Tim Bresnan: ಕ್ರಿಕೆಟ್‌ಗೆ ವಿದಾಯ ಹೇಳಿದ ಇಂಗ್ಲೆಂಡ್ ಚಾಂಪಿಯನ್ ತಂಡದ ಆಟಗಾರ
Tim Bresnan announces retirement: ಇದು ನನ್ನ ತುಂಬಾ ಕಠಿಣ ನಿರ್ಧಾರ. ಆದರೆ ಚಳಿಗಾಲದಲ್ಲಿ ತರಬೇತಿಗೆ ಮರಳಿದ ನಂತರ, ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ. ನನ್ನ 21 ನೇ ವೃತ್ತಿಪರ ವರ್ಷಕ್ಕೆ ತಯಾರಾಗಲು ನಾನು ಆಫ್-ಸೀಸನ್ ಉದ್ದಕ್ಕೂ ಶ್ರಮಿಸುತ್ತಿದ್ದೆ. ಆದರೆ ನನ್ನ ಮತ್ತು ನನ್ನ ಸಹ ಆಟಗಾರರಿಗಾಗಿ ನಾನು ನಿಗದಿಪಡಿಸಿದ ಮಾನದಂಡವನ್ನು ನಾನು ತಲುಪಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ.
ಇಂಗ್ಲೆಂಡ್‌ನ ಆಲ್‌ರೌಂಡರ್ ಟಿಮ್ ಬ್ರೆಸ್ನನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ ಬ್ರೆಸ್ನನ್ ಅವರ 20 ವರ್ಷಗಳ ವೃತ್ತಿಪರ ಕ್ರಿಕೆಟ್ ಜೀವನ ಅಂತ್ಯಗೊಂಡಿದೆ. ಬ್ರೆಸ್ನನ್ ಇಂಗ್ಲೆಂಡ್ ಪರ 23 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಹಾಗೆಯೇ 2010-11 ಮತ್ತು 2013 ರಲ್ಲಿ ಪ್ರತಿಷ್ಠಿತ ಆ್ಯಶಸ್ ಸರಣಿಯನ್ನು ಗೆದ್ದ ಇಂಗ್ಲೆಂಡ್ ತಂಡದ ಸದಸ್ಯರಾಗಿದ್ದರು. ಇದಲ್ಲದೇ 2010ರಲ್ಲಿ ಟಿ20 ವಿಶ್ವಕಪ್ ಗೆದ್ದ ಆಂಗ್ಲರ ತಂಡದಲ್ಲೂ ಭಾಗಿಯಾಗಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ಗೆದ್ದ ಮೊದಲ ಐಸಿಸಿ ವಿಶ್ವಕಪ್ ಆಗಿತ್ತು ಎಂಬುದು ವಿಶೇಷ. ಹೀಗೆ ಪ್ರಮುಖ ಸರಣಿ ಹಾಗೂ ಟೂರ್ನಿಯಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದ ಬ್ರೆಸ್ನನ್ ಕಳೆದ ಕೆಲ ವರ್ಷಗಳಿಂದ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಇದಾಗ್ಯೂ ಅವರು ಕೌಂಟಿ ಕ್ರಿಕೆಟ್ ಮುಂದುವರೆಸಿದ್ದರು. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ ನಿವೃತ್ತಿ ಘೋಷಿಸಿ 20 ವರ್ಷಗಳ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
“ಇದು ನನ್ನ ತುಂಬಾ ಕಠಿಣ ನಿರ್ಧಾರ. ಆದರೆ ಚಳಿಗಾಲದಲ್ಲಿ ತರಬೇತಿಗೆ ಮರಳಿದ ನಂತರ, ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸಿದೆ. ನನ್ನ 21 ನೇ ವೃತ್ತಿಪರ ವರ್ಷಕ್ಕೆ ತಯಾರಾಗಲು ನಾನು ಆಫ್-ಸೀಸನ್ ಉದ್ದಕ್ಕೂ ಶ್ರಮಿಸುತ್ತಿದ್ದೆ. ಆದರೆ ನನ್ನ ಮತ್ತು ನನ್ನ ಸಹ ಆಟಗಾರರಿಗಾಗಿ ನಾನು ನಿಗದಿಪಡಿಸಿದ ಮಾನದಂಡವನ್ನು ನಾನು ತಲುಪಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಆಟದ ಬಗ್ಗೆ ನನ್ನಲ್ಲಿದ್ದ ಹಸಿವು ಮತ್ತು ಉತ್ಸಾಹವು ಎಂದಿಗೂ ಕುಗ್ಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. 2022ರ ಸೀಸನ್‌ನಲ್ಲಿ ನಾನು ಆಡಬಹುದು ಎಂದು ನನ್ನ ಮನಸ್ಸು ಹೇಳುತ್ತಿದೆ. ಆದರೆ ದೇಹವು ಅದಕ್ಕೆ ಸಿದ್ಧವಾಗಿಲ್ಲ. ನಾನು ಯಾವಾಗಲೂ ನನ್ನ ವೃತ್ತಿಜೀವನವನ್ನು ಬಹಳ ಹೆಮ್ಮೆಯಿಂದ ನೋಡುತ್ತೇನೆ ಮತ್ತು ವಾರ್ವಿಕ್‌ಷೈರ್ ಮತ್ತು ದೇಶವನ್ನು ಪ್ರತಿನಿಧಿಸುವುದು ಗೌರವವಾಗಿದೆ.” ಎಂದು ಟಿಮ್ ಬ್ರೆಸ್ನನ್ ವಿದಾಯ ಪತ್ರದಲ್ಲಿ ತಿಳಿಸಿದ್ದಾರೆ.
ಬ್ರೆಸ್ನನ್ ಇಂಗ್ಲೆಂಡ್ ಪರ 23 ಟೆಸ್ಟ್ ಪಂದ್ಯಗಳಲ್ಲಿ 72 ವಿಕೆಟ್ ಕಬಳಿಸಿದ್ದಾರೆ. ಇದಲ್ಲದೇ 85 ಏಕದಿನ ಪಂದ್ಯಗಳಲ್ಲಿ 109 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ಪರ ಆಡಿದ 34 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಉರುಳಿಸಿದ್ದಾರೆ. 2001 ರಿಂದ 2019 ರವರೆಗೆ ಯಾರ್ಕ್‌ಷೈರ್‌ಗಾಗಿ ಕೌಂಟಿ ಕ್ರಿಕೆಟ್ ಆಡಿದ್ದ ಬ್ರೆಸ್ನನ್ ಅವರು ಜೂನ್ 2020 ರಲ್ಲಿ ಯಾರ್ಕ್‌ಷೈರ್ ಅನ್ನು ತೊರೆದು ವಾರ್ವಿಕ್‌ಷೈರ್‌ನೊಂದಿಗೆ 2 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದರು. ಬ್ರೆಸ್ನನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 7 ಶತಕಗಳೊಂದಿಗೆ 7 ಸಾವಿರ ರನ್ ಗಳಿಸಿದ್ದಾರೆ. ಹಾಗೆಯೇ 575 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ
ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್
(Former England all-rounder Tim Bresnan announces retirement)