IPL 2022: ಕಳ್ಳಾಟ, ಶಾರುಖ್ ರಾದ್ಧಾಂತ, ಕಪಾಳ ಮೋಕ್ಷ, ಅಜೀವ ನಿಷೇಧ! ಇವಿಷ್ಟು ಐಪಿಎಲ್ನ ಪ್ರಮುಖ ವಿವಾದಗಳು
IPL Controversies: 8 ತಂಡಗಳೊಂದಿಗೆ ಆರಂಭವಾದ ಐಪಿಎಲ್ ಲೀಗ್ ಇದೀಗ 10 ತಂಡಗಳನ್ನು ತಲುಪಿದೆ. ಈ ವರ್ಷದ ಲೀಗ್ ಹಲವು ವಿಧಗಳಲ್ಲಿ ವಿಶಿಷ್ಟವಾಗಿದೆ. ಆದಾಗ್ಯೂ ಈ ಲೀಗ್‌ನ ಇತಿಹಾಸದಲ್ಲಿ ಕೆಲವು ಗಾಯದ ಗುರುತುಗಳೂ ಇವೆ. ಐಪಿಎಲ್ ಇತಿಹಾಸದಲ್ಲಿ ನಡೆದಂತಹ ಐದು ದೊಡ್ಡ ವಿವಾದಗಳ ಬಗ್ಗೆ ಇಲ್ಲಿದೆ ವಿವರ.
ಕ್ರಿಕೆಟ್ ದುನಿಯಾಕ್ಕೆ ಹೊಸ ಆಯಾಮ ನೀಡಿ, ಆಟಗಾರರ ಮೇಲೆ ಹಣದ ಹೊಳೆ ಹರಿಸುವ ಐಪಿಎಲ್ ((Indian Premier League)) ಎಂಬ ಮಿಲಿಯನ್ ಡಾಲರ್ ಟೂರ್ನಿ 2008 ರಲ್ಲಿ ಪ್ರಾರಂಭವಾಗಿ, ಇಂದಿಗೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಎನಿಸಿಕೊಂಡಿದೆ. ಪ್ರಸ್ತುತ, 15 ನೇ ಆವೃತ್ತಿಯ ಲೀಗ್ (IPL 2022) ಮಾರ್ಚ್ 26 ರಂದು ಪ್ರಾರಂಭವಾಗುತ್ತಿದ್ದು, ಈ ಲೀಗ್ ವಿಶ್ವ ಕ್ರಿಕೆಟ್‌ಗೆ ಅನೇಕ ಸ್ಟಾರ್ ಆಟಗಾರರನ್ನು ಕೊಟ್ಟಿದೆ. 8 ತಂಡಗಳೊಂದಿಗೆ ಆರಂಭವಾದ ಐಪಿಎಲ್ ಲೀಗ್ ಇದೀಗ 10 ತಂಡಗಳನ್ನು ತಲುಪಿದೆ. ಈ ವರ್ಷದ ಲೀಗ್ ಹಲವು ವಿಧಗಳಲ್ಲಿ ವಿಶಿಷ್ಟವಾಗಿದೆ. ಆದಾಗ್ಯೂ ಈ ಲೀಗ್‌ನ ಇತಿಹಾಸದಲ್ಲಿ ಕೆಲವು ಗಾಯದ ಗುರುತುಗಳೂ ಇವೆ. ಐಪಿಎಲ್ ಇತಿಹಾಸದಲ್ಲಿ ನಡೆದಂತಹ ಐದು ದೊಡ್ಡ ವಿವಾದಗಳ ಬಗ್ಗೆ ಇಲ್ಲಿದೆ ವಿವರ.
1- ಸ್ಪಾಟ್ ಫಿಕ್ಸಿಂಗ್ 2013 ರಲ್ಲಿ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್‌ನಲ್ಲಿ ದೊಡ್ಡ ವಿವಾದವೆದ್ದಿತ್ತು. ವಾಸ್ತವವಾಗಿ, ಐಪಿಎಲ್ 2013 ರಲ್ಲಿ ಮೂವರು ಆಟಗಾರರು ಸ್ಪಾಟ್ ಫಿಕ್ಸಿಂಗ್ ಆರೋಪ ಎದುರಿಸಿದ್ದರು. ಭಾರತದ ವೇಗದ ಬೌಲರ್‌ಗಳಾದ ಶ್ರೀಶಾಂತ್, ಅಂಕಿತ್ ಚವಾಣ್ ಮತ್ತು ಅಜಿತ್ ಚಾಂಡಿಲಾ ಅವರನ್ನೂ ಈ ಆರೋಪದಡಿಯಲ್ಲಿ ಬಂಧಿಸಲಾಯಿತು. ತನಿಖೆ ನಂತರ ಬಿಸಿಸಿಐ ಈ ಆಟಗಾರರಿಗೆ ಆಜೀವ ನಿಷೇಧ ಹೇರಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿದ್ದ ಶ್ರೀಶಾಂತ್ ಹಲವು ವರ್ಷಗಳ ಹೋರಾಟದ ಬಳಿಕ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಿಕೊಂಡಿದ್ದರು. ನಂತರ ದೇಶೀ ಟೂರ್ನಿಯಲ್ಲಿ ತಮ್ಮ ಕೊನೆಯ ಪಂದ್ಯವನ್ನಾಡಿ, ಕ್ರಿಕೆಟ್‌ಗೆ ವಿದಾಯ ಹೇಳಿದರು.
2- ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ನಿಷೇಧ ಬೆಟ್ಟಿಂಗ್ ವಿವಾದದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್ ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೆಯ್ಯಪ್ಪನ್ ಮತ್ತು ರಾಜಸ್ಥಾನ್ ರಾಯಲ್ಸ್ ಮಾಲೀಕ ರಾಜ್ ಕುಂದ್ರಾ ಕೂಡ ತಪ್ಪಿತಸ್ಥರೆಂದು ಸಾಭೀತಾಗಿತ್ತು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಎರಡು ವರ್ಷಗಳ ಕಾಲ ಐಪಿಎಲ್ನಿಂದ ನಿಷೇಧಗೊಳಿಸಲಾಗಿತ್ತು.
3- ಶಾರುಖ್ ಖಾನ್‌ಗೆ ನಿಷೇಧದ ಬರೆ ಐಪಿಎಲ್ 2012ರಲ್ಲಿ ಕೆಕೆಆರ್ ಮಾಲೀಕ ಶಾರುಖ್ ಖಾನ್ ವಾಂಖೆಡೆ ಸ್ಟೇಡಿಯಂ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು. ಶಾರುಖ್ ಅವರನ್ನು ಸೆಕ್ಯೂರಿಟಿ ಗಾರ್ಡ್ ಮೈದಾನಕ್ಕೆ ಪ್ರವೇಶಿಸದಂತೆ ತಡೆದಿದ್ದರು. ಇದು ಬಾದಶಹನಿಗೆ ಕೋಪ ತರಿಸಿತು. ಇದರಿಂದ ಕಿಂಗ್ ಖಾನ್ ಸೆಕ್ಯೂರಿಟಿ ಗಾರ್ಡ್ ಬಳಿ ಅಸಭ್ಯವಾಗಿ ವರ್ತಿಸಿದ್ದರು ಎಂಬ ಆರೋಪದಡಿ, ಮುಂಬೈ ಕ್ರಿಕೆಟ್ ಸಂಸ್ಥೆ ಶಾರುಖ್ ಖಾನ್‌ಗೆ ಸ್ಟೇಡಿಯಂ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು. ಆದಾಗ್ಯೂ, ನಿಷೇಧವನ್ನು 2015 ರಲ್ಲಿ ತೆಗೆದುಹಾಕಲಾಯಿತು.
4- ಹರ್ಭಜನ್ ಸಿಂಗ್, ಶ್ರೀಶಾಂತ್ ವಿವಾದ ಐಪಿಎಲ್‌ನಲ್ಲಿ ಮೊದಲ ವಿವಾದ ಲೀಗ್‌ನ ಮೊದಲ ಸೀಸನ್‌ನಲ್ಲಿ ನಡೆದಿತ್ತು. ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ವೇಗದ ಬೌಲರ್ ಶ್ರೀಶಾಂತ್ ಅವರಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ್ದರು. ವಾಸ್ತವವಾಗಿ, ಮೊಹಾಲಿಯಲ್ಲಿ ಏಪ್ರಿಲ್ 25, 2008 ರಂದು ಕಿಂಗ್ಸ್ XI ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ನಂತರ ಶ್ರೀಶಾಂತ್ ಅಳುತ್ತಿರುವುದು ಕಂಡುಬಂದಿತ್ತು. ಭಜ್ಜಿ ಕಪಾಳಮೋಕ್ಷ ಮಾಡಿದರು ಎಂದು ಶ್ರೀಶಾಂತ್ ಆರೋಪಿಸಿದ್ದರು. ಇದರ ಬೆನ್ನಲ್ಲೇ ಹರ್ಭಜನ್ 11 ಪಂದ್ಯಗಳಿಂದ ನಿಷೇಧಕ್ಕೊಳಗಾಗಿದ್ದರು.
5- ಲಲಿತ್ ಮೋದಿ ಮೇಲೆ ಆಜೀವ ನಿಷೇಧ ಲಲಿತ್ ಮೋದಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಿತಾಮಹ ಎಂಬ ಖ್ಯಾತಿ ಪಡೆದಿದ್ದಾರೆ. ಆದಾಗ್ಯೂ, 2010 ರಲ್ಲಿ, ಅವರು ಐಪಿಎಲ್ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ತನಿಖೆಯ ನಂತರ ಬಿಸಿಸಿಐ ಅವರನ್ನು ಅಮಾನತುಗೊಳಿಸಿತು. ಇದರ ಬೆನ್ನಲ್ಲೇ 2013ರಲ್ಲಿ ಅವರ ಮೇಲಿನ ಆರೋಪಗಳೆಲ್ಲವೂ ನಿಜವೆಂದು ಸಾಬೀತಾಯಿತು. ಹೀಗಾಗಿ ಬಿಸಿಸಿಐ ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಂದ ಅವರ ಮೇಲೆ ಆಜೀವ ನಿಷೇಧ ಹೇರಿದೆ.
ಇದನ್ನೂ ಓದಿ:IPL 2022: ನಾಲ್ವರು ವಿಕೆಟ್ ಕೀಪರ್ಸ್, ಇಬ್ಬರು ವಿದೇಶಿಗರು; 10 ಐಪಿಎಲ್ ತಂಡಗಳ ನಾಯಕರು ಇವರೆ ನೋಡಿ