Pakistan
ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಂದ್ಯವಾಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೆಲ ಷರತ್ತುಗಳನ್ನು ಮುಂದಿಟ್ಟಿದ್ದರು. ಈ ಬೇಡಿಕೆಗಳಲ್ಲಿ ಕೆಲವೊಂದನ್ನು ಐಸಿಸಿ ತಿರಸ್ಕರಿಸಿದೆ. ಅಂದರೆ ಐಸಿಸಿ ಅಡಿಯಲ್ಲಿ ಬರದ ವಿಷಯಗಳ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಇದಾಗ್ಯೂ ಕೆಲ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
ಪಿಸಿಬಿಯ ಬೇಡಿಕೆಗಳೇನು?
- ಆದಾಯ ಹೆಚ್ಚಳ: ಐಸಿಸಿಯಿಂದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಆದಾಯವನ್ನು ಹೆಚ್ಚಿಸಬೇಕೆಂದು ಪಿಸಿಬಿ ಬೇಡಿಕೆಯಿಟ್ಟಿದೆ. ಈ ಬೇಡಿಕೆಗೆ ಸಮ್ಮತಿಸುವುದಾದರೆ ಮಾತ್ರ ಭಾರತದ ವಿರುದ್ಧ ಕಣಕ್ಕಿಳಿಯುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ.
- ದ್ವಿಪಕ್ಷೀಯ ಸರಣಿ: ಭಾರತ ಮತ್ತು ಪಾಕಿಸ್ತಾನ್ ನಡುವಣ ದ್ವಿಪಕ್ಷೀಯ ಸರಣಿಯನ್ನು ಮತ್ತೆ ಆರಂಭಿಸಬೇಕೆಂದು ಪಿಸಿಬಿ ಆಗ್ರಹಿಸಿದೆ. ಇದಕ್ಕಾಗಿ ಐಸಿಸಿ ಮುಖ್ಯ ಪಾತ್ರವಹಿಸಬೇಕು. ಈ ಮೂಲಕ ಭಾರತ ಮತ್ತು ಪಾಕಿಸ್ತಾನ್ ನಡುವಣ ಸರಣಿಯನ್ನು ಪುನಃಸ್ಥಾಪಿಸುವ ಭರವಸೆ ನೀಡಬೇಕೆಂದು ಪಿಸಿಬಿ ಆಗ್ರಹಿಸಿದೆ.
- ಹ್ಯಾಂಡ್ಶೇಕ್: ಕ್ರೀಡಾ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು. ಪಂದ್ಯಗಳ ವೇಳೆ ಹ್ಯಾಂಡ್ಶೇಕ್ ಪ್ರೋಟೋಕಾಲ್ ಜಾರಿ ಮಾಡಬೇಕು. ಈ ಪ್ರೊಟೋಕಾಲ್ ಪ್ರಕಾರ ಭಾರತ ಮತ್ತು ಪಾಕಿಸ್ತಾನ್ ಆಟಗಾರರು ಹ್ಯಾಂಡ್ಶೇಕ್ ಮಾಡುವುದನ್ನು ಕಡ್ಡಾಯ ಮಾಡಬೇಕೆಂದು ಪಿಸಿಬಿ ಬೇಡಿಕೆಯಿಟ್ಟಿದೆ.
- ತ್ರಿಕೋನ ಸರಣಿ: ಭಾರತ, ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ಒಳಗೊಂಡಂತೆ ತ್ರಿಕೋನ ಸರಣಿಯನ್ನು ಆಯೋಜಿಸಲು ಅನುವು ಮಾಡಿಕೊಡಬೇಕೆಂದು ಪಿಸಿಬಿ ಆಗ್ರಹಿಸಿದೆ.
