India vs New Zealand: ರೋಚಕ ಘಟ್ಟಕ್ಕೆ ತಲುಪುತ್ತಿದೆ ಕಾನ್ಪುರ ಟೆಸ್ಟ್: ಕುತೂಹಲ ಕೆರಳಿಸಿದೆ 4ನೇ ದಿನದಾಟ
Axar Patel: ಭೋಜನ ವಿರಾಮದ ಬಳಿಕ ಶುರುವಾಗಿದ್ದು ಅಕ್ಷರ್ ಪಟೇಲ್ ಸ್ಪಿನ್ ಮೋಡಿ. ನ್ಯೂಜಿಲೆಂಡ್ ತಂಡದ ಪ್ರಮುಖ ಐದು ವಿಕೆಟ್‌ಗಳನ್ನು ಕಿತ್ತು ಭಾರತ ತಂಡದ ಕಮ್‌ಬ್ಯಾಕ್‌ಗೆ ಅಕ್ಷರ್ ಕಾರಣವಾದರು. ಟೀಮ್ ಇಂಡಿಯಾ ಒಟ್ಟಾರೆ 63 ರನ್ಗಳ ಮುನ್ನಡೆಯಲ್ಲಿದೆ.
ಕಾನ್ಪುರದ (Kanpur Test) ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ತಲುಪುತ್ತಿದೆ. ಈಗಾಗಲೇ ಭಾರತ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು ಅಲ್ಪ ಮುನ್ನಡೆಯಲ್ಲಿದೆ. ಆಟ ಇನ್ನೂ ಎರಡು ದಿನಗಳ ಕಾಲ ಬಾಕಿ ಇರುವ ಕಾರಣ ರಹಾನೆ (Ajinkya Rahane) ಪಡೆ ಬೃಹತ್ ಮುನ್ನಡೆ ಪಡೆಯುವತ್ತ ಚಿತ್ತ ನೆಟ್ಟಿದೆ. ಇದಕ್ಕಾಗಿ ಟೀಮ್ ಇಂಡಿಯಾ (Team India) ಇಂದು ಕೊಂಚ ಬಿರುಸಿನ ಬ್ಯಾಟಿಂಗ್ ನಡೆಸಬೇಕಿದೆ. ದಿನದಾಟದ ಕಡೇ ಹಂತದಲ್ಲಿ ಎರಡನೇ ಸರದಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಆರಂಭಿಕ ಆಘಾತ ಎದುರಿಸಿದೆ. 1 ರನ್ ಗಳಿಸಿದ್ದ ಶುಭ್ಮನ್ ಗಿಲ್ (Shubman Gill) ಔಟ್ ಆಗಿದ್ದು ಒಟ್ಟಾರೆ 63 ರನ್ಗಳ ಮುನ್ನಡೆಯಲ್ಲಿದೆ.
ಇದಕ್ಕೂ ಮುನ್ನ ಭಾರತವನ್ನು 345 ರನ್ಗೆ ಆಲೌಟ್ ಮಾಡಿ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ್ದ ನ್ಯೂಜಿಲೆಂಡ್ ತಂಡ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 129 ರನ್ ಪೇರಿಸಿತ್ತು. ಮೂರನೇ ದಿನದಾಟದಲ್ಲಿ ಆರಂಭಿಕರ ಅಬ್ಬರದ ನಡುವೆಯೂ ಭಾರತದ ಬೌಲರ್‌ಗಳು ಪಾರಮ್ಯ ಸಾಧಿಸಲು ಯಶಸ್ವಿಯಾದರು. ವಿಲ್ ಯಂಗ್ (89) ಅವರನ್ನು ಔಟ್ ಮಾಡುವಲ್ಲಿ ಭಾರತ ತಂಡದ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಯಶಸ್ವಿಯಾದರು.
ಬಳಿಕ ಭೋಜನ ವಿರಾಮಕ್ಕೂ ಮುನ್ನ ಕಿವೀಸ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ (18) ಅವರನ್ನು ವೇಗಿ ಉಮೇಶ್ ಯಾದವ್ ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರು. ಭೋಜನ ವಿರಾಮದ ಬಳಿಕ ಶುರುವಾಗಿದ್ದು ಅಕ್ಷರ್ ಪಟೇಲ್ ಸ್ಪಿನ್ ಮೋಡಿ. ರಾಸ್ ಟೇಲರ್(11), ಹೆನ್ರಿ ನಿಕೋಲ್ಸ್(2), ಟಾಮ್ ಲೇಥಮ್(95), ಟಾಮ್ ಬ್ಲಂಡೆಲ್(13) ಹಾಗೂ ಟಿಮ್ ಸೌಥೀ(5) ಅವರ ಪ್ರಮುಖ ಐದು ವಿಕೆಟ್‌ಗಳನ್ನು ಕಿತ್ತು ಭಾರತ ತಂಡದ ಕಮ್‌ಬ್ಯಾಕ್‌ಗೆ ಅಕ್ಷರ್ ಕಾರಣವಾದರು.
