ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟ್ ಆಟಗಾರ ಆ್ಯಂಡ್ರ್ಯೂ ಸೈಮಂಡ್ಸ್ (Andrew Symonds) ಶನಿವಾರ ರಾತ್ರಿ ನಡೆದ ಕಾರು ಅಪಘಾತದಲ್ಲಿ (Car Accident) ಮೃತರಾಗಿದ್ದಾರೆ. ಇತ್ತೀಚೆಗಷ್ಟೇ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್, ಕ್ರಿಕೆಟ್ ದಂತಕತೆ ಶೇನ್ ವಾರ್ನ್ (Shane Warne) ಹಠಾತ್ ನಿಧನರಾಗಿದ್ದರು. ಇದೀಗ ಆಂಡ್ರ್ಯೂ ಸೈಮಂಡ್ಸ್ ಕೂಡ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಕಾಂಗರೋ ನಾಡಿಗೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಶನಿವಾರ ರಾತ್ರಿ ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಎಂಬಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಟೌನ್ಸ್‌ವಿಲ್ಲೆಯಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಹಾರ್ವೇ ರೇಂಜ್ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಮಧ್ಯರಾತ್ರಿ 11ರ ಸುಮಾರಿಗೆ ಹಾರ್ವೇ ರೇಂಜ್ ರಸ್ತೆಯಲ್ಲಿ ಸೈಮಂಡ್ಸ್ ಕಾರು ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಸೈಮಂಡ್ಸ್ ಒಬ್ಬರೇ ಇದ್ದರು. ಅಲೈಸ್ ರಿವರ್ ಬ್ರಿಡ್ಜ್ ಸಮೀಪ ನಿಯಂತ್ರಣ ತಪ್ಪಿದ ಕಾರು ರಸ್ತೆಯಿಂದ ಹೊರಗೆ ಸಂಚರಿಸಿ, ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದದಾರೆ.
46 ವರ್ಷದ ಕ್ರಿಕೆಟಿಗ ಸೈಮಂಡ್ಸ್ 26 ಟೆಸ್ಟ್, 198 ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಮೂಲಗಳ ಪ್ರಕಾರ, ದುರಂತದ ವೇಳೆ ಸೈಮಂಡ್ಸ್ ಒಬ್ಬರೇ ಕಾರಿನಲ್ಲಿದ್ದರು. ದುರ್ಘಟನೆ ನಡೆದ ತಕ್ಷಣ ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರೂ ಅವರು ಗಂಭೀರವಾಗಿ ಗಾಯಗೊಂಡ ಪರಿಣಾಮ ಕೊನೆಯುಸಿರೆಳೆದರು ಎಂದು ಅಲ್ಲಿನ ಪೊಲೀಸರು ಮಾಹಿತಿ ನೀಡಿದ್ದಾರೆ. 1975ರ ಜೂನ್ 9ರಂದು ಜನಿಸಿದ್ದ ಸೈಮಂಡ್ಸ್ ಗೆ ಕೇವಲ 46 ವರ್ಷವಾಗಿತ್ತು.
ಆಂಡ್ರ್ಯೂ ಸೈಮಂಡ್ಸ್ ನಿಧನಕ್ಕೆ ಭಾರತೀಯರು ಸೇರಿದಂತೆ ವಿಶ್ವದ ಕ್ರಿಕೆಟಿಗರು ಕಂಬನಿ ಮಿಡಿದಿದ್ದಾರೆ. ಆಂಡ್ರ್ಯೂ ಸೈಮಂಡ್ಸ್ 46ನೇ ವಯಸ್ಸಿನಲ್ಲಿ ದುರಂತವಾಗಿ ನಿಧನರಾದ ಪ್ರೀತಿಯ ಕ್ವೀನ್ಸ್‌ಲ್ಯಾಂಡರ್‌ನ ನಷ್ಟದಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಮತ್ತು ದುಃಖಿತರಾಗಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದೆ. ‘ಇದು ಅಂತ್ಯಂತ ದಿಗಿಲು ಹುಟ್ಟಿಸುವ ಸುದ್ದಿ, ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಆಸೀಸ್ ಮಾಜಿ ಕ್ರಿಕೆಟಿಗ ಜೇಸನ್ ಗಿಲ್ಲೆಸ್ಪಿ ಬೇಸರ ವ್ಯಕ್ತಪಡಿಸಿದ್ದಾರೆ. ‘ಈ ಸುದ್ದಿ ನಿಜವಾಗಿಯೂ ಅತೀವ ಬೇಸರ ಹುಟ್ಟಿಸುತ್ತದೆ’ ಎಂದು ಆಸೀಸ್ ಹಿರಿಯ ಕ್ರಿಕೆಟಿಗ ಆ್ಯಡಂ ಗಿಲ್‌ಕ್ರಿಸ್ಟ್ ತಿಳಿಸಿದ್ದಾರೆ.
