ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದ ಸ್ಫೋಟಕ ದಾಂಡಿಗ ಹೆನ್ರಿಕ್ ಕ್ಲಾಸೆನ್

Heinrich Klaasen Retirement: ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಾಸೆನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಕ್ಲಾಸೆನ್ ಅವರ ನಿರ್ಧಾರ ಅನೇಕರನ್ನು ಆಶ್ಚರ್ಯಗೊಳಿಸಿದೆ. 33 ನೇ ವಯಸ್ಸಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ಉತ್ತಮ ಬೇಡಿಕೆಯಿದ್ದರೂ, ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳಿಗೆ ದೊಡ್ಡ ಆಘಾತವಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್ ನಿವೃತ್ತಿ ಘೋಷಿಸಿದ ಸ್ಫೋಟಕ ದಾಂಡಿಗ ಹೆನ್ರಿಕ್ ಕ್ಲಾಸೆನ್
Heinrich Klaasen

Updated on: Jun 02, 2025 | 4:00 PM

ಕ್ರಿಕೆಟ್​ ಲೋಕಕ್ಕೆ ಒಂದೇ ದಿನ ಎರಡೆರಡು ಆಘಾತ ಎದುರಾಗಿದೆ. ಆಸ್ಟ್ರೇಲಿಯಾದ ಸ್ಫೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಏಕದಿನ ಕ್ರಿಕೆಟ್​ಗೆ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ಇದೀಗ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸೆನ್ (Heinrich Klaasen) ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ತಮ್ಮ ಹೊಡಿಬಡಿ ಆಟದಿಂದಲೇ ವಿಶ್ವ ಕ್ರಿಕೆಟ್​ನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಕ್ಲಾಸೆನ್ ಕೇವಲ 33ನೇ ವಯಸ್ಸಿಗೆ ಈ ನಿರ್ಧಾರ ತೆಗೆದುಕೊಂಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಐಪಿಎಲ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಪರ ಆಡುತ್ತಿರುವ ಕ್ಲಾಸೆನ್ ಅವರನ್ನು ದಾಖಲೆಯ ಮೊತ್ತಕ್ಕೆ ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು. ಈ ಸೀಸನ್ ಅವರಿಗೆ ನಿರೀಕ್ಷಿಸಿದಷ್ಟು ಯಶಸ್ಸು ತಂದುಕೊಡದಿದ್ದರೂ ಕ್ಲಾಸೆನ್​ಗೆ ಟಿ20 ಕ್ರಿಕೆಟ್​ನಲ್ಲಿ ಭಾರಿ ಬೇಡಿಕೆ ಇದೆ. ಹೀಗಾಗಿಯೇ ಅವರು ವಿಶ್ವದ ಇತರ ಟಿ20 ಲೀಗ್​ಗಳಲ್ಲೂ ಆಡುತ್ತಿದ್ದಾರೆ. ಹೀಗಿರುವಾಗ ಅವರು ಇದ್ದಕ್ಕಿದ್ದಂತೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವುದು ಎಲ್ಲರಿಗೂ ಅಚ್ಚರಿಯನ್ನುಂಟುಮಾಡಿದೆ.

2018 ರಲ್ಲಿ ದಕ್ಷಿಣ ಆಫ್ರಿಕಾ ಪರ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಕ್ಲಾಸೆನ್ ಒಂದು ವರ್ಷದ ನಂತರ ಅಂದರೆ 2019 ರಲ್ಲಿ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆದರು. ಆದಾಗ್ಯೂ, ಅವರು ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲಿ ಅನೇಕ ಸಾಧನೆಗಳನ್ನು ಸಾಧಿಸಿದ್ದಾರೆ. ಆದರೆ ಈಗ ಅವರು ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದಾರೆ.

ಕ್ಲಾಸೆನ್ ವೃತ್ತಿ ಜೀವನ

33 ವರ್ಷದ ಕ್ಲಾಸೆನ್ ಆಫ್ರಿಕಾ ತಂಡದ ಪರ 4 ಟೆಸ್ಟ್ ಪಂದ್ಯಗಳಲ್ಲಿ 13 ಸರಾಸರಿಯಲ್ಲಿ 104 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 60 ಏಕದಿನ ಪಂದ್ಯಗಳಲ್ಲಿ 43.69 ಸರಾಸರಿಯಲ್ಲಿ 2141 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕಗಳು ಮತ್ತು 11 ಅರ್ಧಶತಕಗಳು ಸೇರಿವೆ. ಹಾಗೆಯೇ 58 ಟಿ20 ಪಂದ್ಯಗಳಲ್ಲಿ 23.25 ಸರಾಸರಿಯಲ್ಲಿ 5 ಅರ್ಧಶತಕಗಳ ಸಹಿತ 1000 ರನ್ ಬಾರಿಸಿದ್ದಾರೆ.

IPL 2025: 37 ಎಸೆತಗಳಲ್ಲಿ ಶತಕ ಸಿಡಿಸಿದ ಹೆನ್ರಿಕ್ ಕ್ಲಾಸೆನ್

33 ವರ್ಷದ ಕ್ಲಾಸೆನ್ ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದ ಅವರು ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಕೇವಲ 27 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 52 ರನ್ ಗಳಿಸಿದರು. ಅವರು ಕ್ರೀಸ್‌ನಲ್ಲಿದ್ದಷ್ಟು ಕಾಲ ದಕ್ಷಿಣ ಆಫ್ರಿಕಾದ ಗೆಲುವಿನ ಭರವಸೆ ಇತ್ತು. ಆದರೆ ಅವರು ಔಟಾದ ತಕ್ಷಣ ಪಂದ್ಯದ ಇಡೀ ಚಿತ್ರಣವೇ ಬದಲಾಯಿತು. ಅಂತಿಮವಾಗಿ ಟೀಂ ಇಂಡಿಯಾ ಪಂದ್ಯವನ್ನು 6 ರನ್‌ಗಳಿಂದ ಗೆದ್ದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:27 pm, Mon, 2 June 25