AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವಿಶತಕ ಸಿಡಿಸಿ ಅಫ್ಘಾನ್ ಗೆಲುವನ್ನು ಕಸಿದುಕೊಂಡ ಗ್ಲೆನ್ ಮ್ಯಾಕ್ಸ್​ವೆಲ್

Afghanistan vs Australia: ರಹಮತ್ ಶಾ 44 ಎಸೆತಗಳಲ್ಲಿ 30 ರನ್ ಬಾರಿಸಿ ಔಟಾದರು. ಇನ್ನು ನಾಯಕ ಹಶ್ಮತ್ ಶಾಹಿದಿ 26 ರನ್​ಗಳ ಕೊಡುಗೆ ನೀಡಿ ನಿರ್ಗಮಿಸಿದರು. ಇದಾಗ್ಯೂ ಇಬ್ರಾಹಿಂ ಝದ್ರಾನ್ ಮಾತ್ರ ಆಸೀಸ್ ಬೌಲರ್​ಗಳನ್ನು ದಿಟ್ಟವಾಗಿ ಎದುರಿಸಿದರು. ಪರಿಣಾಮ 131 ಎಸೆತಗಳಲ್ಲಿ ಇಬ್ರಾಹಿಂ ಝದ್ರಾನ್ ಬ್ಯಾಟ್​ನಿಂದ ಶತಕ ಮೂಡಿಬಂತು.

ದ್ವಿಶತಕ ಸಿಡಿಸಿ ಅಫ್ಘಾನ್ ಗೆಲುವನ್ನು ಕಸಿದುಕೊಂಡ ಗ್ಲೆನ್ ಮ್ಯಾಕ್ಸ್​ವೆಲ್
Glenn Maxwell
TV9 Web
| Edited By: |

Updated on:Nov 07, 2023 | 10:26 PM

Share

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್ ಅವರ ಕೆಚ್ಚೆದೆಯ ಹೋರಾಟದಿಂದ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿದೆ. 91 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡವನ್ನು ಏಕಾಂಗಿಯಾಗಿ ಮುನ್ನಡೆಸಿದ ಗ್ಲೆನ್ ಮ್ಯಾಕ್ಸ್​ವೆಲ್ 128 ಎಸೆತಗಳಲ್ಲಿ ದ್ವಿಶತಕ ಬಾರಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಇದಕ್ಕೂ ಮುನ್ನ ಈ  ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನ್ ತಂಡದ ನಾಯಕ ಹಶ್ಮತ್ ಶಾಹಿದಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ಪರ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ರಹಮಾನುಲ್ಲಾ ಗುರ್ಬಾಝ್ (21) ಔಟ್ ಆದ ಬಳಿಕ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ್ದ ಝದ್ರಾನ್ ಒಂದೊಂದು ರನ್ ಕಲೆಹಾಕುತ್ತಾ ಸಾಗಿದರು.

ಮತ್ತೊಂದೆಡೆ ರಹಮತ್ ಶಾ 44 ಎಸೆತಗಳಲ್ಲಿ 30 ರನ್ ಬಾರಿಸಿ ಔಟಾದರು. ಇನ್ನು ನಾಯಕ ಹಶ್ಮತ್ ಶಾಹಿದಿ 26 ರನ್​ಗಳ ಕೊಡುಗೆ ನೀಡಿ ನಿರ್ಗಮಿಸಿದರು. ಇದಾಗ್ಯೂ ಇಬ್ರಾಹಿಂ ಝದ್ರಾನ್ ಮಾತ್ರ ಆಸೀಸ್ ಬೌಲರ್​ಗಳನ್ನು ದಿಟ್ಟವಾಗಿ ಎದುರಿಸಿದರು. ಪರಿಣಾಮ 131 ಎಸೆತಗಳಲ್ಲಿ ಇಬ್ರಾಹಿಂ ಝದ್ರಾನ್ ಬ್ಯಾಟ್​ನಿಂದ ಶತಕ ಮೂಡಿಬಂತು.

