ICC Womens Cricket World Cup: ಕೋವಿಡ್ ರೂಪಾಂತರ: ಮಹಿಳಾ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯ ರದ್ದುಪಡಿಸಿದ ಐಸಿಸಿ
ಕೊರೊನಾ ಹೊಸ ರೂಪಾಂತರಿಯಿಂದಾಗಿ ಜಿಂಬಾಬ್ವೆಯಲ್ಲಿ ನಡೆಯಬೇಕಿದ್ದ ಮಹಿಳಾ ಏಕದಿನ ವಿಶ್ವಕಪ್ನ ಅರ್ಹತಾ ಪಂದ್ಯ ರದ್ದುಪಡಿಸಲಾಗಿದೆ. ಐಸಿಸಿಯ ಈ ನಿರ್ಧಾರದಿಂದ ಶ್ರೇಯಾಂಕಗಳ ಆಧಾರದಿಂದ ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶಕ್ಕೆ ಮುಂದಿನ ಹಂತಕ್ಕೆ ಹೋಗಲು ದಾರಿ ಮಾಡಿಕೊಟ್ಟಿದೆ.
ದಕ್ಷಿಣ ಆಫ್ರಿಕಾದಲ್ಲಿ (South Africa) ಪತ್ತೆಯಾಗಿರುವ ಕೊರೊನಾ (Corona Virus) ಹೊಸ ರೂಪಾಂತರಿಯಿಂದಾಗಿ ಜಿಂಬಾಬ್ವೆಯಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನ (ICC Womens Cricket World Cup) ಅರ್ಹತಾ ಪಂದ್ಯಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ರದ್ದುಪಡಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಐಸಿಸಿ, ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರವನ್ನು ಪತ್ತೆಹಚ್ಚಿದ ನಂತರ ಪ್ರಪಂಚದಾದ್ಯಂತ ಭಯ ಹುಟ್ಟಿಕೊಂಡಿದ್ದು, ಹಲವಾರು ಆಫ್ರಿಕನ್ ದೇಶಗಳಿಂದ ಪ್ರಯಾಣ ನಿರ್ಬಂಧಗಳನ್ನು ಹೇರಲಾಗಿದೆ. ಓಮಿಕ್ರಾನ್ (Omicron) ರೂಪಾಂತರದ ಏರಿಕೆಯ ಹಿನ್ನೆಲೆಯಲ್ಲಿ ಭಾಗವಹಿಸುವ ತಂಡಗಳು ಹೇಗೆ ಹಿಂತಿರುಗುತ್ತವೆ ಎಂಬುದರ ಕುರಿತು ಕಾಳಜಿಯನ್ನು ಆಧರಿಸಿ ಪಂದ್ಯಗಳನ್ನು ನಿಲ್ಲಿಸುವ ನಿರ್ಧಾರವನ್ನು ಐಸಿಸಿ ಮಾಡಿದೆ ಎಂದು ಹೇಳಿದೆ.
ಐಸಿಸಿಯ ಈ ನಿರ್ಧಾರದಿಂದ ಶ್ರೇಯಾಂಕಗಳ ಆಧಾರದಿಂದ ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶಕ್ಕೆ ಮುಂದಿನ ಹಂತಕ್ಕೆ ಹೋಗಲು ದಾರಿ ಮಾಡಿಕೊಟ್ಟಿದೆ. ಈ ಕ್ವಾಲಿಫೈಯರ್ ಡಿಸೆಂಬರ್ 5 ರವರೆಗೆ ನಡೆಯಬೇಕಿತ್ತು. 2022 ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್ ಅಂತಿಮ ಮೂರು ಅರ್ಹತಾ ಪಂದ್ಯಗಳ ಗುಂಪು ಎ ಯಲ್ಲಿ ವೆಸ್ಟ್ ಇಂಡೀಸ್, ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್ ತಂಡಗಳಿದ್ದವು. ಪಪುವಾ ನ್ಯೂಗಿನಿಯಾ ಅರ್ಹತಾ ಪಂದ್ಯಗಳಿಂದ ಹೊರಗುಳಿಯುವುದರೊಂದಿಗೆ, ಗುಂಪು ಎ ಕೇವಲ ನಾಲ್ಕು ತಂಡಗಳನ್ನು ಒಳಗೊಂಡಿತ್ತು. ಗುಂಪು ಬಿ ಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಥೈಲ್ಯಾಂಡ್, ಜಿಂಬಾಬ್ವೆ, ಯುಎಸ್‌ಎ ತಂಡಗಳಿದ್ದವು.
