RCB ಖರೀದಿಗೆ ಮುಂದಾದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ: ಅದಾನಿ ಕಡೆಯಿಂದ ಟಕ್ಕರ್..!
IPL 2026 RCB: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ನ ಅತ್ಯಂತ ಮೌಲ್ಯಯುತ ತಂಡವಾಗಿ ಗುರುತಿಸಿಕೊಂಡಿದೆ. ಈ ತಂಡದ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಮುಂದಾಗಿದ್ದು, ಹೀಗಾಗಿ ಆರ್ಸಿಬಿ ತಂಡದ ಖರೀದಿಗೆ ದೊಡ್ಡ ಉದ್ಯಮಿಗಳ ನಡುವೆ ಪೈಪೋಟಿ ನಡೆಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಫ್ರಾಂಚೈಸಿ ಮಾಲೀಕರು ಬದಲಾಗುವುದು ಖಚಿತವಾಗಿದೆ. ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ನಿರ್ಧರಿಸಿದ್ದು, ಇದರ ಬೆನ್ನಲ್ಲೇ ರಾಯಲ್ ಫ್ರಾಂಚೈಸಿ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಮುಂದಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಆಸಕ್ತಿ ಹೊಂದಿರುವವರ ಪಟ್ಟಿಯಲ್ಲಿ ಪಾರ್ಥ್ ಜಿಂದಾಲ್ ಮಾಲೀಕತ್ವದ JSW ಗ್ರೂಪ್ ಮುಂಚೂಣಿಯಲ್ಲಿದ್ದಾರೆ. ಅತ್ತ ಇದೇ ಜೆಎಸ್ಡಬ್ಲ್ಯೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯಲ್ಲಿ ಶೇ.50 ರಷ್ಟು ಪಾಲು ಹೊಂದಿದೆ.
ಒಂದು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸುವಲ್ಲಿ ಜೆಎಸ್ಡಬ್ಲ್ಯೂ ಗ್ರೂಪ್ ಯಶಸ್ವಿಯಾದರೆ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಪಾಲನ್ನು ಮಾರಾಟ ಮಾಡಲಿದ್ದಾರೆ. ಏಕೆಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ಕಂಪೆನಿಯು 2 ತಂಡಗಳನ್ನು ಖರೀದಿಸುವಂತಿಲ್ಲ. ಅಥವಾ ಎರಡು ತಂಡಗಳಲ್ಲಿ ಹೂಡಿಕೆ ಮಾಡುವಂತಿಲ್ಲ.
ಇತ್ತ ಜೆಎಸ್ಡಬ್ಲ್ಯೂ ಗ್ರೂಪ್ಗೆ ಪೈಪೋಟಿಯಾಗಿ ಅದಾನಿ ಗ್ರೂಪ್ ಕೂಡ ಎಂಟ್ರಿ ಕೊಟ್ಟಿದೆ. ಗೌತಮ್ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್ ಈ ಹಿಂದಿನಿಂದಲೂ ಐಪಿಎಲ್ನಲ್ಲಿ ತಂಡವನ್ನು ಖರೀದಿಸಲು ಪ್ರಯತ್ನಿಸುತ್ತಿದೆ. ಈ ಹಿಂದೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯ ಖರೀದಿಗೆ ಬಿಡ್ ಸಲ್ಲಿಸಿದರೂ ಯಶಸ್ವಿಯಾಗಿರಲಿಲ್ಲ.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಖರೀದಿಸಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಎಂಟ್ರಿ ಕೊಡಲು ಅದಾನಿ ಗ್ರೂಪ್ ಪ್ಲ್ಯಾನ್ ರೂಪಿಸುತ್ತಿದೆ. ಆದರೆ ಇಲ್ಲಿ ಅದಾನಿ ಗ್ರೂಪ್ಗೆ ಪೈಪೋಟಿ ನೀಡಲು ಆದಾರ್ ಪೂನಾವಾಲ ಕೂಡ ಮುಂದಾಗಿದ್ದಾರೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ ಕೂಡ ಡಿಯಾಜಿಯೋ ಕಂಪೆನಿ ಜೊತೆ ಮಾತುಕತೆ ನಡೆಸಿದ್ದು, ಈ ಮಾತುಕತೆ ಯಶಸ್ವಿಯಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿ ಪುಣೆ ಮೂಲದ ಉದ್ಯಮಿ ಪಾಲಾಗಲಿದೆ.
ಈ ಮೂವರು ಉದ್ಯಮಿಗಳಲ್ಲದೆ ದೇವಯಾನಿ ಇಂಟರ್ನ್ಯಾಷನಲ್ ಗ್ರೂಪ್ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಆಸಕ್ತಿ ತೋರಿದೆ.
ಹಾಗೆಯೇ ಅಮೆರಿಕದ ಪ್ರೈವೆಟ್ ಇನ್ವೆಸ್ಟ್ಮೆಂಟ್ ಕಂಪೆನಿಯೊಂದು ಕೂಡ ಆರ್ಸಿಬಿ ಫ್ರಾಂಚೈಸಿ ಖರೀದಿಗಾಗಿ ಡಿಯಾಜಿಯೊ ಕಂಪೆನಿ ಜೊತೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.
ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗಾಗಿ ಈಗಾಗಲೇ 5 ಕಂಪೆನಿಗಳು ಆಸಕ್ತಿ ತೋರಿಸಿದೆ. ಹೀಗಾಗಿ ಐವರಲ್ಲಿ ಇಬ್ಬರು ಆರ್ಸಿಬಿ ತಂಡದ ಹೊಸ ಮಾಲೀಕರಾಗಿ ಹೊರಹೊಮ್ಮುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: WPL 2026: RCB ನಾಲ್ವರನ್ನು ಮಾತ್ರ ಉಳಿಸಿಕೊಳ್ಳಲು ಇದುವೇ ಅಸಲಿ ಕಾರಣ..!
ಆರ್ಸಿಬಿ ಫ್ರಾಂಚೈಸಿ ಖರೀದಿಗೆ ಆಸಕ್ತಿ ಹೊಂದಿರುವವರು:
- ಜೆಎಸ್ಡಬ್ಲ್ಯೂ ಗ್ರೂಪ್ (ಪಾರ್ಥ್ ಜಿಂದಾಲ್)
- ಅದಾನಿ ಗ್ರೂಪ್ (ಗೌತಮ್ ಅದಾನಿ)
- ಪೂನಾವಾಲ ಗ್ರೂಪ್ (ಆದಾರ್ ಪೂನಾವಾಲ)
- ದೇವಯಾನಿ ಇಂಟರ್ನ್ಯಾಷನಲ್ ಗ್ರೂಪ್ (ರವಿಕಾಂತ್ ಜೈಪುರಿಯಾ)
- ಅಮೆರಿಕದ ಪ್ರೈವೆಟ್ ಇನ್ವೆಸ್ಟ್ಮೆಂಟ್ ಕಂಪೆನಿ