ಶತಕದ ಬಳಿಕ ಬಿರುಸಿನ ಬ್ಯಾಟಿಂಗ್​ ಮುಂದುವರೆಸಿದ ಝದ್ರಾನ್​ಗೆ ರಶೀದ್ ಖಾನ್ ಉತ್ತಮ ಸಾಥ್ ನೀಡಿದರು. ಅದರಲ್ಲೂ ಅಂತಿಮ ಓವರ್​ಗಳಲ್ಲಿ ಅಬ್ಬರಿಸಿದ ರಶೀದ್ ಖಾನ್ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು.

ಕೇವಲ 18 ಎಸೆತಗಳಲ್ಲಿ ರಶೀದ್ ಖಾನ್ ಅಜೇಯ 35 ರನ್​ಗಳಿಸಿದರೆ, ಇಬ್ರಾಹಿಂ ಝದ್ರಾನ್ 143 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 129 ರನ್ ಬಾರಿಸಿದರು. ಪರಿಣಾಮ 50 ಓವರ್​ಗಳಲ್ಲಿ ಅಫ್ಘಾನಿಸ್ತಾನ್ ತಂಡದ ಮೊತ್ತ 5 ವಿಕೆಟ್ ನಷ್ಟಕ್ಕೆ 291 ಕ್ಕೆ ಬಂದು ನಿಂತಿತು.

ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಟ್ರಾವಿಸ್ ಹೆಡ್​ರನ್ನು ಶೂನ್ಯಕ್ಕೆ ಔಟ್ ಮಾಡುವಲ್ಲಿ ನವೀನ್ ಉಲ್ ಹಕ್ ಯಶಸ್ವಿಯಾದರು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಷ್ (24) ಕೂಡ ವಿಕೆಟ್ ಒಪ್ಪಿಸಿದರು.

ಇನ್ನು ಡೇವಿಡ್ ವಾರ್ನರ್ ಕೇವಲ 18 ರನ್​ಗಳಿಸಲಷ್ಟೇ ಶಕ್ತರಾದರು. ವಾರ್ನರ್ ಬೆನ್ನಲ್ಲೇ ಜೋಶ್ ಇಂಗ್ಲಿಸ್ (0) ಅಝ್ಮತ್ ಒಮರ್​ಝಾಹಿ ಎಸೆತದಲ್ಲಿ ಕ್ಯಾಚ್ ನೀಡಿದರು. ಈ ಹಂತದಲ್ಲಿ ಜೊತೆಯಾದ ಮಾರ್ನಸ್ ಲಾಬುಶೇನ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು.

ಆದರೆ ತಂಡದ ಮೊತ್ತ 69 ರನ್ ಆಗಿದ್ದ ವೇಳೆ ರನೌಟ್ ಆಗುವ ಮೂಲಕ ಮಾರ್ನಸ್ ಲಾಬುಶೇನ್ (14) ನಿರ್ಗಮಿಸಿದರು. ಇನ್ನು ಮಾರ್ಕಸ್ ಸ್ಟೋಯಿನಿಸ್ (6) ಹಾಗೂ ಮಿಚೆಲ್ ಮಾರ್ಷ್ (3) ಬಂದ ವೇಗದಲ್ಲೇ ಹಿಂತಿರುಗಿದರು. ಇದಾಗ್ಯೂ ಒಂದೆಡೆ ಗ್ಲೆನ್ ಮ್ಯಾಕ್ಸ್​ವೆಲ್ ಕ್ರೀಸ್ ಕಚ್ಚಿ ನಿಂತಿದ್ದರು. ಅಫ್ಘಾನ್ ಬೌಲರ್​ಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ಮ್ಯಾಕ್ಸ್​ವೆಲ್ 51 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ ಅರ್ಧಶತಕದ ಬಳಿಕ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು.

