India vs Pakistan: ಭಾರತ-ಪಾಕಿಸ್ತಾನ್ ಸರಣಿ ಶುರುವಾಗಲಿದ್ಯಾ? ಈ ಬಗ್ಗೆ ಗಂಗೂಲಿ ಹೇಳಿದ್ದೇನು?
Sourav Ganguly: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರು ಈ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷರು ರಾಜಕೀಯವನ್ನು ಕ್ರೀಡೆಯಿಂದ ದೂರವಿಡಬೇಕು ಎಂದು ತಿಳಿಸಿದರು.
ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಇದೀಗ ಭಾರತ ಮತ್ತು ಪಾಕಿಸ್ತಾನ್ ನಡುವಣ ದ್ವಿಪಕ್ಷೀಯ ಸರಣಿಯ ಚರ್ಚೆಗಳು ಶುರುವಾಗಿದೆ. ಏಕೆಂದರೆ ಈ ಬಾರಿಯ ಟಿ20 ವಿಶ್ವಕಪ್ನಲ್ಲಿನ ಉಭಯ ತಂಡಗಳ ಮುಖಾಮುಖಿ ಎಲ್ಲಾ ರೀತಿಯಿಂದಲೂ ರೋಚಕವಾಗಿತ್ತು. ಇದೀಗ ಎರಡೂ ದೇಶಗಳ ನಡುವಣ ಕ್ರಿಕೆಟ್ ಸರಣಿ ಮತ್ತೆ ಶುರುವಾಗಬೇಕೆಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. 2012-13ರಲ್ಲಿ ಎರಡು ತಂಡಗಳು ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿಯಲ್ಲಿ ಮುಖಾಮುಖಿಯಾಗಿತ್ತು. ಭಾರತದಲ್ಲಿ ನಡೆದ ಈ ಸರಣಿಯಲ್ಲಿ ಮೂರು ಏಕದಿನ ಮತ್ತು ಮೂರು T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿತ್ತು.
ಆ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನ ರಾಜತಾಂತ್ರಿಕ ಸಂಬಂಧಗಳು ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಕ್ರಿಕೆಟ್ (IND vs PAK) ಸ್ಥಗಿತಗೊಳ್ಳುವಂತೆ ಮಾಡಿದೆ. ಆದರೆ, ಪಾಕಿಸ್ತಾನದ ಹಲವು ಮಾಜಿ ಕ್ರಿಕೆಟಿಗರು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸರಣಿಯನ್ನು ಪುನರಾರಂಭಿಸುವಂತೆ ಒತ್ತಾಯಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್ ಮಂಡಳಿ ಮಾತ್ರ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದಿದ್ದಾರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ.
ಉಭಯ ತಂಡಗಳ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗರಿದ್ದಾರೆ. ಅತ್ತ ಪಾಕಿಸ್ತಾನ್ ಮಾಜಿ ನಾಯಕ ರಮೀಜ್ ರಾಜಾ ಇದ್ದರೆ, ಇತ್ತ ಸೌರವ್ ಗಂಗೂಲಿ ಇದ್ದಾರೆ. ಹೀಗಾಗಿ ಮತ್ತೆ ದ್ವಿಪಕ್ಷೀಯ ಸರಣಿ ಆಯೋಜಿಸುವಂತೆ ಅನೇಕ ಮಾಜಿ ಕ್ರಿಕೆಟಿಗರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗಂಗೂಲಿ, ‘ಇದು ಕ್ರಿಕೆಟ್ ಮಂಡಳಿಗಳ ಕೈಯಲ್ಲಿಲ್ಲ. ವಿಶ್ವ ಟೂರ್ನಿಗಳಲ್ಲಿ ಎರಡೂ ತಂಡಗಳು ಪರಸ್ಪರ ಆಡುತ್ತವೆ. ದ್ವಿಪಕ್ಷೀಯ ಕ್ರಿಕೆಟ್ ಅನ್ನು ವರ್ಷಗಳ ಕಾಲ ತಡೆಹಿಡಿಯಲಾಗಿದೆ. ಇದರ ಬಗ್ಗೆ ಆಯಾ ಸರ್ಕಾರಗಳು ಕೆಲಸ ಮಾಡಬೇಕಾಗಿದೆ. ಅಷ್ಟೇ ಅಲ್ಲದೆ ಸರಣಿ ಆಯೋಜಿಸುವುದು ರಮೀಜ್ ಕೈಯಲ್ಲಾಗಲೀ ನನ್ನ ಕೈಯಲ್ಲಾಗಲೀ ಇಲ್ಲ ಎಂದು ಗಂಗೂಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ರಮೀಜ್ ರಾಜಾ ಅವರು ಈ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷರು ರಾಜಕೀಯವನ್ನು ಕ್ರೀಡೆಯಿಂದ ದೂರವಿಡಬೇಕು ಎಂದು ತಿಳಿಸಿದರು. ನಾನು ಸಹ ರಾಜಕೀಯವನ್ನು ಕ್ರೀಡೆಯಿಂದ ಸಾಧ್ಯವಾದಷ್ಟು ದೂರವಿಡಬೇಕು ಎಂಬ ನಿಲುವನ್ನು ಹೊಂದಿದ್ದೇನೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಇದು ಕ್ರಿಕೆಟ್ ಮಂಡಳಿಗಳ ಕೈಯಲ್ಲಿಲ್ಲ. ದ್ವಿಪಕ್ಷೀಯ ಸರಣಿಯನ್ನು ಆಯೋಜಿಸುವ ಬಗ್ಗೆ ಆಯಾ ಸರ್ಕಾರಗಳು ಹೆಜ್ಜೆಯನ್ನಿಡಬೇಕಾಗುತ್ತದೆ ಎಂದು ಗಂಗೂಲಿ ತಿಳಿಸಿದರು.
ಇದನ್ನೂ ಓದಿ: T20 World Cup 2021: ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾಗೆ ಸಿಕ್ಕ ಪ್ರಶಸ್ತಿ ಮೊತ್ತವೆಷ್ಟು ಗೊತ್ತಾ?
ಇದನ್ನೂ ಓದಿ: T20 World Cup Winners: 7 ಟಿ20 ವಿಶ್ವಕಪ್: ಚಾಂಪಿಯನ್ ಪಟ್ಟಕ್ಕೇರಿದ 6 ತಂಡಗಳು
ಇದನ್ನೂ ಓದಿ: Sourav Ganguly: ದ್ರಾವಿಡ್ ಅವರ ಮಗ ಕರೆ ಮಾಡಿ ಅಪ್ಪ ತುಂಬಾ ಕಟ್ಟುನಿಟ್ಟು, ನೀವು ಅವರನ್ನು ಕರ್ಕೊಂಡು ಹೋಗಿ ಎಂದರು..!
(Ganguly on resumption of India-Pakistan bilateral series)