
ಕಳೆದ ನಾಲ್ಕು ತಿಂಗಳುಗಳಿಂದ ಸ್ಪರ್ಧಾತ್ಮಕ ಪಂದ್ಯಗಳನ್ನು ಆಡದ ಆಟಗಾರನನ್ನು ನೇರವಾಗಿ ಅಂತರರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವುದು ಎಷ್ಟು ತಾರ್ಕಿಕ? ಬಿಸಿಸಿಐ (BCCI) ಇತ್ತೀಚೆಗೆ ಪ್ರಕಟಿಸಿದ ಭಾರತೀಯ ಟಿ20 ತಂಡದಲ್ಲಿ ವೇಗಿ ಹರ್ಷಿತ್ ರಾಣಾ ಅವರ ಸೇರ್ಪಡೆ ಈ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಏಕೆಂದರೆ ಹರ್ಷಿತ್ ರಾಣಾ ಕೊನೆಯ ಬಾರಿ ಕಣಕ್ಕಿಳಿದದ್ದು ಫೆಬ್ರವರಿ ತಿಂಗಳಲ್ಲಿ. ಇದಾದ ಬಳಿಕ ಅವರು ಒಂದೇ ಒಂದು ಪಂದ್ಯವಾಡಿಲ್ಲ.
ಹರ್ಷಿತ್ ರಾಣಾ ಫೆಬ್ರವರಿಯಲ್ಲಿ ನಡೆದ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದರು. ಆ ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿ ಸುದೀರ್ಘ ಕಾಲ ಕ್ರಿಕೆಟ್‌ನಿಂದ ದೂರು ಉಳಿದಿದ್ದರು. ಇದರ ಪರಿಣಾಮವಾಗಿ ಅವರು ಇಡೀ ಟಿ20 ವಿಶ್ವಕಪ್ ಮತ್ತು ಐಪಿಎಲ್ 2026 ಹೊರಗುಳಿಯಬೇಕಾಯಿತು.
ಯಾವುದೇ ಒಬ್ಬ ಆಟಗಾರ ತಂಡಕ್ಕೆ ಮರಳಬೇಕಾದರೆ ಕನಿಷ್ಠ ಪಕ್ಷ ದೇಶಿ ಕ್ರಿಕೆಟ್ ಅಥವಾ ಯಾವುದೇ ಲೀಗ್ ಪಂದ್ಯಗಳಲ್ಲಿ ತನ್ನ ಫಿಟ್‌ನೆಸ್ ಮತ್ತು ಲಯವನ್ನು ಸಾಬೀತುಪಡಿಸಬೇಕು. ಆದರೆ, ರಾಣಾ ಅವರ ವಿಷಯದಲ್ಲಿ ಈ ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಕೇವಲ ಎನ್‌ಸಿಎ ಫಿಟ್‌ನೆಸ್ ಸರ್ಟಿಫಿಕೇಟ್ ಆಧಾರದ ಮೇಲೆ ಅವರನ್ನು ನೇರವಾಗಿ ಆಯ್ಕೆ ಮಾಡಿರುವುದು ಇತರೆ ಆಟಗಾರರಿಗೆ ಮಾಡಿದ ಅನ್ಯಾಯ ಎನ್ನದೇ ವಿಧಿಯಿಲ್ಲ.
ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನ ನೀಡಿ, ನಿರಂತರವಾಗಿ ವಿಕೆಟ್ ಪಡೆದು ಫಿಟ್ ಆಗಿರುವ ಹಲವು ಯುವ ವೇಗದ ಬೌಲರ್‌ಗಳು ದೇಶದಲ್ಲಿದ್ದಾರೆ. ದೇಶಿ ಟೂರ್ನಿಗಳಲ್ಲಿ ಬೆವರಿಳಿಸಿ ಕಾಯುತ್ತಿರುವ ಆಟಗಾರರನ್ನು ಬದಿಗೊತ್ತಿ, ತಿಂಗಳುಗಳಿಂದ ಮೈದಾನಕ್ಕೇ ಇಳಿಯದ ಆಟಗಾರನಿಗೆ ಮಣೆ ಹಾಕಿರುವುದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಇದು ಅತ್ಯುತ್ತಮ ಲಯದಲ್ಲಿರುವ ಇತರ ಬೌಲರ್‌ಗಳ ಆತ್ಮವಿಶ್ವಾಸವನ್ನು ಕುಗ್ಗಿಸುವ ಆಯ್ಕೆಯಾಗಿದೆ.
ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ವೇಗಿ ರಾಸಿಖ್ ಸಲಾಂ ಬರೋಬ್ಬರಿ 18 ವಿಕೆಟ್ ಪಡೆದು ಮಿಂಚಿದ್ದರು. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ತಂಡದ ಯುವ ವೇಗಿ ಅಶೋಕ್ ಶರ್ಮಾ 22 ವಿಕೆಟ್ ಕಬಳಿಸಿದ್ದರು. ಹಾಗೆಯೇ ಕೆಕೆಆರ್ ತಂಡದ ವೇಗಿ ಕಾರ್ತಿಕ್ ತ್ಯಾಗಿ ಕೂಡ 18 ವಿಕೆಟ್ ಉರುಳಿಸಿದ್ದರು.
ಹೀಗೆ ಐಪಿಎಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಲವು ಆಟಗಾರರಿದ್ದರೂ, ಕಳೆದ ನಾಲ್ಕು ತಿಂಗಳುಗಳಿಂದ ಒಂದೇ ಒಂದು ಪಂದ್ಯವಾಡದ ಆಟಗಾರನಿಗೆ ನೇರವಾಗಿ ಟೀಮ್ ಇಂಡಿಯಾದಲ್ಲಿ ಅವಕಾಶ ಕಲ್ಪಿಸುವುದು ಎಷ್ಟು ಸರಿ ಎಂಬುದೇ ಪ್ರಶ್ನೆ.
ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!
ಒಟ್ಟರೆಯಾಗಿಹರ್ಷಿತ್ ರಾಣಾ ಅವರ ಪ್ರತಿಭೆಯ ಬಗ್ಗೆ ಯಾರಿಗೂ ಸಂಶಯವಿಲ್ಲ. ಅವರಲ್ಲಿರುವ ವೇಗ ಮತ್ತು ವಿಕೆಟ್ ಪಡೆಯುವ ಕೌಶಲ್ಯ ಭಾರತೀಯ ಕ್ರಿಕೆಟ್‌ಗೆ ದೊಡ್ಡ ಆಸ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಗಾಯದ ನಂತರ ಯಾವುದೇ ಮ್ಯಾಚ್ ಪ್ರ್ಯಾಕ್ಟೀಸ್ ಇಲ್ಲದೆ ಅವರನ್ನು ನೇರವಾಗಿ ಅಂತರರಾಷ್ಟ್ರೀಯ ಸರಣಿಗೆ ಆಯ್ಕೆ ಮಾಡಿರುವುದು ಬಿಸಿಸಿಐ ಮಾಡಿದ ತಪ್ಪು ಆಯ್ಕೆ ಎಂದೇ ಹೇಳಬಹುದು.