ಪರಿಣಾಮ 76 ಎಸೆತಗಳಲ್ಲಿ ಶತಕ ಪೂರೈಸಿದ ಮ್ಯಾಕ್ಸ್​ವೆಲ್ ಬ್ಯಾಟ್ ಮೇಲೆತ್ತಿದರು. ಅಷ್ಟೇ ಅಲ್ಲದೆ ಪ್ಯಾಟ್ ಕಮಿನ್ಸ್ ಜೊತೆಗೂಡಿ 8ನೇ ವಿಕೆಟ್​ಗೆ 150 ರನ್​ಗಳ ಜೊತೆಯಾಟವಾಡಿದರು. ಇದರ ನಡುವೆ ಬೆನ್ನು ನೋವಿಗೆ ಒಳಗಾದ ಮ್ಯಾಕ್ಸಿ ನೋವಿನೊಂದಿಗೆ ಕೆಚ್ಚೆದೆಯ ಹೋರಾಟವನ್ನು ಮುಂದುವರೆಸಿದರು.

ಒಂದು ಹಂತದಲ್ಲಿ ನೋವಿನ ಕಾರಣ ರನ್ ಓಡುವುದನ್ನೂ ನಿಲ್ಲಿಸಿದ ಮ್ಯಾಕ್ಸ್​ವೆಲ್ ಸಿಕ್ಸ್​-ಫೋರ್​ಗಳ ಮೂಲಕವೇ ರನ್​ಗಳಿಸುತ್ತಾ ಸಾಗಿದರು. ಇತ್ತ ಮ್ಯಾಕ್ಸಿಯ ದಿಟ್ಟ ಹೋರಾಟದಿಂದ ಅಫ್ಘಾನ್ ಬೌಲರ್​ಗಳು ಲಯ ತಪ್ಪಿದರು. ಇದರ ಸಂಪೂರ್ಣ ಲಾಭ ಪಡೆದ ಮ್ಯಾಕ್ಸ್​ವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದರು. ಪರಿಣಾಮ ಕೊನೆಯ 5 ಓವರ್​ಗಳಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು ಕೇವಲ 25 ರನ್​ಗಳ ಅಗತ್ಯವಿತ್ತು.

ಈ ವೇಳೆಯು ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಮ್ಯಾಕ್ಸ್​ವೆಲ್ ಸಿಕ್ಸ್​-ಫೋರ್​ಗಳ ಮೂಲಕವೇ ರನ್​ಗಳಿಸುತ್ತಾ ಸಾಗಿದರು. ಅದರಲ್ಲೂ ಮುಜೀಬ್​ ಉರ್ ರೆಹಮಾನ್ ಎಸೆದ 47ನೇ ಓವರ್​ನಲ್ಲಿ ಮೂರು ಸಿಕ್ಸ್ ಹಾಗೂ 1 ಫೋರ್​ಗಳನ್ನು ಸಿಡಿಸುವ ಮೂಲಕ ಕೇವಲ 128 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 21 ಫೋರ್​ಗಳೊಂದಿಗೆ ಗ್ಲೆನ್ ಮ್ಯಾಕ್ಸ್​ವೆಲ್ ಚೊಚ್ಚಲ ದ್ವಿಶತಕ ಪೂರೈಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ 3 ವಿಕೆಟ್​ಗಳ ಭರ್ಜರಿ ಜಯ ತಂದುಕೊಟ್ಟರು.

ಅಫ್ಘಾನಿಸ್ತಾನ್– 291/5 (50)

ಆಸ್ಟ್ರೇಲಿಯಾ– 293/7 (46.5)

ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್​ಝಾಹಿ, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ನವೀನ್-ಉಲ್-ಹಕ್.

ಇದನ್ನೂ ಓದಿ: ಏಕದಿನ ವಿಶ್ವಕಪ್​ನಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್..!

ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಮಾರ್ನಸ್ ಲಾಬುಶೇನ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ, ಜೋಶ್ ಹ್ಯಾಝಲ್‌ವುಡ್.

Published On - 10:16 pm, Tue, 7 November 23