— Adam Gilchrist (@gilly381) May 14, 2022
Vale Andrew Symonds.
We are shocked and saddened by the loss of the loveable Queenslander, who has tragically passed away at the age of 46. pic.twitter.com/ZAn8lllskK
— Cricket Australia (@CricketAus) May 15, 2022
ಆಂಡ್ರ್ಯೂ ಸೈಮಂಡ್ಸ್ ಸಾಧನೆ: ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಅತ್ಯಂತ ಕೌಶಲ ಹೊಂದಿದ ಆಲ್ರೌಂಡರ್ ಎಂದರೆ ಅದು ಸೈಮಂಡ್ಸ್. 2003 ರಿಂದ 2007ರವರೆಗೆ ಆಸ್ಟ್ರೇಲಿಯಾ ಗೆದ್ದಿರುವ ಸತತ ಎರಡು ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದರು. 1999 ಮತ್ತು 2007ರ ನಡುವೆ ವಿಶ್ವದಲ್ಲೇ ಹೆಚ್ಚು ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾದ ವೈಟ್-ಬಾಲ್ ತಂಡಗಳ ಅವಿಭಾಜ್ಯ ಅಂಗವಾಗಿದ್ದರು. 26 ಟೆಸ್ಟ್, 198 ಏಕದಿನ ಹಾಗೂ 20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದರು.
ಮಂಕಿಗೇಟ್ ವಿವಾದ: ಆಂಡ್ರ್ಯೂ ಸೈಮಂಡ್ಸ್ ಕ್ರಿಕೆಟ್‌ನಲ್ಲಿ ಪ್ರಖ್ಯಾತಿ ಗಳಿಸಿದಷ್ಟೇ ವಿವಾದಗಳಿಂದಲೂ ಗಮನ ಸೆಳೆದಿದ್ದರು. ಅದಕ್ಕೊಂದು ಉದಾಹರಣೆ ಮಂಕಿಗೇಟ್ ಹಗರಣ. 2008ರ ಹೊಸ ವರ್ಷದ ಹೊಸ್ತಿಲಲ್ಲಿ ಸಿಡ್ನಿಯಲ್ಲಿ ಭಾರತ ಮತ್ತು ಆಸೀಸ್ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದ್ದ ವೇಳೆ ಹರ್ಭಜನ್ ಸಿಂಗ್ ಅವರನ್ನು ಮಂಕಿ (ಮಂಗ) ಎಂದು ಕರೆದಿದ್ದರು. ಆ ಸಂದರ್ಭ ಕ್ರಿಕೆಟ್ ಜಗತ್ತಿನಲ್ಲಿ ಇದು ದೊಡ್ಡ ಸುದ್ದಿಯಾಗಿತ್ತು.
ಐಪಿಎಲ್ನಲ್ಲೂ ಆಡಿದ್ದ ಸೈಮಂಡ್ಸ್: ಆಂಡ್ರ್ಯೂ ಸೈಮಂಡ್ಸ್ 2008 ರಲ್ಲಿ ಐಪಿಎಲ್‌ನ ಆರಂಭಿಕ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಭಾಗವಾಗಿದ್ದರು. 2009 ರಲ್ಲಿ ಗಿಲ್‌ಕ್ರಿಸ್ಟ್ ನಾಯಕತ್ವದಲ್ಲಿಡೆಕ್ಕನ್ ಚಾರ್ಜರ್ಸ್ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತು. 2009 ರ ಫೈನಲ್‌ನಲ್ಲಿ ಅವರು 21 ಎಸೆತಗಳಲ್ಲಿ 33 ರನ್ ಗಳಿಸಿದರು. ಇದಲ್ಲದೇ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು. ಸೈಮಂಡ್ಸ್ 39 ಐಪಿಎಲ್ ಪಂದ್ಯಗಳಲ್ಲಿ 36ರ ಸರಾಸರಿಯಲ್ಲಿ 974 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಶತಕ ಮತ್ತು ಐದು ಅರ್ಧ ಶತಕಗಳನ್ನು ಗಳಿಸಿದ್ದಾರೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Sun, 15 May 22