‘4 ವರ್ಷಗಳ ಜೊತೆ ಪಯಣಕ್ಕೆ ಅಂತ್ಯ ಹಾಡಿದ್ದೇವೆ’; ವಿಚ್ಛೇದನ ಖಚಿತ ಪಡಿಸಿದ ಹಾರ್ದಿಕ್ ಪಾಂಡ್ಯ
Hardik Pandya Natasa Stankovic Divorce: ಬಾಲಿವುಡ್ ಆಕ್ಟ್ರೇಸ್ ನತಾಶಾ ಸ್ಟಾಂಕೋವಿಕ್ ಮತ್ತು ಟೀಂ ಇಂಡಿಯಾ ಕ್ರಿಕೆಟಿಗ ಹಾರ್ಡಿಕ್ ಪಾಂಡ್ಯ ಅವರಿಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವಿಚ್ಛೇದನ ವದಂತಿಗೆ ಇಂದು ಅಧಿಕೃತ ತೆರೆಬಿದ್ದಿದೆ. ನಾವಿಬ್ಬರು ಪರಸ್ಪರ ಬೇರೆ ಬೇರೆಯಾಗಿರುವುದಾಗಿ ಸ್ವತಃ ಹಾರ್ದಿಕ್ ಪಾಂಡ್ಯ ಅವರೇ ಖಚಿತಪಡಿಸಿದ್ದಾರೆ.
ಬಾಲಿವುಡ್ ಆಕ್ಟ್ರೇಸ್ ನತಾಶಾ ಸ್ಟಾಂಕೋವಿಕ್ ಮತ್ತು ಟೀಂ ಇಂಡಿಯಾ ಕ್ರಿಕೆಟಿಗ ಹಾರ್ಡಿಕ್ ಪಾಂಡ್ಯ ಅವರಿಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವಿಚ್ಛೇದನ ವದಂತಿಗೆ ಇಂದು ಅಧಿಕೃತ ತೆರೆಬಿದ್ದಿದೆ. ನಾವಿಬ್ಬರು ಪರಸ್ಪರ ಬೇರೆ ಬೇರೆಯಾಗಿರುವುದಾಗಿ ಸ್ವತಃ ಹಾರ್ದಿಕ್ ಪಾಂಡ್ಯ ಅವರೇ ಖಚಿತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಸ್ತೃತವಾಗಿ ಬರೆದುಕೊಂಡಿರುವ ಹಾರ್ದಿಕ್ ಪಾಂಡ್ಯ, ಹಲವು ದಿನಗಳಿಂದ ಕೇಳಿಬರುತ್ತಿದ್ದ ಸುದ್ದಿಗೆ ಅಂತಿಮ ಮುದ್ರೆ ಒತ್ತಿದ್ದಾರೆ. ವಾಸ್ತವವಾಗಿ 2024 ರ ಐಪಿಎಲ್ ಆರಂಭವಾದಾಗಿನಿಂದಲೂ ಈ ಇಬ್ಬರು ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಟಿ20 ವಿಶ್ವಕಪ್ ವೇಳೆಯೂ ನತಾಶಾ ಸುಳಿವಿರಲಿಲ್ಲ. ಇದೆಲ್ಲದರ ಜೊತೆಗೆ ಅನಂತ್ ಅಂಬಾನಿ ಮದುವೆಯಲ್ಲೂ ಹಾರ್ದಿಕ್ ಏಕಾಂಗಿಯಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಇಬ್ಬರ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿರುವ ಸುದ್ದಿಗೆ ಪುಷ್ಠಿ ಸಿಕ್ಕಿತ್ತು. ಇದೀಗ ಆ ವದಂತಿಗೆ ಅಂತ್ಯ ಹಾಡುವ ಕೆಲಸವನ್ನು ಹಾರ್ದಿಕ್ ಪಾಂಡ್ಯ ಮಾಡಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಹಾರ್ದಿಕ್ ಪಾಂಡ್ಯ, ನಾಲ್ಕು ವರ್ಷಗಳ ಜೊತೆ ಪಯಣ ಇಂದು ಅಂತ್ಯಗೊಂಡಿದೆ. ವೈವಾಹಿಕ ಬದುಕಿನಲ್ಲಿ ಯಾವುದೇ ಬಿರುಕು ಬರದಂತೆ ತಡೆಯಲು ಸಾಕಷ್ಟು ಪ್ರಯತ್ನಪಟ್ಟೆವು. ಆದರೆ ಅದು ಸಾಧ್ಯವಾಗದಿದ್ದಾಗ ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಡುತ್ತಿದ್ದೇವೆ. ಇದು ಕಠಿಣ ನಿರ್ಧಾರವಾಗಿದ್ದು, ನಮ್ಮ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ದುಃಖದ ಸಮಯದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಹಾರ್ದಿಕ್ ಪಾಂಡ್ಯ ಅಭಿಮಾನಿಗಳು ಮತ್ತು ಜನರಿಗೆ ಮನವಿ ಮಾಡಿದ್ದಾರೆ.
