
2026 ರ ಫಿಫಾ ವಿಶ್ವಕಪ್ (FIFA World Cup 2026) ಇದೇ ಜೂನ್ 11, 2026 ರಿಂದ ಜುಲೈ 19, 2026 ರವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಮೂರು ದೇಶಗಳು ಜಂಟಿಯಾಗಿ ಈ ಪಂದ್ಯಾವಳಿಯನ್ನು ಆಯೋಜಿಸುತ್ತಿವೆ. ಈ ಪಂದ್ಯಾವಳಿ ಕೆನಡಾ, ಮೆಕ್ಸಿಕೊ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆಯಲಿದೆ. ಅದರಂತೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ 11, ಮೆಕ್ಸಿಕೊದಲ್ಲಿ ಮೂರು ಮತ್ತು ಕೆನಡಾದಲ್ಲಿ ಎರಡು ಸೇರಿದಂತೆ ಒಟ್ಟು 16 ನಗರಗಳು ಪಂದ್ಯಗಳನ್ನು ಆಯೋಜಿಸುತ್ತವೆ. ಫೈನಲ್ ಪಂದ್ಯವು ಜುಲೈ 19, 2026 ರಂದು ನ್ಯೂಯಾರ್ಕ್-ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಬಾರಿಯ ಫಿಫಾ ವಿಶ್ವಕಪ್ನ ವಿಶೇಷತೆ ಏನೆಂದರೆ, ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. 32 ತಂಡಗಳು ಭಾಗವಹಿಸುತ್ತಿದ್ದ ಈ ಪಂದ್ಯಾವಳಿಯಲ್ಲಿ ಈ ಬಾರಿ 48 ತಂಡಗಳು ಕಣಕ್ಕಿಳಿಯಲಿವೆ. ಇದರ ಜೊತೆಗೆ ಸ್ವರೂಪವನ್ನು ಸಹ ಬದಲಾಯಿಸಲಾಗಿದೆ. 48 ತಂಡಗಳನ್ನು ತಲಾ 4 ತಂಡಗಳ 12 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು, ಜೊತೆಗೆ ಮೂರನೇ ಸ್ಥಾನ ಪಡೆದ ಎಂಟು ಅತ್ಯುತ್ತಮ ತಂಡಗಳು 32 ರ ಸುತ್ತಿಗೆ ಮುನ್ನಡೆಯುತ್ತವೆ. ತಂಡಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಪಂದ್ಯಗಳ ಸಂಖ್ಯೆಯೂ ಹೆಚ್ಚಾಗಿದ್ದು, ಈ ಬಾರಿಯ ಪಂದ್ಯಾವಳಿಯಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ.
ಈ ವರ್ಷ ಫಿಫಾ ಬಹುಮಾನದ ಹಣವನ್ನು ಗಣನೀಯವಾಗಿ ಹೆಚ್ಚಿಸಿದೆ. ಒಟ್ಟು US$655 ಮಿಲಿಯನ್ (ಸುಮಾರು 6300 ಕೋಟಿ ರೂ.) ಮೊತ್ತವನ್ನು 48 ತಂಡಗಳ ನಡುವೆ ಹಂಚಲಾಗುತ್ತದೆ. ಹಿಂದಿನ ಆವೃತ್ತಿಗೆ ಹೋಲಿಸಿದರೆ ಈ ಬಾರಿ ಬಹುಮಾನದ ಮೊತ್ತದಲ್ಲಿ ಸುಮಾರು 50% ಹೆಚ್ಚಳವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