ಹಾರಿಸ್ ರೌಫ್ಗೆ ನಿಷೇಧ: ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವಂತಿಲ್ಲ..!
Haris Rauf: ಪಾಕಿಸ್ತಾನ್ ತಂಡದ ಪ್ರಮುಖ ವೇಗಿಗಳಲ್ಲಿ ಹಾರಿಸ್ ರೌಫ್ ಕೂಡ ಒಬ್ಬರು. ಆದರೆ ಏಷ್ಯಾಕಪ್ ಟೂರ್ನಿಯ ವೇಳೆ ದುರ್ನಡತೆ ತೋರಿದ್ದಕ್ಕಾಗಿ ಇದೀಗ ಹಾರಿಸ್ ರೌಫ್ ಎರಡು ಪಂದ್ಯಗಳ ನಿಷೇಧಕ್ಕೆ ಒಳಗಾಗಿದ್ದಾರೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಹಾರಿಸ್ ರೌಫ್ ಕಣಕ್ಕಿಳಿಯುವಂತಿಲ್ಲ.

ಪಾಕಿಸ್ತಾನ್ ತಂಡದ ಪ್ರಮುಖ ವೇಗಿ ಹಾರಿಸ್ ರೌಫ್ ಸೌತ್ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಐಸಿಸಿ ಹೇರಿರುವ ನಿಷೇಧ. ಏಷ್ಯಾಕಪ್ ಟೂರ್ನಿ ವೇಳೆ ಕ್ರೀಡಾ ಘನತೆಗೆ ಧಕ್ಕೆ ತಂದ ಹಿನ್ನಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಹಾರಿಸ್ ರೌಫ್ ಮೇಲೆ 2 ಪಂದ್ಯಗಳ ನಿಷೇಧ ಹೇರಲಾಗಿದೆ.
ಸೆಪ್ಟೆಂಬರ್ 14 ರಂದು ನಡೆದ ಭಾರತದ ವಿರುದ್ಧದ ಪಂದ್ಯದ ವೇಳೆ ಹಾರಿಸ್ ರೌಫ್ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರತ್ತ ತಿರುಗಿ ವಿಮಾನ ಹೊಡೆದುರುಳಿಸಿದ್ದೇವೆ ಎಂದು ಸಂಜ್ಞೆ ಮಾಡಿ ಸಂಭ್ರಮಿಸಿದ್ದರು.
ಇದಾದ ಬಳಿಕ ಸೆಪ್ಟೆಂಬರ್ 28 ರಂದು ನಡೆದ ಭಾರತದ ವಿರುದ್ಧದ ಪಂದ್ಯದ ಮತ್ತೊಮ್ಮೆ ವಿಮಾನ ಬೀಳಿಸಿದ್ದೇವೆ ಎಂಬಾರ್ಥದಲ್ಲಿ ಕೈ ಸನ್ನೆ ಮಾಡಿ ಭಾರತೀಯ ಪ್ರೇಕ್ಷಕರನ್ನು ಪ್ರಚೋದಿಸಿದ್ದರು.
ಪಾಕ್ ವೇಗಿಯ ಈ ನಡೆಯ ಬಗ್ಗೆ ಬಿಸಿಸಿಐ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ಗೆ ದೂರು ಸಲ್ಲಿಸಿತ್ತು. ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ, ಹಾರಿಸ್ ರೌಫ್ಗೆ 4 ಡಿಮೆರಿಟ್ ಪಾಯಿಂಟ್ ನೀಡಿದೆ.
ಇತ್ತ ಒಂದೇ ವರ್ಷದಲ್ಲಿ ನಾಲ್ಕು ಡಿಮೆರಿಟ್ ಪಾಯಿಂಟ್ ಪಡೆದಿರುವ ಕಾರಣ ಅವರಿಗೆ 2 ಅಂತಾರಾಷ್ಟ್ರೀಯ ಪಂದ್ಯಗಳ ನಿಷೇಧ ಹೇರಲಾಗಿದೆ. ಅದರಂತೆ ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಸರಣಿಯ ಎರಡು ಪಂದ್ಯಗಳಿಂದ ಹೊರಗುಳಿಯಬೇಕಾಗಿ ಬಂದಿದೆ.