View this post on Instagram
4 ವರ್ಷಗಳ ಹಿಂದೆ ವಿವಾಹ
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಮೇ 2020 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಲಾಕ್‌ಡೌನ್ ಸಮಯದಲ್ಲಿ ಇಬ್ಬರೂ ಕೋರ್ಟ್ ಮದುವೆ ಮಾಡಿಕೊಂಡಿದ್ದರು. ಅದೇ ವರ್ಷ ಅಂದರೆ ಜುಲೈ 2020 ರಲ್ಲಿ ಈ ದಂಪತಿಗಳಿಗೆ ಗಂಡು ಮಗು ಜನಿಸಿತ್ತು. ಆ ಬಳಿಕ ಮಗನ ಎದುರಿಗೆ ಈ ಇಬ್ಬರು 2023 ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಈ ದಂಪತಿಗಳು ತಮ್ಮ 4 ವರ್ಷದ ಜೊತೆ ಪಯಣಕ್ಕೆ ಅಂತ್ಯ ಹಾಡಿದ್ದಾರೆ.
ಮಗ ಅಗಸ್ತ್ಯನ ಪಾಲನೆ ಯಾರ ಹೆಗಲಿಗೆ?
ನತಾಶಾ ಮತ್ತು ಹಾರ್ದಿಕ್ ಪರಸ್ಪರ ಬೇರೆಯಾಗಿರುವುದರಿಂದ ಅವರ ಮಗ ಅಗಸ್ತ್ಯ ಯಾರ ಪೋಷಣೆಯಲ್ಲಿ ಬೆಳೆಯಲ್ಲಿದ್ದಾನೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ? ಇದಕ್ಕೆ ಹಾರ್ದಿಕ್ ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿ ಉತ್ತರ ನೀಡಿದ್ದು, ‘ತಾನು ಮತ್ತು ನತಾಶಾ ಬೇರ್ಪಟ್ಟರೂ ಒಟ್ಟಿಗೆ ಅಗಸ್ತ್ಯನನ್ನು ಬೆಳೆಸುತ್ತೇವೆ ಎಂದು ಹಾರ್ದಿಕ್ ಹೇಳಿದ್ದಾರೆ. ಪಾಂಡ್ಯರಿಂದ ಅಧಿಕೃತವಾಗಿ ವಿಚ್ಛೇದನ ಪಡೆದ ನಂತರ, ನತಾಶಾ ತನ್ನ ದೇಶವಾದ ಸರ್ಬಿಯಾಕ್ಕೆ ಮರಳಿದ್ದಾರೆ. ಹಾರ್ದಿಕ್ ಪುತ್ರ ಅಗಸ್ತ್ಯ ಕೂಡ ತಾಯಿಯೊಂದಿಗೆ ದೇಶ ತೊರೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:42 pm, Thu, 18 July 24