಮಂಜೋತ್ ಕಲ್ರಾ ಭಾರತ ಅಂಡರ್-19 ತಂಡದ ಮಾಜಿ ಆಟಗಾರ ಎಂಬುದು ಇಲ್ಲಿ ಉಲ್ಲೇಖಾರ್ಹ.

ಮಂಜೋತ್ ಕಲ್ರಾ ಮತ್ತು ಉದ್ಯಮಿ ಮಯಾಂಕ್ ಗೋಯಲ್ ನೇತೃತ್ವದ ‘ಸ್ಪೋರ್ಟ್ಸ್ ಕಮ್ಯೂನ್’ ಸಂಸ್ಥೆಯು ಮೇ 2026 ರಲ್ಲಿ ‘ಜಾಫ್ನಾ ಕಿಂಗ್ಸ್’ ತಂಡದ ಹೊಸ ಮಾಲೀಕತ್ವವನ್ನು ಖರೀದಿಸಿತ್ತು. ಇದೀಗ ಆಟಗಾರರೊಬ್ಬರೊಂದಿಗೆ ಮ್ಯಾಚ್​ ಫಿಕ್ಸಿಂಗ್​ ಯತ್ನಿಸಿದ ಗಂಭೀರ ಆರೋಪ ಮೇಲೆ ಮಂಜೋತ್ ಕಲ್ರಾ ಅವರನ್ನು ಬಂಧಿಸಲಾಗಿದೆ.

ಯಾರು ಈ ಮಂಜೋತ್ ಕಲ್ರಾ?

ಮಂಜೋತ್ ಕಲ್ರಾ 2018ರ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಶತಕ ಬಾರಿಸಿ ಟೀಮ್ ಇಂಡಿಯಾಗೆ ಕಪ್ ತಂದುಕೊಟ್ಟಿದ್ದ ಆರಂಭಿಕ ಬ್ಯಾಟರ್.  ಅಲ್ಲದೆ ಪ್ರಸ್ತುತ ಭಾರತ ಏಕದಿನ ತಂಡದ ನಾಯಕ ಶುಭ್​ಮನ್ ಗಿಲ್ ಅವರೊಂದಿಗೆ ಅಂಡರ್-19 ತಂಡದಲ್ಲಿ ಮಂಜೋತ್ ಕಲ್ರಾ ಜೊತೆಯಾಗಿ ಆಡಿದ್ದರು.

ಇತ್ತೀಚೆಗೆ ಕ್ರೀಡಾ ಉದ್ಯಮಿಯಾಗಿ ಬದಲಾಗಿದ್ದ ಕಲ್ರಾ, ಎಲ್‌ಪಿಎಲ್‌ನ ‘ಜಾಫ್ನಾ ಕಿಂಗ್ಸ್’ ಫ್ರಾಂಚೈಸಿಯ ಸಹ-ಮಾಲೀಕರಾಗಿದ್ದರು. ಇದೀಗ ಮಾಲೀಕನಾಗಿಯೇ ಪಂದ್ಯದ ಫಲಿತಾಂಶ ಬದಲಾಯಿಸಲು ಸ್ವಂತ ತಂಡದ ಆಟಗಾರರಿಗೇ ಲಕ್ಷಾಂತರ ರೂಪಾಯಿ ಲಂಚ ನೀಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.

ಕಾರ್ಯಾಚರಣೆ ನಡೆದಿದ್ದು ಹೇಗೆ?

ಕೊಲಂಬೋದ ಪಂಚತಾರಾ ಹೋಟೆಲ್‌ ಒಂದರಲ್ಲಿ ತಂಗಿದ್ದ ಮಂಜೋತ್ ಕಲ್ರಾ ಅವರನ್ನು ಕ್ರೀಡಾ ಅಪರಾಧ ತಡೆ ವಿಶೇಷ ತನಿಖಾ ಘಟಕದ (SIU) ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಂದ್ಯದ ಫಲಿತಾಂಶ ಬದಲಾಯಿಸಲು ಆಟಗಾರನಿಗೆ ನೀಡಲು ಇಟ್ಟುಕೊಂಡಿದ್ದ ಸುಮಾರು 9.5 ಮಿಲಿಯನ್ ಶ್ರೀಲಂಕಾ ರೂಪಾಯಿ (ಅಂದಾಜು ₹24 ಲಕ್ಷ ಭಾರತೀಯ ರೂಪಾಯಿ) ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಕಲ್ರಾ ಜೊತೆಗೆ ಯುವರಾಜ್ ಪುಷ್ಪಾ ಎಂಬ ಮತ್ತೊಬ್ಬ ಭಾರತೀಯ ಪ್ರಜೆಯನ್ನೂ ಅಧಿಕಾರಿಗಳು ಬಂಧಿಸಿದ್ದಾರೆ.

ಹಗರಣ ಬಯಲಿಗೆಳೆದ ಲಂಕಾ ಆಟಗಾರರು:

ಜಾಫ್ನಾ ಕಿಂಗ್ಸ್ ತಂಡದ ಪ್ರಮುಖ ಶ್ರೀಲಂಕಾ ಆಟಗಾರರಾದ ಭಾನುಕ ರಾಜಪಕ್ಷ, ಅವಿಷ್ಕ ಫೆರ್ನಾಂಡೋ ಮತ್ತು ದುನಿತ್ ವೆಲ್ಲಾಲಗೆ ಅವರಿಗೆ ಬುಕ್ಕಿಗಳು ಮ್ಯಾಚ್ ಫಿಕ್ಸಿಂಗ್‌ಗಾಗಿ ಆಮಿಷ ಒಡ್ಡಿದ್ದರು. ಆದರೆ, ಈ ಆಟಗಾರರು ತಕ್ಷಣವೇ ಜಾಗೃತರಾಗಿ ಭ್ರಷ್ಟಾಚಾರ ನಿರೋಧಕ ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಈ ದೊಡ್ಡ ಜಾಲ ಬಯಲಾಗಿದೆ.

ಇದನ್ನೂ ಓದಿ: RCB ಫ್ಯಾನ್ಸ್​ಗೆ ಗುಡ್ ನ್ಯೂಸ್: ಕೋಚ್ ಆಫರ್ ತಿರಸ್ಕರಿಸಿದ ಆ್ಯಂಡಿ ಫ್ಲವರ್!

ಕೋರ್ಟ್ ವಶಕ್ಕೆ ಆರೋಪಿಗಳು:

ಬಂಧಿತ ಮಂಜೋತ್ ಕಲ್ರಾ ಮತ್ತು ಯುವರಾಜ್‌ನನ್ನು ಶ್ರೀಲಂಕಾದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಜುಲೈ 31ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ಮತ್ತು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆ  ಹೊಂದುವುದಾಗಿ ತಿಳಿಸಿದೆ. ಈ ಕಪ್ಪುಚುಕ್ಕೆಯ ನಡುವೆಯೂ ಲಂಕಾ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳು ಎಂದಿನಂತೆ ಮುಂದುವರಿಯಲಿವೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

 

 

Follow Us