RCB: ವಿರಾಟ್​ ಕೊಹ್ಲಿ ರಾಜೀನಾಮೆಗೆ ಗೌತಮ್ ಗಂಭೀರ್ ಆಕ್ಷೇಪ..!

| Updated By: ಝಾಹಿರ್ ಯೂಸುಫ್

Updated on: Sep 20, 2021 | 4:57 PM

Virat Kohli's RCB captaincy: 2008 ರಿಂದ ಆರ್​ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ2013 ರಲ್ಲಿ ತಂಡದ ಚುಕ್ಕಾಣಿ ಹಿಡಿದಿದ್ದರು. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಇದುವರೆಗೆ 132 ಪಂದ್ಯಗಳನ್ನು ಆಡಿದೆ.

RCB: ವಿರಾಟ್​ ಕೊಹ್ಲಿ ರಾಜೀನಾಮೆಗೆ ಗೌತಮ್ ಗಂಭೀರ್ ಆಕ್ಷೇಪ..!
Gautam Gambhir-Virat Kohli
Follow us on

ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಈ ಸೀಸನ್​ ಬಳಿಕ ಆರ್​ಸಿಬಿ ತಂಡದ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಲಿದ್ದು, ಮುಂದಿನ ಸೀಸನ್​ನಲ್ಲಿ ಕೇವಲ ಬ್ಯಾಟ್ಸ್​ಮನ್ ಆಗಿ ಮಾತ್ರ ಕಾಣಿಸಿಕೊಳ್ಳುವುದಾಗಿ ಕೊಹ್ಲಿ ತಿಳಿಸಿದ್ದಾರೆ. ಆದರೆ ಕೊಹ್ಲಿಯ ಈ ನಿರ್ಧಾರಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಡಿತಾಡಿದ ಕೆಕೆಆರ್ (KKR) ತಂಡದ ಮಾಜಿ ನಾಯಕ ಗಂಭೀರ್, ಇದು ಆತುರದ ನಿರ್ಧಾರ. ಟೂರ್ನಿ ಮುಗಿದ ಮೇಲೆ ಅವರು ರಾಜೀನಾಮೆಯನ್ನು ಪ್ರಸ್ತಾಪಿಸಬಹುದಿತ್ತು. ಇದೀಗ ದಿಢೀರ್ ರಾಜೀನಾಮೆ ನೀಡುವುದಾಗಿ ತಿಳಿಸಿರುವುದು ತಂಡದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.

ಕೊಹ್ಲಿಯ ನಿರ್ಧಾರ ನನಗೆ ಆಶ್ಚರ್ಯವನ್ನುಂಟುಮಾಡಿದೆ. ಏಕೆಂದರೆ ಐಪಿಎಲ್​ನ ದ್ವಿತಿಯಾರ್ಧ ಆರಂಭವಾಗಿದೆ. ಇದೀಗ ಆರ್​ಸಿಬಿ ಉಳಿದ ಪಂದ್ಯಗಳನ್ನು ಆಡಬೇಕಿದೆ. ಆದರೆ ಕೊಹ್ಲಿ ರಾಜೀನಾಮೆ ಘೋಷಿಸಿದ್ದಾರೆ. ಅವರು ತಮ್ಮ ರಾಜೀನಾಮೆಯನ್ನು ಘೋಷಿಸಲು ಬಯಸಿದ್ದರೆ, ಅದನ್ನು ಟೂರ್ನಿ ಮುಕ್ತಾಯದ ಬಳಿಕ ಮಾಡಬಹುದಿತ್ತು. ಏಕೆಂದರೆ ನಾಯಕನ ಇಂತಹ ದಿಢೀರ್ ನಿರ್ಧಾರದಿಂದ ಆಟಗಾರರ ಮೇಲೆ ಅನಗತ್ಯ ಒತ್ತಡ ಬೀಳಲಿದ್ದು, ಅದು ದುಬಾರಿಯಾಗಲಿದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಟೂರ್ನಿಯಲ್ಲಿ ಆರ್​ಸಿಬಿ ಉತ್ತಮ ಸ್ಥಿತಿಯಲ್ಲಿದೆ. ಮೊದಲಾರ್ಧದದಲ್ಲಿ 7 ಪಂದ್ಯಗಳಲ್ಲಿ 5 ಜಯ ಸಾಧಿಸಿದೆ. ಇದೀಗ ಕೊಹ್ಲಿ ರಾಜೀನಾಮೆ ನೀಡಿ ತಂಡದ ಮೇಲೆ ಹೆಚ್ಚಿನ ಒತ್ತಡ ಹಾಕಿದ್ದಾರೆ. ಅವರು ಬಹುಶಃ ವಿರಾಟ್‌ಗಾಗಿ ಟ್ರೋಫಿ ಗೆಲ್ಲುವಂತೆ ಮಾಡಲು ಬಯಸಿರಬಹುದು. ಆದರೆ ನಿಮಗಾಗಿ ನೀವು ಗೆಲ್ಲಲು ಬಯಸುವುದಿಲ್ಲವೇ? ಫ್ರಾಂಚೈಸಿಗಾಗಿ ಗೆಲ್ಲಲು ಬಯಸುತ್ತಿಲ್ಲವೇ? ಎಂದು ಗಂಭೀರ್ ಪ್ರಶ್ನಿಸಿದರು. ಅಷ್ಟೇ ಅಲ್ಲದೆ ಕೊಹ್ಲಿಯ ಈ ರಾಜೀನಾಮೆ ನಿರ್ಧಾರ ದ್ವಿತಿಯಾರ್ಧದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಗೌತಿ ಅಭಿಪ್ರಾಯಪಟ್ಟರು.

