ವಿಶ್ವಕಪ್ ವಿಜೇತ ಆಟಗಾರನಿಗೆ 6 ವರ್ಷ ನಿಷೇಧ ಹೇರಿದ ಐಸಿಸಿ..!
Marlon Samuels Ban: 2016 ರ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಬ್ಯಾಟರ್ ಮರ್ಲಾನ್ ಸ್ಯಾಮ್ಯುಯೆಲ್ಸ್‌ಗೆ ಐಸಿಸಿ 6 ವರ್ಷಗಳ ನಿಷೇಧ ಹೇರಿದೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ಸ್ಯಾಮ್ಯುಯೆಲ್ಸ್ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ.
2016 ರ ಟಿ20 ವಿಶ್ವಕಪ್ (T20 World Cup) ಚಾಂಪಿಯನ್ ವೆಸ್ಟ್ ಇಂಡೀಸ್ (West Indies) ತಂಡದ ಸ್ಟಾರ್ ಬ್ಯಾಟರ್ ಮರ್ಲಾನ್ ಸ್ಯಾಮ್ಯುಯೆಲ್ಸ್‌ಗೆ (Marlon Samuels) ಐಸಿಸಿ (ICC) 6 ವರ್ಷಗಳ ನಿಷೇಧ ಹೇರಿದೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ಸ್ಯಾಮ್ಯುಯೆಲ್ಸ್ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ. 2020 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಸ್ಯಾಮ್ಯುಯೆಲ್ಸ್‌ಗೆ ಈ ನಿಷೇಧದ ಶಿಕ್ಷೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ ಸ್ಯಾಮ್ಯುಯೆಲ್ಸ್ ಪ್ರಪಂಚದಾದ್ಯಂತದ ಕ್ರಿಕೆಟ್ ಲೀಗ್‌ಗಳಲ್ಲಿ ಆಡುತ್ತಿದ್ದರು. ಆದರೀಗ ಅವರು ಮುಂದಿನ 6 ವರ್ಷಗಳ ಕಾಲ ಯಾವುದೇ ಲೀಗ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ನಾಲ್ಕು ಭ್ರಷ್ಟಾಚಾರದ ಆರೋಪಗಳು
2019 ರಲ್ಲಿ ನಡೆದ ಅಬುಧಾಬಿ ಟಿ10 ಲೀಗ್ ಸಮಯದಲ್ಲಿ ಸ್ಯಾಮ್ಯುಯೆಲ್ಸ್, ಐಸಿಸಿ ನಿಯಮಗಳನ್ನು ಉಲ್ಲಂಘಿಸಿರುವುದು ಸಾಭೀತಾದ ಬಳಿಕ ಅವರಿಗೆ ಈ ನಿಷೇಧ ವಿಧಿಸಲಾಗಿದೆ. ಸೆಪ್ಟೆಂಬರ್ 2021 ರಲ್ಲಿ ಐಸಿಸಿ, ಸ್ಯಾಮ್ಯುಯೆಲ್ಸ್ ಅವರ ವಿರುದ್ಧ ನಾಲ್ಕು ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿತ್ತು. ಆ ಬಳಿಕ ನಡೆದ ತನಿಖೆಯ ನಂತರ ಈ ವರ್ಷದ ಆಗಸ್ಟ್‌ನಲ್ಲಿ ಮರ್ಲಾನ್ ಸ್ಯಾಮ್ಯುಯೆಲ್ಸ್ ಅವರು ತಪ್ಪಿತಸ್ಥರೆಂದು ಘೋಷಿಸಲಾಗಿತ್ತು. ಇದೀಗ ಐಸಿಸಿ ನೀತಿ ಸಂಹಿತೆಯ ನಿಯಮಗಳಾದ 2.4.2, 2.4.3, 2.4.6 ಮತ್ತು 2.4.7 ರ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳಲ್ಲಿ ಸ್ಯಾಮ್ಯುಯೆಲ್ಸ್ ತಪ್ಪಿತಸ್ಥರೆಂದು ಕಂಡುಬಂದಿದೆ.
