ಟಿ20 ವಿಶ್ವಕಪ್ ಬಳಿಕ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಪಾಂಡ್ಯ ಇದೀಗ ಮುಂಬರುವ ಐಪಿಎಲ್ಗಾಗಿ ಸಿದ್ಧತೆಯಲ್ಲಿದ್ದಾರೆ. ಐಪಿಎಲ್ 2022 ರಲ್ಲಿ ಅಹಮದಾಬಾದ್ ತಂಡದ ನಾಯಕರಾಗಿ ಕಣಕ್ಕಿಳಿಯಲಿರುವ ಹಾರ್ದಿಕ್ ಪಾಂಡ್ಯ ಶೀಘ್ರದಲ್ಲೇ ಆಲ್ರೌಂಡರ್ ಆಗಿ ಕಾಣಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ. ಈ ಹಿಂದೆ ಟೀಮ್ ಇಂಡಿಯಾದಲ್ಲಿದ್ದ ಪಾಂಡ್ಯ ಭುಜದ ನೋವಿನ ಕಾರಣ ಬೌಲಿಂಗ್ ಮಾಡುತ್ತಿರಲಿಲ್ಲ. ಕೆಲವು ಬಾರಿ ಬೌಲಿಂಗ್ ಮಾಡಿದರೂ 4 ಓವರ್ಗಳ ಸಂಪೂರ್ಣ ಕೋಟಾವನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿಯೇ ಪಾಂಡ್ಯರನ್ನು ಆಲ್ರೌಂಡರ್ ಆಗಿ ಟೀಮ್ ಇಂಡಿಯಾಗೆ ಆಯ್ಕೆ ಮಾಡಬಾರದೆಂಬ ಕೂಗುಗಳು ಕೇಳಿ ಬಂದಿದ್ದವು.
ಇದೀಗ ಫಿಟ್ನೆಸ್ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಪಾಂಡ್ಯ ಮತ್ತೆ ಟೀಮ್ ಇಂಡಿಯಾ ಪರ ಆಲ್ ರೌಂಡರ್ ಆಗಿ ಆಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ನಾನು ಆಲ್‌ರೌಂಡರ್‌ನಂತೆ ಆಡಲು ಬಯಸುತ್ತೇನೆ. ನನ್ನ ತಯಾರಿಯೂ ಹಾಗೆಯೇ ಇದೆ. ನನ್ನ ತಯಾರಿ ಹೇಗಿದೆ ಎಂಬುದನ್ನು ಕಾಲವೇ ಹೇಳಲಿದೆ ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ. ಐಪಿಎಲ್ 2021 ರಲ್ಲಿ ಪಾಂಡ್ಯ ಬೌಲಿಂಗ್ ಮಾಡಿರಲಿಲ್ಲ. ಇನ್ನು ಬ್ಯಾಟಿಂಗ್ನಲ್ಲೂ ವಿಫಲರಾಗಿದ್ದರು. ಹೀಗಾಗಿಯೇ ಮುಂಬೈ ಇಂಡಿಯನ್ಸ್ ಅವರನ್ನು ಬಿಡುಗಡೆ ಮಾಡಿತ್ತು.
ಆದರೆ ಮುಂಬೈ ಇಂಡಿಯನ್ಸ್ ತಂಡದಿಂದ ರಿಲೀಸ್ ಆದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಅವರ ಅದೃಷ್ಟ ಖುಲಾಯಿಸಿದೆ. ಅಹಮದಾಬಾದ್ ತಂಡವು ಬರೋಬ್ಬರಿ 15 ಕೋಟಿ ನೀಡಿ ಹಾರ್ದಿಕ್ ಪಾಂಡ್ಯರನ್ನು ಖರೀದಿಸಿದೆ. ಇದರ ಬೆನ್ನಲ್ಲೇ ನಾನು ಸಂಪೂರ್ಣ ಆಲ್ರೌಂಡರ್ ಆಗಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಖುದ್ದು ಪಾಂಡ್ಯ ತಿಳಿಸಿದ್ದಾರೆ. ಅದರಂತೆ ಮುಂಬರುವ ಐಪಿಎಲ್ನಲ್ಲಿ ಮತ್ತೆ ಆಲ್ರೌಂಡರ್ ಕುಂಗ್ಫು ಪಾಂಡ್ಯರನ್ನು ಕಾಣಬಹುದು.