ಶನಿವಾರ ನಿಗದಿಯಾಗಿದ್ದ ಮೂರು ಪಂದ್ಯಗಳ ಪೈಕಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಮತ್ತು ಯುಎಸ್‌ಎ ವಿರುದ್ಧ ಥಾಯ್ಲೆಂಡ್ ಪಂದ್ಯಗಳು ನಿಗದಿಯಂತೆ ಪ್ರಾರಂಭವಾಯಿತು. ಆದರೆ ದಿನದ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ನಡುವೆ ನಡೆಯಬೇಕಾಗಿದ್ದ ಇನ್ನೊಂದು ಪಂದ್ಯ ತಂಡದ ಸಹಾಯಕ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಕಂಡು ಬಂದ ಹಿನ್ನಲೆಯಲ್ಲಿ ನಡೆಯಲಿಲ್ಲ.
‘ತಂಡಗಳ ರ್ಯಾಂಕಿಂಗ್ ಆಧಾರದಲ್ಲಿ ಅರ್ಹತೆಗೆ ಪರಿಗಣಿಸಲಾಗಿದೆ. ಇದರಿಂದಾಗಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಇನ್ನೊಂದು ಹಂತಕ್ಕೆ ಮುನ್ನಡೆಯಲಿವೆ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ತಿಳಿಸಿದೆ.
ಜಗತ್ತನ್ನು ಕೊರೊನಾ ವೈರಸ್ ಬಿಟ್ಟರೂ ಬಿಡದೀ ಮಾಯೆ ಎಂಬಂತೆ ಕಾಡುತ್ತಿದೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಪ್ರಭೇದದ ಭಯ, ಆತಂಕದ ಬಳಿಕ ಈಗ ಓಮಿಕ್ರಾನ್ ಎಂಬ ಹೊಸ ಪ್ರಭೇದದ ಕೊರೊನಾ ವೈರಸ್ ಆತಂಕ ಶುರುವಾಗಿದೆ. ಓಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಬಹಳ ವೇಗವಾಗಿ ಹರಡುತ್ತದೆ. ಜೊತೆಗೆ ಕೊರೊನಾ ಲಸಿಕೆಯು ಈ ವೈರಸ್ ವಿರುದ್ಧ ಪರಿಣಾಮಕಾರಿಯಾಗುತ್ತಾ? ಇಲ್ಲವಾ? ಎಂಬುದು ಇನ್ನೂ ದೃಢಪಟ್ಟಿಲ್ಲ.
ಜಗತ್ತಿನಲ್ಲಿ ಈಗ ಕೊರೊನಾ ವೈರಸ್ ನ ಹೊಸ ಪ್ರಭೇದ ಬಿ.1.1.529 ವೈರಸ್ ಅನ್ನು ಓಮಿಕ್ರಾನ್ ಎಂದು ವಿಶ್ವ ಆರೋಗ್ಯ ಸಂಸ್ಥೆ ನಾಮಕರಣ ಮಾಡಿದೆ. ಈ ಹೊಸ ಪ್ರಭೇದದ ವೈರಸ್ ಈಗಾಗಲೇ ಜಗತ್ತಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ದಕ್ಷಿಣ ಆಫ್ರಿಕಾದಿಂದ ಹಿಡಿದು ಯುರೋಪ್ವರೆಗೆ, ಯುರೋಪ್ನಿಂದ ಹಿಡಿದು ಅಮೆರಿಕಾ, ಭಾರತದವರೆಗೆ ಎಲ್ಲ ರಾಷ್ಟ್ರಗಳು ಹೊಸ ಪ್ರಭೇದದ ಓಮಿಕ್ರಾನ್ ಪ್ರಭೇದದ ವೈರಸ್ ಬಗ್ಗೆ ಕೇಳಿ ನಡುಗಿ ಹೋಗಿವೆ.
Axar Patel: ಮೂರನೇ ದಿನದಾಟದ ಬಳಿಕ ವಿಶೇಷ ಮಾಹಿತಿ ಹಂಚಿಕೊಂಡ ದಾಖಲೆ ವೀರ ಅಕ್ಷರ್ ಪಟೇಲ್
India vs New Zealand: ರೋಚಕ ಘಟ್ಟಕ್ಕೆ ತಲುಪುತ್ತಿದೆ ಕಾನ್ಪುರ ಟೆಸ್ಟ್: ಕುತೂಹಲ ಕೆರಳಿಸಿದೆ 4ನೇ ದಿನದಾಟ
(ICC announced Womens Cricket World Cup Qualifier 2021 has been called off after new Covid-19 variant emerges)