- ಬಾಂಗ್ಲಾದೇಶ್ ಪ್ರವಾಸ: ಭಾರತ ತಂಡವು 2026 ರ ನಂತರ ಬಾಂಗ್ಲಾದೇಶ್ ಪ್ರವಾಸ ಮಾಡಬೇಕೆಂದು ಪಿಸಿಬಿ ಹಾಗೂ ಬಿಸಿಬಿ ಆಗ್ರಹಿಸಿದೆ.
- ಬಾಂಗ್ಲಾದೇಶ್ಗೆ ದಂಡ ವಿಧಿಸಬಾರದು: ಟಿ20 ವಿಶ್ವಕಪ್ನಿಂದ ಹಿಂದೆ ಸರಿದಿರುವ ಬಾಂಗ್ಲಾದೇಶ್ ಮೇಲೆ ಯಾವುದೇ ನಿರ್ಬಂಧ ಹೇರಬಾರದು. ಹಾಗೆಯೇ ಯಾವುದೇ ದಂಡ ವಿಧಿಸಬಾರದು ಎಂದು ಪಿಸಿಬಿ ಐಸಿಸಿಯನ್ನು ಆಗ್ರಹಿಸಿದೆ.
- ಐಸಿಸಿ ಟೂರ್ನಿ ಆತಿಥ್ಯದ ಹಕ್ಕು: ಕಳೆದ ವರ್ಷದ ಮಹಿಳಾ ಟಿ 20 ವಿಶ್ವಕಪ್ ಅನ್ನು ಬಾಂಗ್ಲಾದೇಶದಿಂದ ದುಬೈಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಐಸಿಸಿ ಬಾಂಗ್ಲಾದೇಶಕ್ಕೆ ಪರಿಹಾರವಾಗಿ ಬೇರೊಂದು ಪಂದ್ಯಾವಳಿಯ ಆತಿಥ್ಯ ನೀಡಬೇಕು ಎಂದು ಪಿಸಿಬಿ-ಬಿಸಿಬಿ ಆಗ್ರಹಿಸಿದೆ.
ಮೂರು ಬೇಡಿಕೆಗಳು ರಿಜೆಕ್ಟ್:
ಪ್ರಸ್ತುತ ಮಾಹಿತಿ ಪ್ರಕಾರ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಿಟ್ಟ ಬೇಡಿಕೆಗಳಲ್ಲಿ ಮೂರನ್ನು ತ್ರಿಪಕ್ಷೀಯ ಸಭೆಯಲ್ಲೇ ತಿರಸ್ಕರಿಸಿದೆ. ಇಲ್ಲಿ ರಿಜೆಕ್ಟ್ ಆದ ಬೇಡಿಕೆಗಳಾವುವು ಎಂದು ನೋಡುವುದಾದರೆ…
- ದ್ವಿಪಕ್ಷೀಯ ಸರಣಿ: ಭಾರತ ಮತ್ತು ಪಾಕಿಸ್ತಾನ್ ನಡುವಣ ದ್ವಿಪಕ್ಷೀಯ ಸರಣಿಯನ್ನು ಮತ್ತೆ ಆರಂಭಿಸಬೇಕೆಂಬ ಪಾಕ್ ಕ್ರಿಕೆಟ್ ಮಂಡಳಿಯ ಕೋರಿಕೆಯನ್ನು ಐಸಿಸಿ ತಿರಸ್ಕರಿಸಿದೆ. ಈ ಎರಡು ದೇಶಗಳ ವಿಚಾರ. ಉಭಯ ದೇಶಗಳ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿದ್ದು, ಇದರಲ್ಲಿ ಐಸಿಸಿಗೆ ಯಾವುದೇ ಅಧಿಕಾರವಿಲ್ಲ ಎಂದು ತಿಳಿಸಿದೆ.