ಧೋನಿಯನ್ನು ಸ್ಮರಿಸಿದ ಪಾಂಡ್ಯ:
ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಹಾರ್ದಿಕ್ ಪಾಂಡ್ಯ ಹೊಗಳಿದ್ದಾರೆ . ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅಷ್ಟೇ ಅಲ್ಲದೆ ಅವರು ನನಗೆ ಸಾಕಷ್ಟು ಸ್ವಾತಂತ್ರ್ಯವನ್ನೂ ಕೊಟ್ಟಿದ್ದಾರೆ. ಅವರು ಯಾವಾಗಲೂ ನನ್ನ ಹಿಂದೆ ಬೆಂಬಲಕ್ಕಿದ್ದರು. ನನ್ನ ಮೊದಲ ಪಂದ್ಯದಲ್ಲಿ 22 ಅಥವಾ 24 ರನ್‌ಗಳನ್ನು ಮೊದಲ ಓವರ್‌ನಲ್ಲಿ ನೀಡಿರುವ ಬಗ್ಗೆ ಯೋಚಿಸುತ್ತಿದ್ದೆ. ಇದು ನನ್ನ ಮೊದಲ ಮತ್ತು ಕೊನೆಯ ಪಂದ್ಯ ಎಂದು ಭಾವಿಸಿದ್ದೆ. ಆದರೆ ಎರಡನೇ ಓವರ್‌ನಲ್ಲಿ, ಮಹಿ ಭಾಯ್ ನನ್ನನ್ನು ಕರೆದು ಸಲಹೆಗಳನ್ನು ನೀಡಿದರು. ಅದರ ನಂತರ ಪರಿಸ್ಥಿತಿ ಬದಲಾಯಿತು ಎಂದು ಪಾಂಡ್ಯ ಧೋನಿಯ ಬೆಂಬಲವನ್ನು ಸ್ಮರಿಸಿದರು.
ಹಾರ್ದಿಕ್ ಪಾಂಡ್ಯ ಜನವರಿ 2016 ರಲ್ಲಿ ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದ್ದರು. ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ವೇಗದ ಬೌಲರ್ ಆಗಿ 3 ಓವರ್‌ಗಳಲ್ಲಿ 37 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಈ ಪಂದ್ಯವನ್ನು ಭಾರತ 37 ರನ್‌ಗಳಿಂದ ಗೆದ್ದುಕೊಂಡಿತು. ಪಾಂಡ್ಯ ಅವರ ಒಟ್ಟಾರೆ ಟಿ20 ದಾಖಲೆಯನ್ನು ಗಮನಿಸಿದರೆ, 135 ಇನ್ನಿಂಗ್ಸ್‌ಗಳಲ್ಲಿ 110 ವಿಕೆಟ್ ಪಡೆದಿದ್ದಾರೆ. ಇದಲ್ಲದೇ 147 ಇನ್ನಿಂಗ್ಸ್‌ಗಳಲ್ಲಿ 2797 ರನ್ ಕಲೆಹಾಕಿದ್ದಾರೆ. ಇದಾಗ್ಯೂ ಕಳೆದ ಐಪಿಎಲ್ನಿಂದ ಪಾಂಡ್ಯ ಔಟ್ ಆಫ್ ಫಾರ್ಮ್ನಲ್ಲಿದ್ದಾರೆ. ಆದರೆ ಮುಂಬರುವ ಐಪಿಎಲ್ನಲ್ಲಿ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸುವ ಇರಾದೆಯಲ್ಲಿದ್ದಾರೆ ಕುಂಗ್ಫು ಪಾಂಡ್ಯ.
ಇದನ್ನೂ ಓದಿ: Ind vs SA: ಭರ್ಜರಿ ಶತಕ ಸಿಡಿಸಿ ಸಚಿನ್, ಸೆಹ್ವಾಗ್ ದಾಖಲೆ ಮುರಿದ ಕ್ವಿಂಟನ್ ಡಿಕಾಕ್
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!
(Hardik Pandya makes a big statement on his all-rounder career)