ನಾನು ಭಾರತದ ಅತ್ಯುತ್ತಮ ಸ್ಪಿನ್ನರ್, ತಂಡಕ್ಕೆ ನನ್ನನ್ನು ಆಯ್ಕೆ ಮಾಡಿ: ಸಾಯಿ ಕಿಶೋರ್
Sai Kishore: ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 39 ಪಂದ್ಯಗಳಲ್ಲಿ 70 ಇನಿಂಗ್ಸ್ ಆಡಿರುವ ಸಾಯಿ ಕಿಶೋರ್ 8630 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 3986 ರನ್ ನೀಡಿ 166 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ಲೀಸ್ಟ್ ಎ ಕ್ರಿಕೆಟ್ನಲ್ಲಿ 54 ಪಂದ್ಯಗಳಿಂದ ಒಟ್ಟು 92 ವಿಕೆಟ್ ಪಡೆದಿದ್ದಾರೆ. ಹೀಗಾಗಿಯೇ ಸಾಯಿ ಕಿಶೋರ್ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ.
ನಾನು ಭಾರತದ ಅತ್ಯುತ್ತಮ ಸ್ಪಿನ್ನರ್, ಟೆಸ್ಟ್ ತಂಡಕ್ಕೆ ನನ್ನನ್ನು ಆಯ್ಕೆ ಮಾಡಿ… ಹೀಗಂದಿರುವುದು ತಮಿಳುನಾಡಿನ ಯುವ ಸ್ಪಿನ್ನರ್ ಸಾಯಿ ಕಿಶೋರ್. ಭಾರತ ತಂಡವು ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಗಾಗಿ ಶೀಘ್ರದಲ್ಲೇ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕೂ ಮುನ್ನ ಸಾಯಿ ಕಿಶೋರ್ ನೀಡಿರುವ ಹೇಳಿಕೆಯು ಇದೀಗ ವೈರಲ್ ಆಗಿದೆ.
ಎಕ್ಸ್ಪ್ರೆಸ್ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಾಯಿ ಕಿಶೋರ್, ನಾನು ದೇಶದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬ ಎಂದು ಭಾವಿಸುತ್ತೇನೆ. ಹೀಗಾಗಿ ನನ್ನನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿ. ಎಲ್ಲಾ ರೀತಿಯಲ್ಲೂ ನಾನಂತು ಸಿದ್ಧನಿದ್ದೇನೆ ಎಂದಿದ್ದಾರೆ.
ಅಷ್ಟೇ ಅಲ್ಲದೆ ನನ್ನನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವುದರಿಂದ ರವೀಂದ್ರ ಜಡೇಜಾ ಜೊತೆ ಆಡುವ ಅವಕಾಶ ದೊರೆಯುತ್ತದೆ. ಅವರೊಂದಿಗೆ ನಾನು ಈವರೆಗೆ ರೆಡ್ ಬಾಲ್ ಕ್ರಿಕೆಟ್ ಆಡಿಲ್ಲ. ಹಾಗಾಗಿ ಅವರೊಂದಿಗೆ ಕಣಕ್ಕಿಳಿಯಲು ಅವಕಾಶ ಸಿಕ್ಕರೆ, ಅವರಿಂದ ಕಲಿಯಲು ಸಹಕಾರಿಯಾಗಲಿದೆ ಎಂದು ಎಡಗೈ ಸ್ಪಿನ್ನರ್ ಸಾಯಿ ಕಿಶೋರ್ ಹೇಳಿದ್ದಾರೆ.
ಅಂದಹಾಗೆ ಸಾಯಿ ಕಿಶೋರ್ ಮುಂಬರುವ ದುಲೀಪ್ ಟ್ರೋಫಿ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಅಭಿಮನ್ಯು ಈಶ್ವರನ್ ಮುನ್ನಡೆಸಲಿರುವ B ಟೀಮ್ನಲ್ಲಿ ತಮಿಳುನಾಡು ಸ್ಪಿನ್ನರ್ ಸ್ಥಾನ ಪಡೆದಿದ್ದಾರೆ. ಇದೇ ತಂಡದಲ್ಲಿ ಸ್ಪಿನ್ನರ್ಗಳಾಗಿ ವಾಷಿಂಗ್ಟನ್ ಸುಂದರ್ ಹಾಗೂ ರಾಹುಲ್ ಚಹರ್ ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ದುಲೀಪ್ ಟ್ರೋಫಿ ಪಂದ್ಯಗಳಲ್ಲಿ ಸಾಯಿ ಕಿಶೋರ್ಗೆ ಅವಕಾಶ ಸಿಗಲಿದೆಯಾ ಎಂಬುದೇ ಪ್ರಶ್ನೆ. ಇನ್ನು ಚಾನ್ಸ್ ಸಿಕ್ಕರೆ ತಮ್ಮ ಹೇಳಿಕೆಯನ್ನು ಸಮರ್ಥಿಸುವಂತಹ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ ಸಾಯಿ ಕಿಶೋರ್.
ಸಾಯಿ ಕಿಶೋರ್ ಈಗಾಗಲೇ ಐಪಿಎಲ್ನಲ್ಲಿ 5 ಸೀಸನ್ ಆಡಿದ್ದಾರೆ. 2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಕೆರಿಯರ್ ಆರಂಭಿಸಿದ್ದ ಸಾಯಿ 2022 ರಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿದ್ದರು. ಇದೀಗ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದಾರೆ.
ಇದನ್ನೂ ಓದಿ: 9 ಭರ್ಜರಿ ಸಿಕ್ಸ್, 13 ಫೋರ್: ದಾಖಲೆಯ ಸೆಂಚುರಿ ಸಿಡಿಸಿದ ಕರುಣ್ ನಾಯರ್
ಇನ್ನು ಐಪಿಎಲ್ನಲ್ಲಿ ಈವರೆಗೆ ಆಡಿರುವುದು ಕೇವಲ 10 ಪಂದ್ಯಗಳನ್ನು ಮಾತ್ರ. ಈ ವೇಳೆ 13 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ ಏಷ್ಯನ್ ಗೇಮ್ಸ್ನಲ್ಲಿ ಟೀಮ್ ಇಂಡಿಯಾ ಪರ 3 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಸಾಯಿ ಕಿಶೋರ್ 4 ವಿಕೆಟ್ ಪಡೆದು ಮಿಂಚಿದ್ದರು. ಇದೀಗ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದನ್ನು ಎದುರು ನೋಡುತ್ತಿದ್ದಾರೆ.