ಮರ್ಲಾನ್ ಸ್ಯಾಮುಯೆಲ್ಸ್ ಇಂತಹ ವಿವಾದದಲ್ಲಿ ಸಿಲುಕಿರುವುದು ಇದೇ ಮೊದಲಲ್ಲ. ಮೇ 2008 ರಲ್ಲಿ ಅವರು ಹಣ, ಇತರ ಬಹುಮಾನಗಳನ್ನು ಸ್ವೀಕರಿಸಿದ ಆರೋಪದಡಿಯಲ್ಲಿ ತಪ್ಪಿತಸ್ಥರೆಂದು ಸಾಭೀತಾಗಿತ್ತು.ಆ ನಂತರ ಅವರನ್ನು ಎರಡು ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಿಸಲಾಗಿತ್ತು. ಇದೀಗ ಸ್ಯಾಮ್ಯುಯೆಲ್ಸ್ ಮತ್ತೊಮ್ಮೆ 6 ವರ್ಷಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಿದೆ.
The former West Indies player with more than 300 international appearances has had his ban confirmed by the ICC.
Details 👇https://t.co/FCybKZNWxz
— ICC (@ICC) November 23, 2023
2016 ವಿಶ್ವಕಪ್‌ನಲ್ಲಿ ದುರ್ವತನೆ
ಈ ಹಿಂದೆಯೂ ಅಂದರೆ, 2016 ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ತಂಡ ಗೆದ್ದುಕೊಂಡಿತ್ತು. ಆ ವೇಳೆ ತಂಡದ ಭಾಗವಾಗಿದ್ದ ಮರ್ಲಾನ್ ಸ್ಯಾಮುಯೆಲ್ಸ್, ಗೆಲುವಿನ ಅಮಲಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ದುರ್ವತನೆ ತೋರಿದ್ದರು. ಪತ್ರಿಕಾಗೋಷ್ಠಿ ನಡೆಯುವ ವೇಳೆ ಮೇಜಿನ ಮೇಲೆ ತಮ್ಮ ಕಾಲಿಟ್ಟು ಮಾತನಾಡಿದ್ದರು.
ಸ್ಯಾಮ್ಯುಯೆಲ್ಸ್ ವೃತ್ತಿ ಜೀವನ
2000ನೇ ಇಸವಿಯಲ್ಲಿ ವೆಸ್ಟ್ ಇಂಡೀಸ್ ಪರ ಚೊಚ್ಚಲ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸ್ಯಾಮ್ಯುಯೆಲ್ಸ್, 2018 ರಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. 18 ವರ್ಷಗಳ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಅವರು ವೆಸ್ಟ್ ಇಂಡೀಸ್ ತಂಡವನ್ನು ಅನೇಕ ಪಂದ್ಯಗಳಲ್ಲಿ ಗೆಲ್ಲುವಿನ ದಡ ಸೇರಿಸಿದ್ದರು. ವೆಸ್ಟ್ ಇಂಡೀಸ್ ಪರ 71 ಟೆಸ್ಟ್ ಪಂದ್ಯಗಳಲ್ಲಿ 3917 ರನ್, 207 ಏಕದಿನ ಪಂದ್ಯಗಳಲ್ಲಿ 5606 ರನ್ ಮತ್ತು 67 ಟಿ20 ಪಂದ್ಯಗಳಲ್ಲಿ 1611 ರನ್ ಬಾರಿಸಿದ್ದಾರೆ. ಹಾಗೆಯೇ ಎಲ್ಲಾ ಮೂರು ಮಾದರಿಗಳಲ್ಲಿ 17 ಶತಕಗಳನ್ನು ಸಿಡಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಸ್ಮರಣೀಯ ಬ್ಯಾಟಿಂಗ್
2012 ಮತ್ತು 2016ರ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಪರ ಮಾರ್ಲಾನ್ ಸ್ಯಾಮುಯೆಲ್ಸ್ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲದೆ ಈ ಎರಡೂ ಆವೃತ್ತಿಯ ಫೈನಲ್ ಪಂದ್ಯಗಳಲ್ಲಿ ಅತ್ಯುತ್ತಮ ಸ್ಕೋರರ್ ಎನಿಸಿಕೊಂಡಿದ್ದರು. 2012ರ ಫೈನಲ್‌ನಲ್ಲಿ 78 ರನ್ ಸಿಡಿಸಿದ್ದ ಸ್ಯಾಮ್ಯುಯೆಲ್ಸ್, 2016ರ ಫೈನಲ್‌ನಲ್ಲಿ 85 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಇವರಿಂದಾಗಿ ವೆಸ್ಟ್ ಇಂಡೀಸ್ ತಂಡ ಎರಡು ಬಾರಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:16 pm, Thu, 23 November 23