ಕಾಂಟ್ರವರ್ಸಿಯಿಂದಲೇ ಹೆಚ್ಚು ಸುದ್ದಿ ಆಗುತ್ತಿರುವ ಹಾರ್ದಿಕ್-ಕ್ರುನಾಲ್: ಇಲ್ಲಿದೆ ಪಾಂಡ್ಯ ಬ್ರದರ್ಸ್ ವಿವಾದಗಳ ಪಟ್ಟಿ

ಹಾರ್ದಿಕ್ ಪಾಂಡ್ಯ-ಕ್ರುನಾಲ್ ಪಾಂಡ್ಯ ಹೆಸರು ಕ್ರಿಕೆಟ್ ಲೋಕದಲ್ಲಿ ಚಿರಪರಿಚಿತ. ಬಡಕುಟುಂಬದಲ್ಲಿ ಹುಟ್ಟಿ, ಬೆಳೆದು ಇಂದು ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದಾರೆ. ಹಾರ್ದಿಕ್ ಒಬ್ಬಂಟಿಯಾಗಿ ನಿಂತು ಅದೆಷ್ಟೋ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ, ಇಂದು ಪಾಂಡ್ಯ ಬ್ರದರ್ಸ್ ಅವರನ್ನು ಪ್ರೀತಿಸುವವರಿಗಿಂತ ದ್ವೇಷಿಸುವವರ ಸಂಖ್ಯೆಯೇ ಹೆಚ್ಚು. ಇವರ ಮೇಲೆ ವಿವಾದಗಳ ಪಟ್ಟಿಯೇ ಇದೆ. ಈ ಕುರಿತ ಮಾಹಿತಿ ಇಲ್ಲಿದೆ.

ಕಾಂಟ್ರವರ್ಸಿಯಿಂದಲೇ ಹೆಚ್ಚು ಸುದ್ದಿ ಆಗುತ್ತಿರುವ ಹಾರ್ದಿಕ್-ಕ್ರುನಾಲ್: ಇಲ್ಲಿದೆ ಪಾಂಡ್ಯ ಬ್ರದರ್ಸ್ ವಿವಾದಗಳ ಪಟ್ಟಿ
hardik pandya and krunal pandya controversy
Follow us
|

Updated on:Apr 15, 2024 | 9:33 AM

ಇಂದು ಕ್ರಿಕೆಟ್ ಲೋಕದಲ್ಲಿ ಅಭಿಮಾನಿಗಳು ಹೆಚ್ಚು ದ್ವೇಷಿಸುತ್ತಿರುವ ಹೆಸರು ಎಂದರೆ ಅದು ಹಾರ್ದಿಕ್ ಪಾಂಡ್ಯ (Hardik Pandya). ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್​ಗೆ ಕ್ಯಾಪ್ಟನ್ ಪಟ್ಟ ನೀಡಿತು. ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಒಬ್ಬರಾಗಿರುವ ರೋಹಿತ್ ಜಾಗಕ್ಕೆ ಹಾರ್ದಿಕ್​ರನ್ನು ಕ್ಯಾಪ್ಟನ್ ಆಗಿ ಮಾಡಿದ್ದು ಅಭಿಮಾನಿಗಳಿಗೆ ಮಾತ್ರವಲ್ಲದೆ ಕ್ರಿಕೆಟ್ ಪಂಡಿತರಿಗೆ ಕೂಡ ಬೇಸರ ತರಿಸಿತು. ಇಂದು ಹಾರ್ದಿಕ್ ಅವರನ್ನು ಪ್ರೀತಿಸುವವರಿಗಿಂತ ದ್ವೇಷಿಸುವ ಸಂಖ್ಯೇ ಹೆಚ್ಚಿದೆ. ಇದಕ್ಕೆ ಅವರ ನಡವಳಿಕೆ ಕೂಡ ಕಾರಣ ಎನ್ನಬಹುದು. ತಮ್ಮ ಕ್ರಿಕೆಟ್ ವೃತ್ತಿಜೀವನದ ಕಳೆದ 10 ವರ್ಷಗಳಲ್ಲಿ, ಹಾರ್ದಿಕ್ ಅದ್ಭುತ ಕ್ರಿಕೆಟ್ ಪ್ರದರ್ಶನದ ಜೊತೆಗೆ ಅನೇಕ ಬಾರಿ ತಮ್ಮ ನಡವಳಿಕೆಯಿಂದ ವಿವಾದಕ್ಕೀಡಾಗಿದ್ದರು. ಹಾರ್ದಿಕ್ ಜೊತೆಗೆ ಅವರ ಅಣ್ಣ ಕ್ರುನಾಲ್ ಪಾಂಡ್ಯ ಕೂಡ ಕ್ರಿಕೆಟ್ ಮೈದಾನದಲ್ಲಿ ಕಾಂಟ್ರವರ್ಸಿ ಮಾಡಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ಪಾಂಡ್ಯ ಬ್ರದರ್ಸ್ ವಿವಾದಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾಫಿ ವಿಥ್ ಕರಣ್ ಶೋನಲ್ಲಿ ಅಶ್ಲೀಲ ಹೇಳಿಕೆ:

ಹಾರ್ದಿಕ್ ಪಾಂಡ್ಯ 2019 ರ ಫೆಬ್ರವರಿಯಲ್ಲಿ ಪ್ರಸಿದ್ಧ ಚಾಟ್ ಶೋ ‘ಕಾಫಿ ವಿಥ್ ಕರಣ್’ ನಲ್ಲಿ ಅಶ್ಲೀಲ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ಸಿಲುಕಿದ್ದರು. ತಮ್ಮ ಸಹ ಆಟಗಾರ ಕೆಎಲ್ ರಾಹುಲ್ ಜೊತೆಗೆ, ಕರಣ್ ಜೋಹರ್ ಅವರ ಪ್ರಶ್ನೆಗೆ ಉತ್ತರಿಸುವಾಗ ಪಾಂಡ್ಯ ಮಹಿಳೆಯರ ಬಗ್ಗೆ ಅಶ್ಲೀಲವಾಗಿ ಹೇಳಿಕೆ ನೀಡಿದ್ದರು. ”ನೈಟ್‌ಕ್ಲಬ್‌ಗಳಲ್ಲಿ ನಾನು ಮಹಿಳೆಯರು ಯಾವ ರೀತಿ ನಡೆಯುತ್ತಾರೆ ಎಂಬುದನ್ನು ನೋಡಲು ಬಯಸುತ್ತೇನೆ ಮತ್ತು ಅದನ್ನು ಗಮನಿಸಲು ನನಗಿಷ್ಟ. ನಾನು ಸ್ವಲ್ಪ ಕಪ್ಪು ಬಣ್ಣದವನಾದ ಕಾರಣ ಅವರು ನನ್ನ ಜೊತೆ ಯಾವರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ನೋಡಲು ನಾನು ಬಯಸುತ್ತೇನೆ. ಈ ಬಗ್ಗೆ ತನ್ನ ಪಾಲಕರ ಬಳಿ ಬಿಚ್ಚು ಮನಸ್ಸಿನಿಂದ ಮಾತನಾಡುತ್ತೇನೆ,” ಎಂದು ಹೇಳಿದ್ದರು.

ಇಷ್ಟೇ ಅಲ್ಲದೆ ಈ ಕಾರ್ಯಕ್ರಮದಲ್ಲಿ ಪಾಂಡ್ಯ ಅವರು ತನ್ನ ಲೈಂಗಿಕ ಜೀವನದ ಕುರಿತು ತನ್ನ ಹೆತ್ತವರೊಂದಿಗೆ ಎಷ್ಟು ಆರಾಮದಾಯಕವಾಗಿ ಚರ್ಚಿಸುತ್ತೇನೆ ಎಂಬುದನ್ನು ಕೂಡ ಹೇಳಿದ್ದರು. “ನಾನು ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸಿದಾಗ ಮನೆಗೆ ಬಂದು ಆ ವಿಚಾರವನ್ನು ಹೇಳಿದ್ದೆ”. ಪಾಂಡ್ಯ ಆಡಿದ ಈ ಮಾತುಗಳು ದೊಡ್ಡ ಮಟ್ಟದಲ್ಲಿ ವಿಚಾದ ಸೃಷ್ಟಿಸಿತು. ಹಲವಾರು ಜನರು ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ಪಾಂಡ್ಯ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಂದ ಶೋಕಾಸ್ ನೋಟಿಸ್ ಸ್ವೀಕರಿಸಿದರು. ಬಳಿಕ ಎಲ್ಲರೆದರು ಕ್ಷಮೆಯಾಚಿಸಿ, ಭವಿಷ್ಯದಲ್ಲಿ ಇಂತಹ ಘಟನೆ ನಡೆಯುವುದಿಲ್ಲ ಎಂದು ಭರವಸೆ ನೀಡಿದರು.

