ಬೆಂಗಳೂರು (ಏ. 05): ಐಪಿಎಲ್ 2025 ರಲ್ಲಿ ಶುಕ್ರವಾರ ನಡೆದ 16ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸೋಲು ಕಂಡಿತು. ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಪಡೆ 12 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಋತುವಿನಲ್ಲಿ ಮುಂಬೈ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಇದು ಮೂರನೇ ಸೋಲು. ಮುಂಬೈ ಇಂಡಿಯನ್ಸ್ ಗೆಲುವಿಗೆ ಕೊನೆಯ ಓವರ್‌ನಲ್ಲಿ 22 ರನ್‌ಗಳು ಬೇಕಾಗಿದ್ದವು. ಹಾರ್ದಿಕ್ ಗೆಲುವಿಗೆ ಹೋರಾಡಿದರೂ ಅದು ಸಾಧ್ಯವಾಗಲಿಲ್ಲ. ಪಂದ್ಯ ಮುಗಿದ ಬಳಿಕ ಪಾಂಡ್ಯ ಸೋಲಿಗೆ ಕಾರಣ ತಿಳಿಸಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ನೀವು ಸೋತಾಗ ಅದು ತುಂಬಾ ನಿರಾಶಾದಾಯಕವಾಗಿರುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಮೈದಾನದಲ್ಲಿ ಈ ವಿಕೆಟ್‌ನಲ್ಲಿ 10-15 ರನ್‌ಗಳನ್ನು ಬಿಟ್ಟುಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಐದು ವಿಕೆಟ್ ಪಡೆದ ಬಗ್ಗೆ ಮಾತನಾಡಿದ ಪಾಂಡ್ಯ, ನಾನು ಯಾವಾಗಲೂ ನನ್ನ ಬೌಲಿಂಗ್ ಅನ್ನು ಆನಂದಿಸುತ್ತೇನೆ. ಬೌಲಿಂಗ್‌ನಲ್ಲಿ ನನಗೆ ಹೆಚ್ಚಿನ ಆಯ್ಕೆಗಳಿವೆ ಎಂದು ನಾನು ಭಾವಿಸುವುದಿಲ್ಲ. ನಾನು ವಿಕೆಟ್ ಅನ್ನು ರೀಡ್ ಮಾಡುತ್ತೇನೆ ಮತ್ತು ಕೆಲವು ಸ್ಮಾರ್ಟ್ ಆಯ್ಕೆಗಳನ್ನು ಪ್ರಯತ್ನಿಸುತ್ತೇನೆ. ವಿಕೆಟ್ ತೆಗೆಯಬೇಕೆಂದು ಬೌಲಿಂಗ್ ಮಾಡಲು ಪ್ರಯತ್ನಿಸುವುದಿಲ್ಲ. ಹೆಚ್ಚಾಗಿ ಡಾಟ್ ಬಾಲ್‌ಗಳನ್ನು ಮಾಡಲು ಪ್ರಯತ್ನಿಸುತ್ತೇನೆ. ಈ ಮೂಲಕ ಬ್ಯಾಟರ್‌ಗಳು ಅಪಾಯಕಾರಿ ಶಾಟ್ ಹೊಡೆಯುವಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸೋಲಿಗೆ ಕಾರಣ ತಿಳಿಸಿದ ಹಾರ್ದಿಕ್, ಬ್ಯಾಟಿಂಗ್ ಘಟಕವಾಗಿ, ನಾವು ವಿಫಲರಾಗಿದ್ದೇವೆ ಎಂದು ನಾನು ಭಾವಿಸುತ್ತೇನೆ. ಕೆಲವು ಬಾರಿ ನಾವು ತಂಡವಾಗಿ ಗೆಲ್ಲುತ್ತೇವೆ, ತಂಡವಾಗಿ ಸೋಲುತ್ತೇವೆ. ಹೀಗಾದಾಗ ಯಾರನ್ನೂ ಎತ್ತಿ ತೋರಿಸಲು ಬಯಸುವುದಿಲ್ಲ. ಸೋಲಿನ ಹೊಣೆಯನ್ನು ಇಡೀ ಬ್ಯಾಟಿಂಗ್ ಘಟಕವು ತೆಗೆದುಕೊಳ್ಳಬೇಕು. ನಾನು ಸಂಪೂರ್ಣ ಇದರ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
LSG vs MI, IPL 2025: ಸೂರ್ಯಕುಮಾರ್ ಯಾದವ್ ಸಿಕ್ಸ್ ಸಿಡಿಸಿದಾಗ ಕೂದಲೆಳೆಯಿಂದ ಪಾರಾದ ಹುಡುಗಿ: ಭಯಾನಕ ವಿಡಿಯೋ ನೋಡಿ
ತಿಲಕ್ ವರ್ಮಾ ನಿವೃತ್ತರಾದ ಬಗ್ಗೆ ಮಾತನಾಡಿದ ಪಾಂಡ್ಯ, ಅದು ಸ್ಪಷ್ಟವಾಗಿತ್ತು. ನಮಗೆ ಕೆಲವು ದೊಡ್ಡ ಹಿಟ್‌ಗಳು ಬೇಕಾಗಿದ್ದವು. ಕ್ರಿಕೆಟ್‌ನಲ್ಲಿ, ಅಂತಹ ಕ್ಷಣಗಳು ಕೆಲವು ಬರುತ್ತವೆ. ಉತ್ತಮ ಕ್ರಿಕೆಟ್ ಆಡಬೇಕು. ಬೌಲಿಂಗ್‌ನಲ್ಲಿ ಬುದ್ಧಿವಂತರಾಗಬೇಕು. ಬ್ಯಾಟಿಂಗ್‌ನಲ್ಲಿ ಅವಕಾಶಗಳನ್ನು ತೆಗೆದುಕೊಳ್ಳಬೇಕು. ಸ್ವಲ್ಪ ಆಕ್ರಮಣಶೀಲತೆಯೊಂದಿಗೆ ಸರಳ ಕ್ರಿಕೆಟ್ ಆಡಬೇಕು. ಇದು ದೀರ್ಘ ಪಂದ್ಯಾವಳಿಯಾಗಿರುವುದರಿಂದ, ನಾವು ಲಯಕ್ಕೆ ಮರಳುತ್ತೇವೆ ಎಂಬುದು ಪಾಂಡ್ಯ ಮಾತು.
ಟಾಸ್ ಗೆದ್ದ ನಂತರ ಮುಂಬೈ ತಂಡವು ಲಕ್ನೋವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಲಕ್ನೋ ಪರ ಮಿಚೆಲ್ ಮಾರ್ಷ್ ಅದ್ಭುತ ಆರಂಭ ನೀಡಿದರು. ಕೇವಲ 31 ಎಸೆತಗಳಲ್ಲಿ 60 ರನ್ ಗಳಿಸಿದರು. ಮಾರ್ಷ್ ಮತ್ತು ಐಡೆನ್ ಮಾರ್ಕ್ರಾಮ್ ಅರ್ಧಶತಕಗಳನ್ನು ಗಳಿಸುವ ಮೂಲಕ ನಿಗದಿತ 20 ಓವರ್‌ಗಳಲ್ಲಿ 203 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾದರು. ಹಾರ್ದಿಕ್ ನಾಲ್ಕು ಓವರ್‌ಗಳಲ್ಲಿ 36 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದರು. ಟಾರ್ಗೆಟ್ ಬೆನ್ನಟ್ಟಿದ ಮುಂಬೈ ತಂಡ 5 ವಿಕೆಟ್‌ಗೆ 191 ರನ್ ಗಳಿಸಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