ನಂತರ ರವಿಂದ್ರ ಜಡೇಜಾ ಅವರು ರಚಿನ್ ರವೀಂದ್ರ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಂತಿಮವಾಗಿ ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 296 ರನ್ಗೆ ಸರ್ವಪತನ ಕಂಡಿತು. 49 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ದಿನದಾಟದ ಅಂತ್ಯಕ್ಕೆ 1 ವಿಕೆಟ್‌ಗೆ 14 ರನ್ ಪೇರಿಸಿದ್ದು, ಒಟ್ಟಾರೆ 63 ರನ್ ಮುನ್ನಡೆ ಸಾಧಿಸಿದೆ. ಮಯಾಂಕ್ ಅಗರ್ವಾಲ್ ಹಾಗೂ ಚೇತೇಶ್ವರ್ ಪೂಜಾರ ಇಂದು ಬ್ಯಾಟಿಂಗ್ ಮುಂದುವರೆಸಲಿದ್ದಾರೆ.
ಅಕ್ಷರ್ ಸಾಧನೆ:
ಗುಜರಾತ್ ಆಟಗಾರ ಅಕ್ಷರ್ ಪಟೇಲ್‌ಗೆ ಇದು ಕೇವಲ ನಾಲ್ಕನೇ ಟೆಸ್ಟ್ ಮಾತ್ರ. ಆದರೆ ಅವರು ಐದನೇ ಬಾರಿ ವಿಕೆಟ್‌ಗಳ ಐದರ ಗೊಂಚಲು ಗಳಿಸಿದ ಸಾಧನೆ ಮಾಡಿದರು. ಕಳೆದ ಫೆಬ್ರವರಿಯಲ್ಲಿ ಚೆನ್ನೈನಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್‌ನಲ್ಲಿ ಅವರು ಪದಾರ್ಪಣೆ ಮಾಡಿದ್ದರು. ಆ ಸರಣಿಯ ಮೂರು ಪಂದ್ಯಗಳಲ್ಲಿ ಅವರು ಒಟ್ಟು 27 ವಿಕೆಟ್ ಗಳಿಸಿದ್ದರು. ಅದರಲ್ಲಿ ನಾಲ್ಕು ಬಾರಿ ಐದು ವಿಕೆಟ್ ಗಳಿಸಿದ ಸಾಧನೆ ಮಾಡಿದ್ದರು.
3ನೇ ದಿನದಾಟದ ಅಂತ್ಯಕ್ಕೆ ಸ್ಕೋರ್:
ಭಾರತ: ಮೊದಲ ಇನ್ನಿಂಗ್ಸ್ 345 ರನ್ ಮತ್ತು 2ನೇ ಇನ್ನಿಂಗ್ಸ್ನಲ್ಲಿ 5 ಓವರ್‌ಗೆ 14 ರನ್ 1 ವಿಕೆಟ್ (ಮಯಾಂಕ್ ಅಗರ್ವಾಲ್ 4*, ಚೇತೇಶ್ವರ ಪೂಜಾರ 9*.
ನ್ಯೂಜಿಲೆಂಡ್: 142.3 ಓವರ್‌ಗಳಲ್ಲಿ 296 (ಟಾಮ್ ಲಾಥಮ್ 95, ವಿಲ್ ಯಂಗ್ 89, ಅಕ್ಷರ್ ಪಟೇಲ್ 62ಕ್ಕೆ 5, ಆರ್.ಅಶ್ವಿನ್ 82ಕ್ಕೆ 3.
IPL 2022: RCB ಈ ನಾಲ್ವರನ್ನು ಉಳಿಸಿಕೊಳ್ಳಬೇಕೆಂದ ಮಾಜಿ ಆರ್ಸಿಬಿ ನಾಯಕ
(Axar Patel continued his golden run in favourable home conditions India got a 63-run lead)
Published On - 7:17 am, Sun, 28 November 21