Gautam Gambhir: ಟೀಮ್ ಇಂಡಿಯಾ ಕೋಚ್ ಹುದ್ದೆ: ಗೌತಮ್ ಗಂಭೀರ್​ಗೆ ಪ್ರತಿಸ್ಪರ್ಧಿ ಎಂಟ್ರಿ..!

|

Updated on: Jun 19, 2024 | 1:55 PM

Gautam Gambhir vs W.V. Raman: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿಯಲಿದ್ದಾರೆ. ಅದಕ್ಕೂ ಮುನ್ನ ಹೊಸ ಕೋಚ್ ಆಯ್ಕೆಗೆ ಬಿಸಿಸಿಐ ಮುಂದಾಗಿದ್ದು, ಅದರಂತೆ ಇದಿಗ ಮಾಜಿ ಕ್ರಿಕೆಟಿಗರಾದ ಡಬ್ಲ್ಯೂ ರಾಮನ್ ಹಾಗೂ ಗೌತಮ್ ಗಂಭೀರ್ ಅವರ ಸಂದರ್ಶನ ನಡೆಯುತ್ತಿದೆ.

Gautam Gambhir: ಟೀಮ್ ಇಂಡಿಯಾ ಕೋಚ್ ಹುದ್ದೆ: ಗೌತಮ್ ಗಂಭೀರ್​ಗೆ ಪ್ರತಿಸ್ಪರ್ಧಿ ಎಂಟ್ರಿ..!
Gautam Gambhir - WV Raman
Follow us on

ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಭಾರತ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ನೇರವಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೀಗ ಗಂಭೀರ್​ಗೆ ಪ್ರತಿಸ್ಪರ್ಧಿಯಾಗಿ ಡಬ್ಲ್ಯು.ವಿ ರಾಮನ್ ಕಾಣಿಸಿಕೊಂಡಿದ್ದಾರೆ. ಜೂನ್ 18 ರಂದು ಭಾರತದ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗಾಗಿ ಸಂದರ್ಶನ ನಡೆಸಲಾಗಿದ್ದು, ಈ ವೇಳೆ ಡಬ್ಲ್ಯು.ವಿ ರಾಮನ್ ಕೂಡ ಹಾಜರಾಗಿದ್ದಾರೆ.

ಮಂಗಳವಾರ ನಡೆದ ಸಂದರ್ಶನದಲ್ಲಿ ಗೌತಮ್ ಗಂಭೀರ್ ಹಾಗೂ ಡಬ್ಲ್ಯು.ವಿ ರಾಮನ್ ಕಾಣಿಸಿಕೊಂಡಿದ್ದರು. ಈ ವೇಳೆ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಇಬ್ಬರ ಜೊತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಮನ್ ಅವರು 2021 ರಲ್ಲಿ ಭಾರತ ಮಹಿಳಾ ತಂಡದ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ, ವಿವಿಧ ರಾಜ್ಯಗಳಲ್ಲಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ಯಾಟಿಂಗ್ ತರಬೇತುದಾರರಾಗಿ ಕಾಣಿಸಿಕೊಂಡಿದ್ದರು. ಈ ಅನುಭವದೊಂದಿಗೆ ಇದೀಗ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಮೇಲೆ ಡಬ್ಲ್ಯೂ.ವಿ ರಾಮನ್ ಕಣ್ಣಿಟ್ಟಿದ್ದಾರೆ.

ಅತ್ತ ಐಪಿಎಲ್​ನಲ್ಲಿ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವ ಗೌತಮ್ ಗಂಭೀರ್ ಕೂಡ ಭಾರತ ತಂಡದ ಕೋಚ್ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಇದೀಗ ವಿ ರಾಮನ್ ಹಾಗೂ ಗೌತಮ್ ಗಂಭೀರ್ ಮೊದಲ ಸುತ್ತಿನ ಸಂದರ್ಶನ ಮುಗಿಸಿದ್ದಾರೆ.

2ನೇ ಸುತ್ತಿನ ಸಂದರ್ಶನ ಯಾವಾಗ?

ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜ್ಪೆ ಮತ್ತು ಸುಲಕ್ಷಣಾ ನಾಯಕ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಬುಧವಾರ ಗೌತಮ್ ಗಂಭೀರ್ ಹಾಗೂ ಡಬ್ಲ್ಯೂ.ವಿ ರಾಮನ್ ಅವರನ್ನು 2ನೇ ಸುತ್ತಿನ ಸಂದರ್ಶನಕ್ಕೆ ಆಯ್ಕೆ ಮಾಡಿದ್ದಾರೆ.

ಈ ಸುತ್ತಿನಲ್ಲಿ ಸಿಎಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದು, ಇವರಿಬ್ಬರಲ್ಲಿ ಒಬ್ಬರ ಹೆಸರನ್ನು ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐಗೆ ಶಿಫಾರಸ್ಸು ಮಾಡಲಿದೆ. ಇದಾದ ಬಳಿಕ ಬಿಸಿಸಿಐ ಅಧಿಕೃತವಾಗಿ ಕೋಚ್ ಅನ್ನು ಘೋಷಣೆ ಮಾಡಲಿದೆ.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಜೊತೆಗಿನ ಸಂಬಂಧದ ಕುರಿತು ಮೌನ ಮುರಿದ ಗೌತಮ್ ಗಂಭೀರ್

ಪ್ರಸ್ತುತ ಮಾಹಿತ ಪ್ರಕಾರ, ಟೀಮ್ ಇಂಡಿಯಾದ ನೂತನ ಕೋಚ್ ಅನ್ನು ಬಿಸಿಸಿಐ ಜೂನ್ 19 ಮತ್ತು 21 ರ ನಡುವೆ ಘೋಷಿಸುವ ಸಾಧ್ಯತೆಯಿದೆ. ಅದರಂತೆ ಭಾರತ ತಂಡದ ಹೊಸ ಕೋಚ್ ಆಗಿ ಡಬ್ಲ್ಯೂ.ವಿ ರಾಮನ್ ಕಾಣಿಸಿಕೊಳ್ಳಲಿದ್ದಾರಾ ಅಥವಾ ಗೌತಮ್ ಗಂಭೀರ್​ಗೆ ಪಟ್ಟ ಕಟ್ಟಲಿದ್ದಾರಾ ಕಾದು ನೋಡಬೇಕಿದೆ.