ಮೊಹಮ್ಮದ್ ಶಮಿ vs ಹಾರ್ದಿಕ್ ಪಾಂಡ್ಯ

ಐಪಿಎಲ್ 2022 ರಲ್ಲಿ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ಪಂದ್ಯ ಆಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಜಿಟಿ ತಂಡ ಟೂರ್ನಿಯ ಮೊದಲ ಸೋಲನ್ನು ಕಂಡಿತು. 163 ರನ್‌ಗಳನ್ನು ಬೆನ್ನಟ್ಟುವ ವೇಳೆ ಸನ್‌ರೈಸರ್ಸ್ ಬ್ಯಾಟರ್​ಗಳು ಜಿಟಿ ಬೌಲರ್‌ಗಳಿಗೆ ಮನಬಂದಂತೆ ದಂಡಿಸಿದರು. 13 ನೇ ಓವರ್‌ನಲ್ಲಿ, ರಾಹುಲ್ ತ್ರಿಪಾಠಿ ಅವರ ಕ್ಯಾಚಿಂಗ್ ಅವಕಾಶವನ್ನು ಥರ್ಡ್ ಮ್ಯಾನ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಮೊಹಮ್ಮದ್ ಶಮಿ ಕೈ ಚೆಲ್ಲಿದರು. ಈ ವೇಳೆ ಹಾರ್ದಿಕ್ ತಾಳ್ಮೆ ಕಳೆದುಕೊಂಡು ಶಮಿಗೆ ನಿಂದಿಸಿದ್ದರು. ಇದು ದೊಡ್ಟದಲ್ಲಿ ಸದ್ದು ಮಾಡಿತು. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹಾರ್ದಿಕ್ ತನ್ನ ಹಿರಿಯ ಸಹೋದ್ಯೋಗಿಗಳಿಗೆ ಗೌರವ ಕೊಡುವುದನ್ನು ಕಲಿಯಬೇಕು ಎಂದು ಹೇಳಿದ್ದರು.

ಹಾರ್ದಿಕ್ vs ರೋಹಿತ್

2024 ರ ಐಪಿಎಲ್ ಹರಾಜಿನ ನಂತರ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯಿಂದ ಹಾರ್ದಿಕ್ ಪಾಂಡ್ಯ ಅವರನ್ನು ವ್ಯಾಪಾರ ಮಾಡಲು ನಿರ್ಧರಿಸಿತು. ಆದರೆ ಆ ಸಂದರ್ಭ ಹಾರ್ದಿಕ್, ”ನನಗೆ ಮುಂಬೈ ಇಂಡಿಯನ್ಸ್ ನಾಯಕತ್ವದ ಪಟ್ಟ ನೀಡಿದರೆ ಮಾತ್ರ ಮರಳುತ್ತೇನೆ,” ಈ ರೀತಿ ಷರತ್ತು ಹಾಕಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ.

ಎಂಐ ಮತ್ತು ಜಿಟಿ ನಡುವಿನ ವ್ಯಾಪಾರ ಒಪ್ಪಂದವು ಯಶಸ್ವಿಯಾಗಿ ನಡೆಯಿತು. ಹಿಂದಿನ ವರದಿಯಾದಂತೆ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್​ನ ಕ್ಯಾಪ್ಟನ್ ಪಟ್ಟ ಕೂಡ ನೀಡಲಾಯಿತು. ಎಂಐ ಗೆ ಐದು ಪ್ರಶಸ್ತಿ ತಂದುಕೊಟ್ಟ, ಮಾರ್ಗದರ್ಶನ ನೀಡಿದ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು. ಈ ಘಟನೆ ಈಗಲೂ ಕ್ರಿಕೆಟ್ ವಲಯದಲ್ಲಿ ಸದ್ದು ಮಾಡುತ್ತಿದ್ದು, ರೋಹಿತ್​ಗೆ ಅವಮಾನ ಮಾಡಲಾಗಿದೆ ಎಂದು ಅಭಿಮಾನಿಗಳು ಪಾಂಡ್ಯ ವಿರುದ್ಧ ಕಿಡಿಕಾರುತ್ತಿದ್ದಾರೆ.

