
ಐಪಿಎಲ್ 2025 (IPL 2025) ಮುಕ್ತಾಯದ ಹಂತ ತಲುಪಿದೆ. ಇಂದು ನಡೆಯಲಿರುವ ಕ್ವಾಲಿಫೈಯರ್-2 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಅಹಮದಾಬಾದ್‌ನಲ್ಲಿ ಮುಂಬೈ ಇಂಡಿಯನ್ಸ್ (PBKS vs MI) ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಜೂನ್ 3 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸಲಿದೆ. ಆರ್‌ಸಿಬಿಗೆ ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ಅವಕಾಶವಿದೆ. ಅಲ್ಲದೆ ಇದುವರೆಗೆ ನಡೆದಿರುವ ಐಪಿಎಲ್ ಇತಿಹಾಸ ಹಾಗೂ ಅಂಕಿಅಂಶಗಳೆಲ್ಲ ಆರ್‌ಸಿಬಿ ಪರವಾಗಿವೆ. ಏಕೆಂದರೆ ಐಪಿಎಲ್‌ನಲ್ಲಿ ಕ್ವಾಲಿಫೈಯರ್ -1 ಗೆದ್ದ ತಂಡವೇ ಅಧಿಕ ಬಾರಿ ಪ್ರಶಸ್ತಿ ಗೆದ್ದಿದೆ.
ಐಪಿಎಲ್ ಆರಂಭದಲ್ಲಿ, ಅಂದರೆ 2008 ರಿಂದ 2010 ರವರೆಗೆ, ಲೀಗ್‌ನ ನಾಕೌಟ್ ಪಂದ್ಯಗಳನ್ನು ಸೆಮಿಫೈನಲ್ ಸ್ವರೂಪದಲ್ಲಿ ಆಡಲಾಗುತ್ತಿತ್ತು. ಆದಾಗ್ಯೂ, 2011 ರಿಂದ ಅದರ ನಿಯಮಗಳನ್ನು ಬದಲಾಯಿಸಿ ಪ್ಲೇಆಫ್‌ಗಳನ್ನು ಪರಿಚಯಿಸಲಾಯಿತು. ಕ್ವಾಲಿಫೈಯರ್-1, ಕ್ವಾಲಿಫೈಯರ್-2 ಮತ್ತು ಎಲಿಮಿನೇಟರ್ ಪಂದ್ಯಗಳನ್ನು ಜಾರಿಗೆ ತರಲಾಯಿತು. ಅಂದಿನಿಂದ 2024 ರವರೆಗೆ, ಒಟ್ಟು 14 ಸೀಸನ್‌ಗಳು ನಡೆದಿವೆ. ಈ ಪೈಕಿ 11 ಬಾರಿ ಕ್ವಾಲಿಫೈಯರ್ -1 ಗೆದ್ದ ತಂಡವೇ ಫೈನಲ್ ಗೆದ್ದಿದೆ.
ಇತ್ತ ಕ್ವಾಲಿಫೈಯರ್-1 ಗೆದ್ದ ತಂಡವು ಪ್ರಶಸ್ತಿಯನ್ನು ವಶಪಡಿಸಿಕೊಳ್ಳಲು ವಿಫಲವಾದದ್ದು ಕೇವಲ ಮೂರು ಬಾರಿ ಮಾತ್ರ. ಈ ಅಂಕಿ ಅಂಶ ಕೂಡ ಆರ್‌ಸಿಬಿಗೆ ಕೊಂಚ ತಲೆನೋವು ತಂದಿದೆ. ಇದಕ್ಕೆ ಪೂರಕವಾಗಿ ಇದು ಆರ್‌ಸಿಬಿಗೆ ನಾಲ್ಕನೇ ಫೈನಲ್. ಇದಕ್ಕೂ ಮೊದಲು, ತಂಡವು 2009, 2011 ಮತ್ತು 2016 ರಲ್ಲಿ ಫೈನಲ್ ತಲುಪಿತ್ತು. 2016 ರಲ್ಲಿ, ಆರ್‌ಸಿಬಿ ಕ್ವಾಲಿಫೈಯರ್ -1 ಗೆದ್ದ ನಂತರ ಫೈನಲ್ ತಲುಪಿತು, ಆದರೆ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲನುಭವಿಸಿತ್ತು.
ಇದು ಮಾತ್ರವಲ್ಲದೆ 2013, 2016 ಮತ್ತು 2017 ರಲ್ಲಿ, ಕ್ವಾಲಿಫೈಯರ್ -1 ಗೆದ್ದ ತಂಡ ಫೈನಲ್‌ನಲ್ಲಿ ಸೋತಿತ್ತು. ಇತ್ತ ಕ್ವಾಲಿಫೈಯರ್ 2 ಗೆದ್ದ ತಂಡ ಮೂರು ಬಾರಿ ಪ್ರಶಸ್ತಿ ಗೆದ್ದಿದೆ. 2013 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕ್ವಾಲಿಫೈಯರ್-1 ರಲ್ಲಿ ಮುಂಬೈ ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ತಲುಪಿತು. ಆದಾಗ್ಯೂ, ಆ ನಂತರ ಮುಂಬೈ ಕ್ವಾಲಿಫೈಯರ್ -2 ಗೆದ್ದು ಫೈನಲ್ ತಲುಪಿ, ಸಿಎಸ್ಕೆ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಯಿತು. 2017 ರಲ್ಲಿಯೂ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವು ಕ್ವಾಲಿಫೈಯರ್ -1 ರಲ್ಲಿ ಮುಂಬೈ ತಂಡವನ್ನು ಸೋಲಿಸಿತ್ತು. ಆದಾಗ್ಯೂ, ಮುಂಬೈ ತಂಡವು ಕ್ವಾಲಿಫೈಯರ್-2 ಗೆದ್ದುಕೊಂಡಿದಲ್ಲದೆ, ಫೈನಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡವನ್ನು ಒಂದು ರನ್‌ನಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
IPL 2025: ಆರ್‌ಸಿಬಿ ಕಪ್ ಗೆಲ್ಲಬೇಕೆಂದರೆ ಮುಂಬೈ ಫೈನಲ್ಗೇರಲೇಬಾರದು..!
ಹೀಗಾಗಿ ಮುಂಬೈ ತಂಡಕ್ಕೆ ಮತ್ತೊಮ್ಮೆ ಇತಿಹಾಸವನ್ನು ಪುನರಾವರ್ತಿಸುವ ಅವಕಾಶವಿದೆ. ಅಲ್ಲದೆ ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಂಜಾಬ್‌ಗೆ ಮತ್ತೊಂದು ಅವಕಾಶವಿದೆ. ಏಕಂದರೆ 2013 ಮತ್ತು 2017 ರಲ್ಲಿ, ಕ್ವಾಲಿಫೈಯರ್ -1 (ಮುಂಬೈ) ನಲ್ಲಿ ಸೋತ ತಂಡವು ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇತ್ತ 2018 ರಿಂದ 2024 ರವರೆಗೆ ಕ್ವಾಲಿಫೈಯರ್ -1 ಗೆದ್ದ ತಂಡವೇ ಚಾಂಪಿಯನ್ ಆಗಿರುವುದರಿಂದ ಈ ಅಂಕಿ ಅಂಶ ಆರ್‌ಸಿಬಿಗೆ ಮತ್ತಷ್ಟು ಬಲ ತುಂಬಿದೆ. 2018, 2021, 2023 ರಲ್ಲಿ ಕ್ವಾಲಿಫೈಯರ್ 1 ಗೆದ್ದಿದ್ದ ಸಿಎಸ್ಕೆ ಚಾಂಪಿಯನ್ ಆಗಿದ್ದರೆ, 2019 ಮತ್ತು 2020 ರಲ್ಲಿ ಮುಂಬೈ ಈ ಸಾಧನೆ ಮಾಡಿತ್ತು. ಹಾಗೆಯೇ 2022 ರಲ್ಲಿ ಗುಜರಾತ್ ಮತ್ತು 2024 ರಲ್ಲಿ ಕೆಕೆಆರ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Sun, 1 June 25