ಹೀಗಾಗಿ ಇಂದು (ನ.6) ಫೈಸಲಾಬಾದ್ನಲ್ಲಿ ನಡೆಯಲಿರುವ ಸೌತ್ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಹಾರಿಸ್ ರೌಫ್ ಕಣಕ್ಕಿಳಿಯುವಂತಿಲ್ಲ. ಅತ್ತ ರೌಫ್ ಹೊರಗುಳಿಯುವ ಕಾರಣ ಪಾಕ್ ಪರ ಎರಡನೇ ವೇಗಿಯಾಗಿ ನಸೀಮ್ ಶಾ ಕಾಣಿಸಿಕೊಳ್ಳಲಿದ್ದಾರೆ.
ಗೆದ್ದು ಬೀಗಿರುವ ಪಾಕ್ ಪಡೆ:
ಫೈಸಲಾಬಾದ್ನ ಇಕ್ಬಾಲ್ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ್ ತಂಡ 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡದ ನಾಯಕ ಶಾಹೀನ್ ಅಫ್ರಿದಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ 63 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಸೌತ್ ಆಫ್ರಿಕಾ ತಂಡವು 49.1 ಓವರ್ಗಳಲ್ಲಿ 263 ರನ್ಗಳಿಸಿ ಆಲೌಟ್ ಆಯಿತು.
264 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡಕ್ಕೆ ಸೈಮ್ ಅಯ್ಯೂಬ್ (39) ಹಾಗೂ ಫಖರ್ ಝಮಾನ್ (45) ಉತ್ತಮ ಆರಂಭ ಒದಗಿಸಿದ್ದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ 55 ರನ್ಗಳ ಕೊಡುಗೆ ನೀಡಿದರು. ಆ ಬಳಿಕ ಬಂದ ಸಲ್ಮಾನ್ ಅಲಿ ಅಘಾ 62 ರನ್ ಬಾರಿಸಿದರು.
ಇದಾಗ್ಯೂ ಪಾಕಿಸ್ತಾನ್ ತಂಡ 257 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಈ ಹಂತದಲ್ಲಿ ಮೊಹಮ್ಮದ್ ನವಾಝ್ 9 ರನ್ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಈ ಮೂಲಕ 49.4 ಓವರ್ಗಳಲ್ಲಿ 264 ರನ್ಗಳಿಸಿ ಪಾಕಿಸ್ತಾನ್ ತಂಡ 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಇದೀಗ ಮೂರು ಪಂದ್ಯಗಳ ಸರಣಿಯ 2ನೇ ಮ್ಯಾಚ್ ಇಂದು (ನ.6) ನಡೆಯಲಿದೆ. ಈ ಪಂದ್ಯವು ಸೌತ್ ಆಫ್ರಿಕಾ ತಂಡಕ್ಕೆ ನಿರ್ಣಾಯಕ. ಹೀಗಾಗಿ ಇಂದಿನ ಮ್ಯಾಚ್ನಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಇದನ್ನೂ ಓದಿ: RCB ಖರೀದಿಗೆ ಮುಂದಾದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ: ಅದಾನಿ ಕಡೆಯಿಂದ ಟಕ್ಕರ್..!
ಪಾಕಿಸ್ತಾನ್ ಏಕದಿನ ತಂಡ: ಫಖರ್ ಝಮಾನ್, ಸೈಮ್ ಅಯ್ಯೂಬ್, ಬಾಬರ್ ಆಝಂ, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಅಲಿ ಅಘಾ, ಹುಸೇನ್ ತಲತ್, ಹಸನ್ ನವಾಝ್, ಮೊಹಮ್ಮದ್ ನವಾಝ್, ಶಾಹೀನ್ ಅಫ್ರಿದಿ (ನಾಯಕ), ನಸೀಮ್ ಶಾ, ಅಬ್ರಾರ್ ಅಹ್ಮದ್, ಮೊಹಮ್ಮದ್ ವಾಸಿಮ್ ಜೂನಿಯರ್, ಫೈಸಲ್ ಅಕ್ರಮ್, ಹಸೀಬುಲ್ಲಾ ಖಾನ್, ಫಯೀಮ್ ಅಶ್ರಫ್, ಹಾರಿಸ್ ರೌಫ್ (ಅಲಭ್ಯ).