ಹಾರ್ದಿಕ್ vs ಮಾಲಿಂಗ

2024 ರ ಐಪಿಎಲ್‌ನಲ್ಲಿ ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ 31 ರನ್‌ಗಳ ಸೋಲು ಅನುಭವಿಸಿತು. ಈ ಸೋಲಿನ ನಂತರ, ಆಟಗಾರರು ಪರಸ್ಪರ ಹಸ್ತಲಾಘವಕ್ಕಾಗಿ ಭೇಟಿಯಾದಾಗ, ಹಾರ್ದಿಕ್ ಅವರು ಮುಂಬೈ ಕೋಚ್ ಲಸಿತ್ ಮಾಲಿಂಗ ಅವರನ್ನು ತಳ್ಳಿದ್ದರು. ಹಾರ್ದಿಕ್ ಮತ್ತು ಮಾಲಿಂಗ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಹಲವಾರು ಮುಂಬೈ ಅಭಿಮಾನಿಗಳು ಶ್ರೀಲಂಕಾದ ಲೆಜೆಂಡ್ ಬೌಲರ್ ಅನ್ನು ಪಾಂಡ್ಯ ಅವಮಾನಿಸಿದ್ದಾರೆ ಎಂದು ಹೇಳಿದ್ದರು.

ಇಂಜುರಿ-ರಣಜಿಗೆ ಗೈರು

ಭಾರತ ಕ್ರಿಕೆಟ್ ತಂಡದಲ್ಲಿ ಒಂದು ನಿಯಮವಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಆಡುವ ಯಾವುದೇ ಆಟಗಾರ ಇಂಜುರಿಗೆ ತುತ್ತಾದರೆ, ಆತ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಫಿಟ್​ನೆಸ್ ಟೆಸ್ಟ್ ಪಾಸ್ ಆಗಿ ದೇಶೀಯ ಕ್ರಿಕೆಟ್​ನಲ್ಲಿ ಫಾರ್ಮ್ ಕಂಡುಕೊಂಡು ಪುನಃ ಅಂತರರಾಷ್ಟ್ರೀಯ ಕ್ರಿಕೆಟಿಗೆ ಮರಳಬೇಕು. ಹಾರ್ದಿಕ್ ಪಾಂಡ್ಯ ಹೆಚ್ಚಾಗಿ ಇಂಜುರಿಯಿಂದಲೇ ಬಳಲುತ್ತಾ ಇರುತ್ತಾರೆ. ಗಾಯದಿಂದ ಅನೇಕ ದೊಡ್ಡ ಟೂರ್ನಿಯನ್ನು ಕಳೆದುಕೊಂಡಿದ್ದಾರೆ. ಆದರೆ, ಇವರು ಗಾಯದಿಂದ ಮರಳಿ ಬರಲು ದೇಶೀಯ ಕ್ರಿಕೆಟ್ ಆಡುತ್ತಿಲ್ಲ. ಇತ್ತೀಚೆಗಷ್ಟೆ ದೇಶೀಯ ಕ್ರಿಕೆಟ್ ಆಡದ ಇಶಾನ್ ಕಿಶನ್-ಶ್ರೇಯಸ್ ಅಯ್ಯರ್ ಅವರನ್ನು ಬಿಸಿಸಿಐ ವಾರ್ಷಿಕ ಒಪ್ಪಂದದ ಪಟ್ಟಿಯಿಂದ ಕಿತ್ತು ಹಾಕಿತ್ತು. ಆದರೆ, ಹಾರ್ದಿಕ್ ಮೇಲೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಮಾಜಿ ಆಟಗಾರರು ಈ ಬಗ್ಗೆ ಧ್ವನಿ ಎತ್ತಿದ್ದರು. ಮುಖ್ಯವಾಗಿ ಟೀಮ್ ಇಂಡಿಯಾ ಮಾಜಿ ವೇಗಿ ಪ್ರವೀಣ್ ಕುಮಾರ್ ಖಡಕ್ ಆಗಿ ಮಾತನಾಡಿದ್ದರು.

”ಹಾರ್ದಿಕ್ ಪಾಂಡ್ಯ ಚಂದ್ರ ಗ್ರಹದಿಂದ ಇಳಿದಿದ್ದಾರಾ?, ಅವರೂ ದೇಶೀಯ ಕ್ರಿಕೆಟ್ ಆಡಬೇಕು. ಅವರಿಗೆ ಬೇರೆ ಬೇರೆ ನಿಯಮಗಳು ಏಕೆ?. ಬಿಸಿಸಿಐ ಹಾರ್ದಿಕ್​ಗೆ ಈ ಬಗ್ಗೆ ಕಠಿಣವಾಗಿ ಹೇಳಬೇಕು. ನೀವು ಕೇವಲ ಐಪಿಎಲ್- ದೇಶೀಯ ಟಿ20 ಪಂದ್ಯಾವಳಿಯನ್ನು ಏಕೆ ಆಡುತ್ತೀರಿ?. ಎಲ್ಲಾ ಮೂರು ಸ್ವರೂಪಗಳನ್ನು ಆಡಿ. ದೇಶಕ್ಕಾಗಿ ಆಡುವಾಗ ಫಿಟ್​ ಆಗದಿರುವ ನೀವು ಅದೇ ಐಪಿಎಲ್ ಬಂದಾಗ ಮಾತ್ರ ಹೇಗೆ ಫಿಟ್​ ಆಗುತ್ತೀರಾ?,” ಎಂದು ಪ್ರವೀನ್ ಕುಮಾರ್ ಪ್ರಶ್ನಿಸಿದ್ದರು.

