ಮುಖ್ಯ ಕೋಚ್ ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಆದ ಗೌತಮ್ ಗಂಭೀರ್
Gautam Gambhir's Coaching Tenure: 2024ರ ಟಿ20 ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗೌತಂ ಗಂಭೀರ್ ತಮ್ಮ ಅಧಿಕಾರವಧಿಯಲ್ಲಿ ಏರಿಳಿತಗಳನ್ನು ಕಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಗೆಲುವಿನ ಪ್ರಮಾಣ ಕಡಿಮೆ ಇದ್ದರೂ, ಏಕದಿನ ಮತ್ತು ಟಿ20ಯಲ್ಲಿ ಭಾರತ ತಂಡದ ಪ್ರದರ್ಶನ ಉತ್ತಮವಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಯುವ ತಂಡವನ್ನು ಕಟ್ಟಿಕೊಂಡು ಗಂಭೀರ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

2024 ರ ಟಿ20 ವಿಶ್ವಕಪ್ (T20 World Cup 2024) ನಂತರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗೌತಮ್ ಗಂಭೀರ್ (Gautam Gambhir), ತಮ್ಮ ಅಲ್ಪಾವಧಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಅವರ ತರಬೇತಿಯಲ್ಲಿ ಭಾರತ ತಂಡವು ಏಕದಿನ ಮತ್ತು ಟಿ20 ಸ್ವರೂಪಗಳಲ್ಲಿ ನಂಬರ್-1 ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ದಾಖಲೆ ಅಷ್ಟೊಂದು ಉತ್ತಮವಾಗಿಲ್ಲ. ಗಂಭೀರ್ ಅವರ ತರಬೇತಿಯಲ್ಲಿ ಭಾರತ ಇದುವರೆಗೆ 15 ಟೆಸ್ಟ್ ಪಂದ್ಯಗಳನ್ನು ಆಡಿದೆ, ಆದರೆ ಅವರು ಗೆಲುವಿಗಿಂತ ಸೋಲುಗಳನ್ನು ಹೆಚ್ಚು ಎದುರಿಸಿದ್ದಾರೆ.
ಗೌತಮ್ ಗಂಭೀರ್ ಜಸ್ಟ್ ಪಾಸ್
ಗಂಭೀರ್ ಅವರ ಟೆಸ್ಟ್ ಕ್ರಿಕೆಟ್ ದಾಖಲೆ ಅವರ ನಿರೀಕ್ಷೆಗಳಿಗೆ ತಕ್ಕಂತೆ ಇಲ್ಲ. ಅವರ ಅವಧಿಯಲ್ಲಿ ಭಾರತ 15 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಬಾಂಗ್ಲಾದೇಶ ವಿರುದ್ಧ 2, ಆಸ್ಟ್ರೇಲಿಯಾ ವಿರುದ್ಧ 1 ಮತ್ತು ಇಂಗ್ಲೆಂಡ್ ವಿರುದ್ಧ 2 ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ, ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 3-0 ಅಂತರದಿಂದ ಸೋತಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ಪ್ರವಾಸದಲ್ಲಿ 3 ಟೆಸ್ಟ್ ಪಂದ್ಯಗಳನ್ನು ಸಹ ಸೋತಿದೆ. ಅಂದರೆ ಗಂಭೀರ್ ಅವರ ತರಬೇತಿಯಲ್ಲಿ ಟೀಮ್ ಇಂಡಿಯಾ 8 ಟೆಸ್ಟ್ ಪಂದ್ಯಗಳನ್ನು ಸೋತಿದೆ. ಉಳಿದಂತೆ 2 ಪಂದ್ಯಗಳು ಡ್ರಾ ಆಗಿವೆ. ಗಂಭೀರ್ ಕೋಚಿಂಗ್ ಅಡಿಯಲ್ಲಿ ಟೀಂ ಇಂಡಿಯಾದ ಟೆಸ್ಟ್ ಗೆಲುವಿನ ಶೇಕಡಾವಾರು ಕೇವಲ 33.33 ಆಗಿದೆ.
ಆದಾಗ್ಯೂ, ಇಂಗ್ಲೆಂಡ್ ಪ್ರವಾಸದಲ್ಲಿ ಗೌತಮ್ ಗಂಭೀರ್ ಯುವ ತಂಡವನ್ನು ಕಟ್ಟಿಕೊಂಡು ಉತ್ತಮ ಕೆಲಸ ಮಾಡಿದರು. ಶುಭ್ಮನ್ ಗಿಲ್ ನಾಯಕತ್ವದಲ್ಲಿ, ಟೀಂ ಇಂಡಿಯಾ ಸರಣಿಯನ್ನು 2-2 ಅಂತರದಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಯಿತು. ಈ ಸರಣಿಯಲ್ಲಿ ಭಾರತ 1-2 ಅಂತರದಿಂದ ಹಿನ್ನಡೆ ಅನುಭವಿಸಿತ್ತು, ಆದರೆ ಗಂಭೀರ್ ಮಾಡಿದ ರಣತಂತ್ರ ಸರಣಿಯನ್ನು ಸಮಬಲಗೊಳಿಸಲು ಸಾಧ್ಯವಾಯಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ದುರ್ಬಲ ಪ್ರದರ್ಶನದ ಹೊರತಾಗಿಯೂ, ಗಂಭೀರ್ ಅವರ ತರಬೇತಿಯಲ್ಲಿ ಕೆಲವು ಸಕಾರಾತ್ಮಕ ಅಂಶಗಳಿವೆ. ಇಂಗ್ಲೆಂಡ್ ವಿರುದ್ಧ ಅವರ ನೆಲದಲ್ಲಿ 2 ಟೆಸ್ಟ್‌ಗಳನ್ನು ಗೆಲ್ಲುವ ಮೂಲಕ ತಂಡದಲ್ಲಿರುವ ಸಾಮರ್ಥ್ಯವನ್ನು ಬಹಿರಂಗಪಡಿಸಿತು. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಗಂಭೀರ್ ಈ ದಾಖಲೆಯನ್ನು ಸುಧಾರಿಸಲು ಯತ್ನಿಸಲಿದ್ದಾರೆ.
IND vs ENG: ಕುಲ್ದೀಪ್, ಬುಮ್ರಾ ಆಡ್ತಾರಾ? ಗಂಭೀರ್ ವಿವಾದ ಬಗ್ಗೆ ಗಿಲ್ ಹೇಳಿದ್ದೇನು?
ಟೀಂ ಇಂಡಿಯಾದ ಮುಂದಿನ ಟೆಸ್ಟ್ ಸರಣಿ ಯಾವಾಗ?
ಇಂಗ್ಲೆಂಡ್ ಪ್ರವಾಸವನ್ನು ಮುಗಿಸಿರುವ ಭಾರತ ಟೆಸ್ಟ್ ತಂಡ ಅಕ್ಟೋಬರ್ 2025 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಅಕ್ಟೋಬರ್ 2 ರಿಂದ ಪ್ರಾರಂಭವಾಗುವ ಈ ಸರಣಿಯಲ್ಲಿ 2 ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಪಂದ್ಯವು ಅಕ್ಟೋಬರ್ 2 ರಿಂದ 6, ರವರೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯವು ಅಕ್ಟೋಬರ್ 10 ರಿಂದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:33 pm, Wed, 6 August 25
