ದಯವಿಟ್ಟು ಸಹಾಯ ಮಾಡಿ… ಎಬಿಡಿಗೆ ಸೂರ್ಯಕುಮಾರ್ ಯಾದವ್ ಮನವಿ
Suryakumar Yadav: ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿದ್ದರೂ ಅವರಿಗೆ ಏಕದಿನ ತಂಡದಲ್ಲಿ ಖಾಯಂ ಸ್ಥಾನ ಲಭಿಸಿಲ್ಲ. ಅದರಲ್ಲೂ ಭಾರತದ ಪರ ಅವರು ಏಕದಿನ ಪಂದ್ಯವಾಡಿ 2 ವರ್ಷಗಳೇ ಕಳೆದಿವೆ. ಇದೀಗ ಮತ್ತೆ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆಯುವ ಇರಾದೆಯಲ್ಲಿದ್ದಾರೆ ಸೂರ್ಯಕುಮಾರ್ ಯಾದವ್.

ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದ್ದ ಸೂರ್ಯ ಇದೀಗ ಆಸ್ಟ್ರೇಲಿಯಾದಲ್ಲೂ ತನ್ನ ಔಟ್ ಫಾರ್ಮ್ನಿಂದ ಕಂಗೆಟ್ಟಿದ್ದಾರೆ. ಈ ಕಳಪೆ ಫಾರ್ಮ್ ನಡುವೆ ಸೂರ್ಯಕುಮಾರ್ ಯಾದವ್ ಭಾರತ ಏಕದಿನ ತಂಡದಲ್ಲೂ ಸ್ಥಾನ ಪಡೆಯುವ ಆಕಾಂಕ್ಷೆಯಲ್ಲಿದ್ದಾರೆ. ಇದಕ್ಕಾಗಿ ಸೌತ್ ಆಫ್ರಿಕಾದ ಮಾಜಿ ದಿಗ್ಗಜ ಎಬಿ ಡಿವಿಲಿಯರ್ಸ್ ಅವರ ಸಹಾಯವನ್ನು ಕೋರಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, ನನಗೆ ಎರಡೂ ಸ್ವರೂಪಗಳಲ್ಲೂ ಆಡಬೇಕೆಂಬ ಆಸೆಯಿದೆ. ಭಾರತದ ಪರ ಟಿ20 ಕ್ರಿಕೆಟ್ ಆಡುತ್ತಿದ್ದರೂ, ಏಕದಿನ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ಈ ಎರಡೂ ಸ್ವರೂಪಗಳನ್ನು ಹೇಗೆ ಕರಗತ ಮಾಡಿಕೊಳ್ಳಬೇಕೆಂಬುದರ ಕುರಿತು ಸೌತ್ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಅವರಿಂದ ಸಲಹೆ ಪಡೆಯಬೇಕೆಂದುಕೊಂಡಿರುವೆ.
ಟಿ20 ಕ್ರಿಕೆಟ್‌ನಂತೆಯೇ ಏಕದಿನ ಪಂದ್ಯಗಳನ್ನು ಆಡಲು ನಾನು ಆಗಾಗ್ಗೆ ಪ್ರಯತ್ನಿಸುತ್ತಿದ್ದೆ. ಆದರೆ ಅದು ಯಶಸ್ವಿಯಾಗಲಿಲ್ಲ. ನಾನು ಎಬಿ ಡಿವಿಲಿಯರ್ಸ್ ಅವರನ್ನು ಭೇಟಿಯಾದರೆ, ಅವರು ಟಿ20 ಮತ್ತು ಏಕದಿನ ಪಂದ್ಯಗಳನ್ನು ಹೇಗೆ ಸಮತೋಲನಗೊಳಿಸಿದ್ದರು ಎಂಬುದನ್ನು ಕೇಳಲು ಬಯಸುತ್ತೇನೆ.
ನನ್ನ ಈ ಮಾತುಗಳನ್ನು ಎಬಿ ಡಿವಿಲಿಯರ್ಸ್ ಕೇಳುತ್ತಿದ್ದರೆ, ದಯವಿಟ್ಟು ಬೇಗ ನನ್ನನ್ನು ಸಂಪರ್ಕಿಸಿ! ನನ್ನ ಮುಂದೆ ಮೂರು ಅಥವಾ ನಾಲ್ಕು ಪ್ರಮುಖ ವರ್ಷಗಳು ಮಾತ್ತ ಬಾಕಿಯಿವೆ. ನಾನು ಏಕದಿನ ಕ್ರಿಕೆಟ್‌ನಲ್ಲಿ ನನ್ನ ಛಾಪು ಮೂಡಿಸಲು ಉತ್ಸುಕನಾಗಿದ್ದೇನೆ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಸೂರ್ಯಕುಮಾರ್ ಯಾದವ್ ಎಬಿಡಿಗೆ ಮನವಿ ಮಾಡಿದ್ದಾರೆ.
ಅಂದಹಾಗೆ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾ ಪರ 35 ಏಕದಿನ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಈ ವೇಳೆ ನಾಲ್ಕು ಅರ್ಧಶತಕಗಳು ಸೇರಿದಂತೆ 25.76 ಸರಾಸರಿಯಲ್ಲಿ 736 ರನ್ ಗಳಿಸಿದ್ದಾರೆ. ಅದರಲ್ಲೂ 2023 ರ ಏಕದಿನ ವಿಶ್ವಕಪ್ನಲ್ಲಿ ಸೂರ್ಯಕುಮಾರ್ ಯಾದವ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದಾದ ಬಳಿಕ ಅವರನ್ನು ಭಾರತ ಏಕದಿನ ತಂಡದಿಂದ ಕೈ ಬಿಡಲಾಗಿತ್ತು.
ಇದನ್ನೂ ಓದಿ: WPL 2026: RCB ನಾಲ್ವರನ್ನು ಮಾತ್ರ ಉಳಿಸಿಕೊಳ್ಳಲು ಇದುವೇ ಅಸಲಿ ಕಾರಣ..!
ಸದ್ಯ ಟಿ20 ತಂಡದ ಖಾಯಂ ಸದಸ್ಯರಾಗಿರುವ ಸೂರ್ಯಕುಮಾರ್ ಯಾದವ್ ಮತ್ತೆ ಏಕದಿನ ತಂಡಕ್ಕೆ ಮರಳುವ ಇಂಗಿತದಲ್ಲಿದ್ದಾರೆ. ಇದಕ್ಕಾಗಿ ವೈಟ್ ಬಾಲ್ ಕ್ರಿಕೆಟ್ನ ಲೆಜೆಂಡ್ ಎಬಿ ಡಿವಿಲಿಯರ್ಸ್ ಅವರ ಸಲಹೆಗಳನ್ನು ಕೇಳಿದ್ದು, ಶೀಘ್ರದಲ್ಲೇ ಸೂರ್ಯಕುಮಾರ್ ಯಾದವ್ ಮಿಸ್ಟರ್ 360 ಡಿಗ್ರಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ.
Published On - 9:54 am, Thu, 6 November 25
