ಅರ್ಧಶತಕದ ಬಳಿಕ 26 ಎಸೆತಗಳಲ್ಲಿ ಶತಕ ಪೂರೈಸಿದ ಯುಎಸ್ಎ ಬ್ಯಾಟ್ಸ್‌ಮನ್
ICC Men Cricket World Cup League 2: ವಿಶೇಷ ಎಂದರೆ ಇದು ಜೋನ್ಸ್ ಅವರ ವೃತ್ತಿಜೀವನದ ಮೊದಲ ಶತಕವಾಗಿದೆ. ಈ ಶತಕದ ಇನ್ನಿಂಗ್ಸ್‌ನ ನೆರವಿನಿಂದ ಯುಎಸ್ಎ ನಿಗದಿತ 50 ಓವರ್‌ನಲ್ಲಿ 8 ವಿಕೆಟ್‌ಗೆ 295 ರನ್ ಗಳಿಸಿತು.
ಐಸಿಸಿ ಪುರುಷರ ಕ್ರಿಕೆಟ್ ವರ್ಲ್ಡ್ ಲೀಗ್-2 ರ ಪಂದ್ಯದಲ್ಲಿ USA ಬ್ಯಾಟ್ಸ್‌ಮನ್ ಆರೋನ್ ಜೋನ್ಸ್ ಸ್ಕಾಟ್ಲೆಂಡ್ ವಿರುದ್ದ ಸ್ಪೋಟಕ ಶತಕ ಸಿಡಿಸಿ ಮೈದಾನದಲ್ಲಿ ಸಂಚಲನ ಸೃಷ್ಟಿಸಿದರು. ಮೊದಲು ಬ್ಯಾಟ್ ಮಾಡಿದ ಅಮೇರಿಕ ತಂಡದ ಪರ ಜೋನ್ಸ್ 50 ಎಸೆತಗಳಲ್ಲಿ 56 ರನ್ ಗಳಿಸಿದರು. ಅರ್ಧಶತಕದ ಬಳಿಕ ಬ್ಯಾಟಿಂಗ್ ವರಸೆ ಬದಲಿಸಿದ ಜೋನ್ಸ್ ಸಿಡಿಲಬ್ಬರವನ್ನು ಶುರು ಮಾಡಿದರು.
ಪರಿಣಾಮ ಮುಂದಿನ 26 ಎಸೆತಗಳಲ್ಲಿ ತಮ್ಮ ಮೊದಲ ಶತಕವನ್ನು ಪೂರ್ಣಗೊಳಿಸಿದರು. 87 ಎಸೆತಗಳಲ್ಲಿ ಅಜೇಯ 123 ರನ್ ಬಾರಿಸಿದ ಜೋನ್ಸ್ 9 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಸಿಡಿಸಿದರು. ವಿಶೇಷ ಎಂದರೆ ಇದು ಜೋನ್ಸ್ ಅವರ ವೃತ್ತಿಜೀವನದ ಮೊದಲ ಶತಕವಾಗಿದೆ. ಈ ಶತಕದ ಇನ್ನಿಂಗ್ಸ್‌ನ ನೆರವಿನಿಂದ ಯುಎಸ್ಎ ನಿಗದಿತ 50 ಓವರ್‌ನಲ್ಲಿ 8 ವಿಕೆಟ್‌ಗೆ 295 ರನ್ ಗಳಿಸಿತು.
296 ರನ್‌ಗಳ ಗುರಿಯನ್ನು ಬೆನ್ನತ್ತಿದ ಸ್ಕಾಟ್ಲೆಂಡ್ ಪರ ಮೆಕ್‌ಲಿಯೋಡ್ (117) ಸಿಡಿಲಬ್ಬರದ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಇವರಲ್ಲದೆ ಕ್ರೇಗ್ ವಾಲೇಸ್ 45 ರನ್ ಹಾಗೂ ನಾಯಕ ಮ್ಯಾಥ್ಯೂ ಕ್ರಾಸ್ 40 ರನ್ ಗಳಿಸಿದರು. ಸ್ಕಾಟ್ಲೆಂಡ್ ಆಟಗಾರರ ಈ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದಾಗಿ 14 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 301 ರನ್ ಗಳಿಸಿ ಸ್ಕಾಟ್ಲೆಂಡ್ ಭರ್ಜರಿ ಜಯ ಸಾಧಿಸಿತು.