2008 ರಿಂದ ಆರ್​ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ2013 ರಲ್ಲಿ ತಂಡದ ಚುಕ್ಕಾಣಿ ಹಿಡಿದಿದ್ದರು. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ ಇದುವರೆಗೆ 132 ಪಂದ್ಯಗಳನ್ನು ಆಡಿದೆ. ಅದರಲ್ಲಿ ಆರ್​ಸಿಬಿ ಜಯ ಸಾಧಿಸಿರುವುದು 62 ಪಂದ್ಯಗಳಲ್ಲಿ ಮಾತ್ರ. ಹಾಗೆಯೇ ಕೊಹ್ಲಿ ನೇತೃತ್ವದ ಆರ್‌ಸಿಬಿ 2016 ರ ಸೀಸನ್​ನಲ್ಲಿ ರನ್ನರ್ ಆಪ್ ಆಗಿರೋದು ಶ್ರೇಷ್ಠ ಸಾಧನೆಯಾಗಿದೆ. ಇದೀಗ ಕೊಹ್ಲಿಯ ರಾಜೀನಾಮೆ ಸುದ್ದಿ ಬೆನ್ನಲ್ಲೇ ಆರ್​ಸಿಬಿ ತಂಡದ ಮುಂದಿನ ನಾಯಕ ಯಾರು ಎಂಬ ಚರ್ಚೆಗಳು ಶುರುವಾಗಿದೆ.

ಇದನ್ನೂ ಓದಿ: Taliban bans IPL 2021: ಐಪಿಎಲ್ ಬ್ಯಾನ್ ಮಾಡಿದ ತಾಲಿಬಾನಿಗಳು: ಕಾರಣ ಕೇಳಿದ್ರೆ ದಂಗಾಗ್ತೀರಾ..!

ಇದನ್ನೂ ಓದಿ: IPL 2021: 5 ತಂಡಗಳಲ್ಲಿ 10 ಹೊಸ ವಿದೇಶಿ ಆಟಗಾರರು

ಇದನ್ನೂ ಓದಿ: IPL 2021: RCB ತಂಡದ ಗೇಮ್ ಚೇಂಜರ್ ಆಗಲಿದ್ದಾರೆ ಟಿಮ್ ಡೇವಿಡ್

ಇದನ್ನೂ ಓದಿ: ಗೂಗಲ್ ಬಿಗ್ ಆಫರ್: ಸ್ಮಾರ್ಟ್​ಫೋನ್ ಜೊತೆ ಕೇವಲ 1 ರೂ.ಗೆ ಸ್ಮಾರ್ಟ್​ ಸ್ಪೀಕರ್

(IPL 2021: Gautam Gambhir reacts to Virat Kohli’s decision to quit RCB captaincy)

Published On - 4:56 pm, Mon, 20 September 21