Herschelle Gibbs: ಭಾರತದ ವಿರುದ್ದದ ಪಂದ್ಯದಿಂದ ಕೊನೆಗೂ ಗಿಬ್ಸ್ ಔಟ್..!
Herschelle gibbs: ಸೌತ್ ಆಫ್ರಿಕಾ ಆಟಗಾರನ ಆಯ್ಕೆಯ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಗಿಬ್ಸ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್ (Herschelle Gibbs) ಭಾರತದ ವಿರುದ್ಧದ ವಿಶೇಷ ಪಂದ್ಯದಿಂದ ಹೊರಬಿದಿದ್ದಾರೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಸೆಪ್ಟೆಂಬರ್ 16 ರಂದು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ಹಾಗೂ ರೆಸ್ಟ್ ಆಫ್ ದಿ ವರ್ಲ್ಡ್ ತಂಡಗಳ ನಡುವೆ ವಿಶೇಷ ಪಂದ್ಯವನ್ನು ಆಯೋಜಿಸಲಾಗುತ್ತಿದೆ. ಈ ಪಂದ್ಯದಲ್ಲಿ ಭಾರತದ ಪರ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡ ಮಾಜಿ ಕ್ರಿಕೆಟಿಗರು ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ರೆಸ್ಟ್ ಆಫ್ ವರ್ಲ್ಡ್ ತಂಡದಲ್ಲಿ ವಿಶ್ವದ ಇತರೆ ಮಾಜಿ ಆಟಗಾರರು ಕಣಕ್ಕಿಳಿಯಲಿದ್ದಾರೆ.
ಇತ್ತೀಚೆಗೆ ಪ್ರಕಟಗೊಂಡ ಈ ತಂಡಗಳಲ್ಲಿ ಸೌತ್ ಆಫ್ರಿಕಾದ ಹರ್ಷಲ್ ಗಿಬ್ಸ್ ಕೂಡ ಸ್ಥಾನ ಪಡೆದಿದ್ದರು. ಆದರೆ ಈ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಗಿಬ್ಸ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಅಲ್ಲದೆ ಅವರ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವ್ಯಾಟ್ಸನ್ ಅವರನ್ನು ಸೇರಿಸಲಾಗಿದೆ.
ಹರ್ಷಲ್ ಗಿಬ್ಸ್ ಅವರನ್ನು ಕೈ ಬಿಡಲು ಕಾರಣವೇನು?
ಈ ಹಿಂದೆ ರೆಸ್ಟ್ ಆಫ್ ವರ್ಲ್ಡ್ ತಂಡದಲ್ಲಿ ಸ್ಥಾನ ಪಡೆದಿದ್ದ ಹರ್ಷಲ್ ಗಿಬ್ಸ್ ಅವರನ್ನು ಕೈಬಿಡಬೇಕೆಂದು ಅನೇಕರು ಸೋಷಿಯಲ್ ಮೀಡಿಯಾದ ಮೂಲಕ ಆಗ್ರಹಿಸಿದ್ದರು. ಏಕೆಂದರೆ ಈ ಹಿಂದೆ ಗಿಬ್ಸ್ ಪಾಕಿಸ್ತಾನದ ಕಾಶ್ಮೀರ ಪ್ರೀಮಿಯರ್ ಲೀಗ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಲಾಗುವ ಈ ಲೀಗ್ನಲ್ಲಿ ವಿಶ್ವದ ಯಾವುದೇ ಆಟಗಾರರು ಭಾಗವಹಿಸದಂತೆ ಬಿಸಿಸಿಐ ಈ ಹಿಂದೆ ತೆರೆಮರೆಯ ಪ್ರಯತ್ನ ನಡೆಸಿತ್ತು. ಇದಾಗ್ಯೂ ಗಿಬ್ಸ್ ಈ ಲೀಗ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರತೀಯರ ಭಾವನೆಗಳಿಗೆ ನೋವುಂಟು ಮಾಡಿದ್ದರು.
ಪಾಕಿಸ್ತಾನದ ಕಾಶ್ಮೀರ ಲೀಗ್ನಲ್ಲಿ ಆಡಿದ ಆಟಗಾರನಿಗೆ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪಂದ್ಯದಲ್ಲಿ ಅವಕಾಶ ನೀಡುತ್ತಿರುವುದನ್ನು ಅನೇಕರು ಪ್ರಶ್ನಿಸಿದ್ದರು. ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಇದೀಗ ಬಿಸಿಸಿಐ ಹರ್ಷಲ್ ಗಿಬ್ಸ್ ಅವರನ್ನು ತಂಡದಿಂದ ಕೈ ಬಿಟ್ಟಿದೆ.
ಭಾರತ ದಿಗ್ಗಜರ ತಂಡ : ಸೌರವ್ ಗಂಗೂಲಿ (ನಾಯಕ), ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಸುಬ್ರಮಣ್ಯಂ ಬದ್ರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಜಾ, ಅಶೋಕ್ ದಿಂಡಾ, ಪ್ರಗ್ಯಾನ್ ಓಜಾ, ಅಜಯ್ ಜಡೇಜಾ, ಆರ್‌ಪಿ ಸಿಂಗ್, ಜೋಗಿಂದರ್ ಶರ್ಮಾ, ರೀತೀಂದರ್ ಸಿಂಗ್ ಸೋಧಿ.
ವಿಶ್ವ ದಿಗ್ಗಜರ ತಂಡ : ಇಯಾನ್ ಮೊರ್ಗನ್ (ನಾಯಕ), ಲೆಂಡ್ಲ್ ಸಿಮನ್ಸ್, ಶೇನ್ ವಾಟ್ಸನ್, ಜಾಕ್ ಕಾಲಿಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಿಯರ್, ನಾಥನ್ ಮೆಕಲಮ್, ಜಾಂಟಿ ರೋಡ್ಸ್, ಮುತ್ತಯ್ಯ ಮುರಳೀಧರನ್, ಡೇಲ್ ಸ್ಟೇಯ್ನ್, ಹ್ಯಾಮಿಲ್ಟನ್ ಮಸಕಡ್ಜಾ, ಅಸ್ಗರ್ ಅಫ್ಘಾನ್, ಮಿಚೆಲ್ ಜಾನ್ಸನ್, ಬ್ರೆಟ್ ಲೀ, ಕೆವಿನ್ ಒಬ್ರಿಯನ್, ದಿನೇಶ್ ರಾಮ್ದಿನ್.
Published On - 12:23 pm, Sun, 14 August 22