ಕ್ರುನಾಲ್ ಪಾಂಡ್ಯ ವಿವಾದ

ಹಾರ್ದಿಕ್ ಪಾಂಡ್ಯರಂತೆ ಕ್ರುನಾಲ್ ಪಾಂಡ್ಯ ಕೂಡ ವಿವಾದಗಳಿಂದ ಸುದ್ದಿಯಲ್ಲಿರುತ್ತಾರೆ. 2021 ರಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದ ವೇಳೆ ಕ್ರುನಾಲ್ ಪಾಂಡ್ಯ ತನ್ನ ಸಹ ಆಟಗಾರ ದೀಪಕ್ ಹೂಡ ಅವರಿಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಸ್ವತಃ ದೀಪಕ್ ಅವರೇ ಬಹಿರಂಗವಾಗಿ ಹೇಳಿದ್ದರು. ”ಕ್ರುನಾಲ್ ತನ್ನನ್ನು ಪದೇಪದೇ ನಿಂದಿಸುತ್ತಿದ್ದಾರೆ. ಅಲ್ಲದೆ ಬೆದರಿಕೆ ಹಾಕಿದ್ದಾರೆ. ನನ್ನ ಜೊತೆ ಇದ್ದ ಬರೋಡ ಆಟಗಾರರ ಮುಂದೆ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ. ಇದರಿಂದ ನಾನು ಖಿನ್ನತೆಗೆ ಒಳಗಾಗಿದ್ದೇನೆ, ಒತ್ತಡದಲ್ಲಿದ್ದೇನೆ,” ಎಂದು ಹೇಳಿದ್ದರು. ಈ ಘಟನೆಯ ಬಳಿಕ ಹೂಡ ಅವರು ಕ್ರುನಾಲ್ ಪಾಂಡ್ಯ ನಾಯಕತ್ವದ ಬರೋಡ ತಂಡವನ್ನಯ ತ್ಯಜಿಸಿ ರಾಜಸ್ಥಾನ್ ಪರ ಆಡಿದ್ದರು.

ಕ್ರುನಾಲ್ ಪಾಂಡ್ಯ-ಕೀರನ್ ಪೊಲಾರ್ಡ್

ಐಪಿಎಲ್ 2022 ರಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದಲ್ಲಿ ಮುಂಬೈ ಬ್ಯಾಟರ್ ಕೀರನ್ ಪೊಲಾರ್ಡ್ ಔಟಾಗಾದ ಕ್ರನಾಲ್ ಪಾಂಡ್ಯ ವರ್ತಿಸಿದ ರೀತಿ ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಇದು ವಿವಾದ ಸೃಷ್ಟಿಸಿತ್ತು. ಕ್ರುನಾಲ್ ಬೌಲಿಂಗ್​ನಲ್ಲಿ ಪೊಲಾರ್ಡ್ ಅವರು ದೀಪಕ್ ಹೂಡಾಗೆ ಕ್ಯಾಚ್ ನೀಡಿ ಔಟಾದರು. ಪೊಲಾರ್ಡ್ ಬೇಸರದಿಂದ ಪೆವಿಲಿಯನ್ ಕಡೆ ತೆರಳುತ್ತಿರುವಾಗ ಕೃನಾಲ್ ಅವರು ಪೊಲಾರ್ಡ್ ಮೇಲೆ ಹಾರಿ ಅವರ ತಲೆಗೆ ಮುತ್ತಿಟ್ಟಿದ್ದಾರೆ. ಇಲ್ಲಿ ಕೃನಾಲ್ ವಿಚಿತ್ರವಾಗಿ ಸಂಭ್ರಮಿಸಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಈ ಘಟನೆಯಿಂದ ಸ್ವತಃ ಪೊಲಾರ್ಡ್ ಕೋಪಗೊಂಡರು.

Published On - 6:22 pm, Thu, 4 April 24

ತಾಜಾ ಸುದ್ದಿ