- ಬಾಂಗ್ಲಾದೇಶ್ ಪ್ರವಾಸ: ಭಾರತ ತಂಡ ಯಾವ ದೇಶದ ವಿರುದ್ಧ ಸರಣಿ ಆಡಬೇಕೆಂದು ನಿರ್ಧರಿಸಲು ಐಸಿಸಿಗೆ ಯಾವುದೇ ಹಕ್ಕಿಲ್ಲ. ಹೀಗಾಗಿ ಇದನ್ನು ಸಹ ಎರಡು ಮಂಡಳಿಗಳು ಕೂತು ಚರ್ಚಿಸಬೇಕಾದ ವಿಷಯ. ಹೀಗಾಗಿ ಈ ವಿಷಯದಲ್ಲೂ ಐಸಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ ಎಂದು ತಿಳಿಸಿದೆ.
- ತ್ರಿಕೋನ ಸರಣಿ: ಭಾರತ, ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ಒಳಗೊಂಡಂತೆ ತ್ರಿಕೋನ ಸರಣಿಯನ್ನು ಆಯೋಜಿಸುವುದು ಮೂರು ಕ್ರಿಕೆಟ್ ಮಂಡಳಿಗೆ ಬಿಟ್ಟ ವಿಷಯ. ಇದರಲ್ಲೂ ನಮಗೆ ಯಾವುದೇ ತೀರ್ಮಾನ ಕೈಗೊಳ್ಳಲಾಗುವುದಿಲ್ಲ ಎಂದು ಐಸಿಸಿ ಹೇಳಿದೆ.
ಇದಾಗ್ಯೂ ಪಂದ್ಯದ ವೇಳೆ ಹ್ಯಾಂಡ್ ಶೇಕ್ ಮಾಡುವುದನ್ನು ಕಡ್ಡಾಯಗೊಳಿಸಲು ಐಸಿಸಿ ನಿರ್ಧರಿಸಿದೆ ಎಂದು ಕೆಲ ವರದಿಯಾಗಿದೆ. ಹಾಗೆಯೇ ಟಿ20 ವಿಶ್ವಕಪ್ನಿಂದ ಹೊರಗುಳಿದಿರುವ ಬಾಂಗ್ಲಾದೇಶ್ಗೆ ಯಾವುದೇ ದಂಡ ವಿಧಿಸುವ ಸಾಧ್ಯತೆಯಿಲ್ಲ.
ಇದನ್ನೂ ಓದಿ: ಸೌತ್ ಆಫ್ರಿಕಾ ದಾಂಡಿಗರ ಆರ್ಭಟ: ವಿಶ್ವಕಪ್‌ನಲ್ಲಿ ವಿಶ್ವ ದಾಖಲೆ
ಅದೇ ರೀತಿ ಐಸಿಸಿ ಟೂರ್ನಿಯ ಆತಿಥ್ಯ ಹಕ್ಕನ್ನು ಬೇಡಿಕೆಯಿಟ್ಟಿರುವ ಕಾರಣ ಮುಂಬರುವ ಅಂಡರ್-19 ವಿಶ್ವಕಪ್ ಬಾಂಗ್ಲಾದೇಶ್ನಲ್ಲಿ ನಡೆಯುವ ಸಾಧ್ಯತೆಯಿದೆ. ಇನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ನ ಆದಾಯ ಹೆಚ್ಚಳ ಬಗ್ಗೆ ಐಸಿಸಿ ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಪಂದ್ಯ ಬಹಿಷ್ಕರಿಸುವ ಬೆದರಿಕೆಯೊಡ್ಡಿದ್ದು ಯಾಕೆ?
ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟಿರುವುದನ್ನು ಖಂಡಿಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿತ್ತು. ಇದೀಗ ಕೆಲ ಬೇಡಿಕೆಗಳನ್ನು ಪೂರೈಸುವ ಭರವಸೆ ನೀಡುವ ಮೂಲಕ ಐಸಿಸಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಫೆ.15 ರಂದು ಭಾರತ ಮತ್ತು ಪಾಕ್ ನಡುವಣ ಪಂದ್ಯ ನಡೆಯುವುದು ಖಚಿತ.